ಬೆಂಗಳೂರು: ಮುಸ್ಲೀಂ ಬಾಂಧವರು ದಿನಾಂಕ 30-10-2020 ರಂದು ರಾಜ್ಯಾದ್ಯಂತ ಈದ್ ಮೀಲಾದ್ ಹಬ್ಬವನ್ನು ಆಚರಿಸಲಿದ್ದು, ಹಬ್ಬ ಆಚರಣೆಯ ಬಗ್ಗೆ ಸರ್ಕಾರದ ಮಾರ್ಗಸೂಚಿ ಈ ಕೆಳಗಿನಂತಿದೆ.
ಮಾರ್ಗಸೂಚಿಗಳು
- ರಾಜ್ಯಾದ್ಯಂತ ದಿನಾಂಕ 30-10-2020 ರಂದು ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನೆರವೇರಲಿರುವ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ (ಜುಲೂಸ್), ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಮಸೀದಿಗಳಲ್ಲಿ ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್19ರ ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ನೆರವೇರಿಸುವುದು.
- ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್(ಡಿಜೆ) ಬಳಕೆಯನ್ನು ನಿಷೇಧಿಸಲಾಗಿದೆ.
- ಮುಖಗವಸಗಳನ್ನು ಎಲ್ಲರೂ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು.
- 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬದ ಚರಣೆಯನ್ನು ಮಾಡುವುದು.
- ಸ್ಯಾನಿಟೈಸರ್ ಹಾಗೂ ಸೋಪಿನೊಂದಿಗೆ ಕೈತೊಳೆಯಲು ಪ್ರವೇಶ ಧ್ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು. ಕಡ್ಡಾಯವಾಗಿ ವಯಕ್ತಿಕವಾಗಿ ಎಲ್ಲರೂ 6 ಅಡಿ ಅಂತರದ ದೈಹಿಕ ಅಂತರ ಕಾಯ್ದುಕೊಳ್ಳುವುದು.
- ಖಬರಸ್ಥಾನ್ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ.
- ಈ ಕುರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವುದು.
ಈ ಆದೇಶವನ್ನು ಕೋವಿಡ್19 ಸೋಂಕು ಹಿನ್ನೆಲೆಯಲ್ಲಿ ಆಚರಣೆಗಳನ್ನು ನಿರ್ಭಂಧಿಸುವುದಕ್ಕಾಗಿ ಹೊರಡಿಸಲಾಗಿದ್ದು, ಭವಿಷ್ಯದ ಪ್ರಕರಣಗಳಿಗೆ ಪೂರ್ವ ನಿರ್ದೇಶನವಾಗಿರುವುದಿಲ್ಲ. ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿ, ಮುತವಲ್ಲಿ, ಆಡಳಿತಾಧಿಕಾರಿಗಳು ಮೇಲ್ಕಾಣಿಸಿದ ಈದ್ ಮಿಲಾದ್ ಆಚರಣೆ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸಲು ಸೂಕ್ತಕ್ರಮ ಕೈಗೊಳ್ಳುವುದು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯೂ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಸಂಬಂಧಪಟ್ಟ ಎಲ್ಲಾ ಈದ್ಗಾ, ಮಸೀದಿ, ದರ್ಗಾ ಹಾಗೂ ಮತ್ತಿತರ ವಕ್ಫ್ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡುವುದು. ಈ ಆದೇಶವನ್ನು ಎಲ್ಲಾ ವಕ್ಫ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪರಿಪಾಲಿಸಲು ಕ್ರಮ ಜರುಗಿಸುವುದು ಎಂದು ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಆದೇಶಿಸಿದ್ದಾರೆ.
