ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗುಡುಗಿದ್ದಾರೆ.
ನಗರದಲ್ಲಿ ಇನ್ನಿತರ ಪಕ್ಷಗಳ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ಮಾಡಿದರೆ, ನಾವು ಸುಮ್ಮನೆ ಇರುವುದಿಲ್ಲ. ಬಂಡೆಯ ಎಲ್ಲ ಆಟಗಳನ್ನೂ ನಾವು ಕಂಡಿದ್ದೇವೆ ಎಂದು ಗುಡುಗಿದ್ದಾರೆ.
ನಿಮ್ಮ ಬಳಿ ಬಂಡೆ ಇರಬಹುದು. ಆದರೆ ನಮ್ಮ ಬಳಿ ಡೈನಾಮೈಟ್ ಗಳು ಇವೆ. ಜೈಲಿಗೆ ಹೋದರೂ ಮೆರವಣಿಗೆ, ಬಂದಾಗಲೂ ಮೆರವಣಿಗೆ, ಕುಂತರು, ನಿಂತರೂ ಮೆರವಣಿಗೆ ಮಾಡುವ ನಿಮ್ಮ ಬಗ್ಗೆ ಜನರಿಗೆ ಎಲ್ಲವೂ ತಿಳಿದಿದೆ ಎಂದು ಆರೋಪಿಸಿದ್ದಾರೆ.
ಸಚಿವ ಆರ್.ಅಶೋಕ್ ಮತ್ತು ಅರವಿಂದ ಲಿಂಬಾವಳಿ ನಮ್ಮ ಜೋಡೆತ್ತುಗಳು. ಈ ಜೋಡೆತ್ತುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮುನಿರತ್ನ ಅವರನ್ನು ಗೆಲ್ಲಿಸುತ್ತಾರೆ. ರಾಜರಾಜೇಶ್ವರಿ ನಗರದಲ್ಲಿ ಗೆಲ್ಲುವ ಮೂಲಕ ವಿಶ್ವದಾಖಲೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಜನತೆ ಜಾತಿ ರಾಜಕಾರಣದಿಂದ ರೋಸಿ ಹೋಗಿದ್ದಾರೆ. ಇನ್ನೂ ಮುಂದೆ ಅದು ರಾಜ್ಯದಲ್ಲಿ ನಡೆಯುವುದಿಲ್ಲ. ಹೀಗಾಗಿ ಈ ಬಾರಿ ಜನ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಿದ್ದಾರೆ.
