ವಚನ ಸಾಹಿತ್ಯಕ್ಕಾಗಿ ಬೆಂದ ಜೀವ ಹಳಕಟ್ಟಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಮತ


ಸಚಿತ್ರ ವರದಿ ಗುಲಾಬಚಂದ ಜಾಧವ
ಆಲಮಟ್ಟಿ :
ವಚನ ಸಾರ ಜಗತ್ತಿನಾದ್ಯಂತ ಫಸರಿಸಿದ ಡಾ.ಫ.ಗು.ಹಳಕಟ್ಟಿ ವಚನ ಸಾಹಿತ್ಯದ ಧರ್ಮ ಪಾಲಕ. ನಶಿಸಿ ಹೋಗುತ್ತಿದ್ದ ಅಮೂಲ್ಯ ವಚನ ನಿಧಿಯನ್ನು ಪತ್ತೆ ಹಚ್ಚಿ ಅದರ ಸಂರಕ್ಷಣೆಗಾಗಿ ಇಡೀ ತಮ್ಮ ಜೀವವೇ ಹೂತಿಟ್ಟು ಹಗಲಿರುಳು ಶ್ರಮಿಸಿದ ಮಹಾನುಭಾವ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಎಸ್.ವ್ಹಿ.ವ್ಹಿ.ಸಂಸ್ಥೆಯ ಶಾಲಾ,ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಶನಿವಾರ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ 142 ನೇ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸಿದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಆಲಮಟ್ಟಿಯ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ 142 ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಭರತಗೌಡ ಪಾಟೀಲ ಭಾಗಿಯಾಗಿ ಹಳಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.


ಜನರ ಹೃದಯ ಬೆಳಗಿಸುವ ವಚನಗಳು ಜ್ಞಾನ ಸಂಪನ್ನದ ರತ್ನಗಳಾಗಿವೆ. ವಚನಗಳ ಘಮಲು ಸಾಹಿತ್ಯ ರಸಸಾರದ ಆಮಲೆರಿಸುತ್ತವೆ. ಜನಸಾಮಾನ್ಯರ ನಾಡಿ ಮಿಡಿತಗಳಲ್ಲಿ ವಚನಗಳ ಹೊನಲು ಹಳಕಟ್ಟಿಯವರು ನವಿರುಭಾವ ಮೂಡಿಸಿದ್ದಾರೆ. ವಚನ ಶಾಸ್ತ್ರಕ್ಕೆ ನವ ನಾವೀನ್ಯತೆಯ ಚೈತನ್ಯ ಕಲ್ಪಿಸಿಕೊಟ್ಟು ವಚನಗಳ ಜಾಡು ಭಿತ್ತಿದ್ದಾರೆ. ವಚನ ಚರಿತ್ರೆ, ಪರಂಪರೆ ಸ್ವಾದ ನಮಗೆಲ್ಲ ಉಣಬಡಿಸಿರುವ ಶರಣ ಹಳಕಟ್ಟಿಯವರ ವಿದ್ವತ್ಪೂರ್ಣ ಅರಿವಿನ ಫಲದಿಂದ ವಚನಗಳು ಇಂದು ಜೀವಂತಿಕೆಯಲ್ಲಿವೆ ಎಂದರು. ವಚನಗಳಿಗೆ ಹೊಸದಿಕ್ಕು, ದಿಸೆ ತೋರಿಸಿರುವ ಫ.ಗು.ಹಳಕಟ್ಟಿ ವಚನ ತಳಹದಿಯ ದಿಕ್ಸೂಚಿಯಾಗಿದ್ದಾರೆ.ವಚನ ಸಾಹಿತ್ಯ ಲೋಕಕ್ಕೆ ಸ್ಪೂರ್ತಿಯಾಗಿ, ನಕ್ಷತ್ರವಾಗಿ,ಆರಾಧಕರಾಗಿ ಮಿನುಗಿದ್ದಾರೆ.
ವಚನ ಸಾಹಿತ್ಯದ ಉಳವಿಗಾಗಿ ಹಳಕಟ್ಟಿಯವರು ಹುಡುಕಾಡಿದ ಊರುಹಳಿಲ್ಲ. ಅನ್ವೇಷಣೆ ಗೈದ ಸ್ಥಳಗಳಿಲ್ಲ. ತಡಕಾಡಿದ ನಿಮಿಷಗಳಿಲ್ಲ. ಸಮಾಜದ,ಧರ್ಮದ ಒಳತಿಗಾಗಿ ಪರಿತಪ್ಪಿ ಜಗಕ್ಕೆ ವಚನ ಸಾಹಿತ್ಯದ ಬೆಳಕು ಚೆಲ್ಲಿದ್ದಾರೆ. ಬಸವಾದಿ ಶರಣ,ಶರಣೆಯರಿಂದ 12 ನೇ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯ ಕೃಷಿ ಕಾರಣಾಂತರಗಳಿಂದ ಜನತೆಯ ಹತ್ತಿರ ಬಾರದೇ 19ನೇ ಶತಮಾನದ ಕೊನೆಯವರೆಗೂ ಗುಪ್ತವಾಗಿಯೇ ಉಳಿದಿತ್ತು.ಈ ಸಾಹಿತ್ಯ ನಿಧಿಯನ್ನು ಲೋಕದ ಗಮನಕ್ಕೆ ತರುವ ಮಹತ್ಕಾರ್ಯವು 20 ನೇ ಶತಮಾನದ ಹಾದಿಯಲ್ಲಿ ಸಾಗಿತ್ತು. ಜನಮನದಿಂದ ಮರೆಯಾಗುತ್ತಿದ್ದ ವಚನಗಳ ಭಂಡಾರದ ಫಲವತ್ತತೆಯ ವೈವಿಧ್ಯಕ್ಕೆ ಮರು ಜೀವ ನೀಡಿ ಅಪೂರ್ವ ನಿಧಿಯನಿಸಿರುವ ವಚನ ಸಾಹಿತ್ಯ ಬೆಳಕಿಗೆ ತರುವಲ್ಲಿ ಡಾ.ಫ.ಗು. ಹಳಕಟ್ಟಿಯವರು ಅಪಾರ ಶ್ರಮಿಸಿದ್ದಾರೆ. ಅವರ ಕೊಡುಗೆ ಅಮೋಘ. ವಚನ ಮೌಲ್ಯ ಸೂಕ್ಷ್ಮತೆ,ತಾಳ್ಮೆಯಿಂದ ಉಳಿಸಿದ ಕೀತಿ೯ ಅವರಿಗೆ ಸಲ್ಲುತ್ತದೆ ಎಂದರು.
ವಚನಗಳೇ ಫೇವರೆಟ್ ! ವಚನಗಳ ಕಥಾ ಸಂಗ್ರಹ, ಪ್ರಸಂಗದ ಮೇರು ಕಣಜ ಹಳಕಟ್ಟಿಯವರ ಆತ್ಮ ಚರಿತ್ರೆಯ ಯಶೋಗಾಥೆ ವಿರೋಚಿತವಾಗಿದೆ. ಅವರ ಜೀವನ ಕಥಾ ಹಂದರ ಅದ್ಭುತ. ಕಲ್ಪನಾಶಕ್ತಿಯಿಂದ ವಚನಗಳಿಗೆ ಮರು ಜೀವ ಬಂದಿವೆ. ವಚನ ಸಾಹಿತ್ಯದ ಮೌಲ್ಯ ಬಿಂಬಿಸಿದ ಅನನ್ಯ ಪ್ರತಿಭೆ ಹಳಕಟ್ಟಿಯವರ ಪ್ರೇರಣೆಯಿಂದಲೇ ವಚನಗಳ ಪರಿಮಳ ನಾವೆಲ್ಲ ಸವೆಯುತ್ತಲ್ಲಿದ್ದೆವೆ. ವಚನಗಳೇ ಜೀವನ ಸಾಕ್ಷಾತ್ಕಾರಗೊಳಿಸಬಲ್ಲವು. ನಮ್ಮ ಬಾಳ ಬದುಕಿಗೆ ಫೇವರೆಟ್ ಗಳಾಗಿವೆ. ಜನಪದ ಹಾಡು,ವಚನಗಳು ಅಂತರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತವೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನುಡಿದರು.
ಹಡೇ೯ಕರ ಮಂಜಪ್ಪ ಸ್ಮಾರಕ ಭವನದ ಕಾರ್ಯದರ್ಶಿ ವ್ಹಿ.ಎಂ.ಪಟ್ಟಣಶೆಟ್ಟಿ, ಹಳಕಟ್ಟಿಯವರ ಸಾಹಿತ್ಯ ಪ್ರೀತಿ, ಸಾಂಸ್ಕೃತಿಕ ಪ್ರಜ್ಞೆ ,ಸಮಾಜಮುಖಿ ಕಾರ್ಯ ಅಜರಾಮರವಾಗಿವೆ. ಅವರ ತ್ಯಾಗ,ಅವಿರತ ಶ್ರಮದ ಜೀವನ ವಚನ ಪ್ರಿಯರು ಎಂದಿಗೂ ಮರೆಯಲಾರರು. ಕನ್ನಡದ ಪುಣ್ಯ ಪುರುಷ ಡಾ.ಹಳಕಟ್ಟಿಯವರು ನಿಜಕ್ಕೂ ವಚನ ಗುಮ್ಮಟ ಎಂದರು. ಶರಣ ಡಾ.ಫ.ಗು.ಹಳಕಟ್ಟಿ ಹಾಗು ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಮತ್ತು ಕನ್ನಡದ ಜಗದ್ಗುರು ಲಿಂ.ತೋಂಟದ ಸಿದ್ದಲಿಂಗ ಶ್ರೀಗಳವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು. ಹಳಕಟ್ಟಿಯವರ ಜನ್ಮ ದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ಭಾಷಣ ಸ್ಪಧೆ೯ ವಿಜೇತರಿಗೆ ಶಾಸಕರು ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು.
ಶಾಸಕರ ಪುತ್ರ ಭರತಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಹಿರೇಮಠ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ,ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ತನುಜಾ ಪೂಜಾರಿ,ಕಮಲಾಕ್ಷಿ ಹಿರೇಮಠ ಸೇರಿದಂತೆ ಶಾಲಾ,ಕಾಲೇಜು ಸಿಬ್ಬಂದಿ ಇದ್ದರು.

Exit mobile version