ಮಳೆರಾಯನ ಅಟ್ಟಹಾಸ – ನಲುಗುತ್ತಿದೆ ಉತ್ತರ ಕರ್ನಾಟಕ ಮಂದಿ!

ಬೆಂಗಳೂರು : ಕರಾವಳಿ ಭಾಗ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ರಾಯಚೂರು, ಕಲಬುರಗಿ, ಬಾಗಲಕೋಟೆ, ಬೀದರ್, ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಮಳೆರಾಯ ರಜೆ ಪಡೆಯದೆ ಸುರಿಯುತ್ತಿದ್ದಾನೆ. ರಸ್ತೆಗಳೆಲ್ಲ ನದಿಗಳಂತಾಗಿವೆ. ತಗ್ಗು ಪ್ರದೇಶದ ಮನೆಗಳೆಲ್ಲ ಜಲಾವೃತಗೊಂಡಿವೆ. ಬೆಂಬಡಿದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಕಲಬುರಗಿಯಲ್ಲಂತೂ ಮಳೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಭೀಮಾ ಹಾಗೂ ಕಾಗಿಣಾ ನದಿಗಳು ಉಕ್ಕಿ ಹರಿಯುತ್ತಿವೆ. ಈಗಾಗಲೇ ಹಲವರು ವಿವಿಧ ಮಳೆರಾಯನ ಅವಾಂತರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಭಾಗದಲ್ಲಿಯೂ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯ ಉದ್ದಕ್ಕೂ ಭಾರಿ ಪ್ರಮಾಣದ ನೀರು ಸಮುದ್ರ ಸೇರಿರುವುದರಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ.

ಬೀದರ್ ನಲ್ಲಿ ಮಳೆರಾಯನ ಆರ್ಭಟಕ್ಕೆ ಜನ ರೋಸಿ ಹೋಗಿದ್ದಾರೆ. ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಲಕ್ಷಾಂತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಯಾದಗಿರಿ – ಸೇಡಂ ಮುಖ್ಯ ರಸ್ತೆ ಸಂಪರ್ಕ ಕಳೆದುಕೊಂಡಿದೆ. ಹೀಗಾಗಿ ಜನ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಬಾಗಲಕೋಟೆಯಲ್ಲಿ ಮಳೆಯ ಅವಾಂತರಕ್ಕೆ ವ್ಯಕ್ತಿಯೊಬ್ಬ ನೀರಿನಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಧಾರವಾಡ, ಬೆಳಗಾವಿಯಲ್ಲಿಯೂ ಕಳೆದ ಎರಡ್ಮೂರು ದನಗಳಿಂದ ಮಳೆರಾಯ ತನ್ನ ಅಟ್ಟಹಾಸ ಮುಂದುವರೆಸಿದ್ದಾನೆ.

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ಮುದ್ದೇಬಿಹಾಳ, ಬಸವನಬಾಗೇವಾಡಿ, ದೇವರಹಿಪ್ಪರಗಿ, ತಾಳಿಕೋಟಿ ಹಾಗೂ ಸಿಂದಗಿ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ. ಸಾವಿರಾರು ಹೆಕ್ಟೆರ್ ಬೆಳೆಗಳು ಜಲಾವೃತಗೊಂಡಿದೆ. ಡೋಣಿ ಮತ್ತು ಭೀಮಾ ನದಿ ಮತ್ತೆ ಉಕ್ಕಿ ಹರಿಯುತ್ತಿವೆ. ಸುಮಾರು 10ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

Exit mobile version