ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿ: ಡಾ.ಬಸವಲಿಂಗ ಸ್ವಾಮೀಜಿ

gajendragad swamiji gadag

ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿ: ಡಾ.ಬಸವಲಿಂಗ ಸ್ವಾಮೀಜಿ

ಗಜೇಂದ್ರಗಡ: ವೇದ ಪರಂಪರೆ, ವೈದಿಕ ಪರಂಪರೆ ಮತ್ತು ಆಚಾರ್ಯ ಪರಂಪರೆಗಳಿಗಿಂತಲೂ ಬಸವ ಪರಂಪರೆ ಶ್ರೇಷ್ಠವಾದುದು. ಎಲ್ಲರ ಬದುಕಿಗೆ ಅನುಗುಣವಾದ ಪರಂಪರೆ ಇದು. ಈ ನಿಟ್ಟಿನಲ್ಲಿ ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿಯಾಗಿದೆ ಎಂದು ಶಿರೂರದ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಪೂಜಾರ ಪ್ಲಾಟ್‌ನಲ್ಲಿರುವ ಕಳಕಯ್ಯ ಸಾಲಿಮಠ ಅವರ ಶರಣಾರ್ಥಿ ಗೃಹ ಪ್ರವೇಶ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ನಡೆದ ಡಾ.ಮಲ್ಲಿಕಾರ್ಜುನ್ ಕುಂಬಾರ ಸಂಪಾದಕತ್ವದ ಅಲಕ್ಷಿತ ವಚನಕಾರರ ವಚನಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ವಿತರಿಸುವ ಮೂಲಕ ಉದ್ಘಾಟಿಸಿದರು.

12ನೇ ಶತಮಾನದ ಅಖಂಡ ವಚನ ಸಂಸ್ಕೃತಿಯಲ್ಲಿ ಯಾವುದೇ ಬೇಧವಿರಲಿಲ್ಲ. ಎಲ್ಲ ಸಮುದಾಯದವರು ಒಂದೇ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡುತ್ತಿದ್ದರು. ಆದರೆ, ಪ್ರಸ್ತುತ ಅಂತಹ ವಾತವಾರಣ ಇಲ್ಲದಿರುವುದು ಶೋಚನೀಯವಾಗಿದೆ.

ವೇದಾಂತ ಪರಂಪರೆ, ಆಚಾರ್ಯ ಪರಂಪರೆ ಮತ್ತು ಬಸವ ಪರಂಪರೆ ಅಥವಾ ಶರಣ ಪರಂಪರೆಯು ಉಳಿದ ಎರಡನ್ನು ಹಿಂದಿಕ್ಕಿ ಎಲ್ಲರ ಬದುಕಿಗೂ ಅನುಗುಣವಾದ ಪರಂಪರೆಯಾಗಿದೆ. ಸಂಸಾರಿಗಳಿಗೆ, ಸನ್ಯಾಸಿಗಳಿಗೆ ಒಂದೇ ಧರ್ಮದ ಅನುಸರಣೆಗೆ ಒತ್ತು ನೀಡುವುದು ಈ ಶರಣಧರ್ಮ. ಇಡೀ ರಾಷ್ಟ್ರಕ್ಕೆ ಸಂವಿಧಾನ ರಾಷ್ಟ್ರಧರ್ಮವಾದರೆ ನಮಗೆ ನಿಮಗೆ ಧರ್ಮವೆಂದರೆ ಅದು ವಚನಧರ್ಮ. ನೈತಿಕತೆಯನ್ನು, ಮೌಲ್ಯಗಳನ್ನು, ಸಿದ್ಧಾಂತವನ್ನು ಅತ್ಯಂತ ಶ್ರೇಷ್ಠಗೊಳಿಸಿದ್ದು ಈ ಶರಣಧರ್ಮ ಎಂದರು.

ಶರಣ ಪರಂಪರೆ ಮಾನವೀಯತೆಗೆ ಒತ್ತು ನೀಡುವುದು. ಅನುಭವ ಮಂಟಪ ಸಮಾಜವಾದದ ರುವಾರಿಯಾದೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವವನ್ನು ತಂದವರು ಬಸವಣ್ಣನವರ, ಈ ಹಿನ್ನಲೆಯಲ್ಲಿ ಜಾತಿ, ಮತ, ಪಂಥ, ಭೇದ ಬದಿಗೊತ್ತಿ ನವಸಮಾಜ ನಿರ್ಮಿಸಿದ್ದಾರೆ. ಅಂತಹ ಕಾಯಕ, ದಾಸೋಹ ಪ್ರಜ್ಞೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಡಾ.ಮಲ್ಲಿಕಾರ್ಜುನ್ ಕುಂಬಾರ ಮಾತನಾಡಿ, ಪ್ರಚಾರಕ್ಕೆ ಬರಲಾರದ ವಚನಕಾರರನ್ನು ಬಹಳಷ್ಟು ಜನರು ಇನ್ನು ಅರಿತಿಲ್ಲ, ಅವರು ಬರೆದಿರುವ ವಚನಗಳು ಸಮಾಜದಲ್ಲಿ ಚರ್ಚೆಗೆ ಬಂದಿಲ್ಲ. ಆ ಹಿನ್ನಲೆಯಲ್ಲಿ ಈ ಪುಸ್ತಕವನ್ನು ರಚನೆ ಮಾಡಲು ಕಾರಣವಾಗಿಯಿತು. ಅಲಕ್ಷಿತ ವಚನಗಳ ಬಗ್ಗೆ ಸಂಶೋಧನೆ ನಡೆಯಬೇಕಿದೆ. ವಚನಕಾರರ ಕೃತಿಗಳಲ್ಲಿ ಜ್ಞಾನವಿದೆ. ಸಮಸ್ಯೆಗಳಿಗೆ ಪರಿಹಾರವಿದೆ. ಪ್ರಶ್ನೆಗಳಿಗೆ ಉತ್ತರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಮೌಲ್ಯಗಳು ಅಡಗಿವೆ. ಇವುಗಳನ್ನು ಪ್ರತಿಯೊಬ್ಬರು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಕಳಕಪ್ಪ ಬಂಡಿ, ಕಳಕಯ್ಯ ಸಾಲಿಮಠ, ಗುರುಲಿಂಗಯ್ಯ ಓದಸೂಮಠ, ಗುರುಸಂಗಯ್ಯ ಹಲಸಿನಮರ, ಬಿ.ಎಸ್. ಶೀಲವಂತರ, ಬಿ.ಸಿ.ಹೊಳಿ, ರವೀಂದ್ರ ಹೊನವಾಡ, ಎಸ್.ಐ.ಪತ್ತಾರ, ರಾಘವೇಂದ್ರ ಹೊಳಗಿ ಸೇರಿದಂತೆ ಇತರರು ಇದ್ದರು.

Exit mobile version