ರಾಮ ಮಂದಿರ: 2 ಸಾವಿರ ಅಡಿ ಕೆಳಗೆ ಇಡಲಾಗುತ್ತಿರುವ ‘ಟೈಮ್ ಕ್ಯಾಪ್ಸುಲ್’ನಲ್ಲಿ ಏನಿರುತ್ತೆ?

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರದ ಭೂಮಿಪೂಜೆ ನಡೆಯಲಿದೆ. ಈ ನಡುವೆ ನಿರ್ಮಾಣದ ನಿವೇಶನದಲ್ಲಿ 2 ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸುಲ್’ ಇಡಲಾಗುವುದು ಎಂದು ಟ್ರಸ್ಟ್ ಹೇಳಿದೆ. ಇದರಲ್ಲಿ ಏನಿರಲಿದೆ? ಅದನ್ನು ಬಹಿರಂಗ ಮಾಡುವರೆ?

ಅಯೋಧ್ಯಾ: ದೇಶದಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಕಳೆದ ವರ್ಷ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ಒಂದು ‘ಅಂತಿಮ’ ಪರಿಹಾರ ನೀಡಿದ ನಂತರ, ಅಲ್ಲಿ ರಾಮ ಮಂದಿರ ನಿರ್ಮಿಸುವ ಕೆಲಸಕ್ಕೆ  ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗೆ ಉಸ್ತುವಾರಿ ನೀಡಲಾಗಿದೆ.

40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಅಡಿಗಲ್ಲಾಗಿ ಇಡಲಾಗುವುದು ಎಂದು ಟ್ರಸ್ಟ್ ಕಳೆದ ವಾರ ಘೋಷಿಸಿತ್ತು. ಪ್ರಧಾನಿಯಿಂದಲೇ ಭೂಮಿಪೂಜೆ ಮಾಡಿಸಲು ಟ್ರಸ್ಟ್ ನಿರ್ಧರಿಸಿತ್ತು. ಅದು ಈಗ ಈಡೇರುತ್ತಿದೆ. ಈಗ 2 ಸಾವಿರ ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್ ಇಡುವ ನಿರ್ಧಾರವನ್ನು ಟ್ರಸ್ಟ್ ಮಾಡಿದೆ.

ಏನಿದು ಟೈಮ್ ಕ್ಯಾಪ್ಸುಲ್?

ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳನ್ನು ಕಾಲಘಟ್ಟದ  ಆಧಾರದಲ್ಲಿ ಬರೆದು, ಇಲ್ಲೇಕೆ ರಾಮ ಮಂದಿರ ನಿರ್ಮಿಸಲಾಗುತ್ತಿದೆ ಎಂಬ ವಿವರವನ್ನೂ ಒಳಗೊಂಡ ಬರಹವನ್ನು ‘ಟೈಮ್ ಕ್ಯಾಪ್ಸುಲ್’ ಹೊಂದಿರಲಿದೆ. ಅದನ್ನು ತಾಮ್ರದ ಪತ್ರದಲ್ಲಿ ಬರೆದು ಮಂದಿರ ನಿವೇಶನದ 2 ಸಾವಿರ ಅಡಿ ಕೆಳಗೆ ಇಡಲಾಗುತ್ತದೆ ಎಂದು ಟ್ರಸ್ಟಿನ ಸದಸ್ಯರಲ್ಲಿ ಒಬ್ಬರಾದ ಕಾಮೇಶ್ವರ್ ಚೌಪಾಲ್ ತಿಳಿಸಿದ್ದಾರೆ. ‘ಮುಂದಿನ ತಲೆಮಾರಿನಲ್ಲಿ ಅಥವಾ ಶತಮಾನಗಳ ನಂತರ ವಿವಾದ ಉಂಟಾದರೆ ಈ  ಟೈಮ್ ಕ್ಯಾಪ್ಸುಲ್ ಸತ್ಯದ ಪರಾಮರ್ಶೆಗೆ ನೆರವಾಗಲಿದೆ’ ಎನ್ನುತ್ತಾರೆ ಚೌಪಾಲ್.

ಒಂದಿಷ್ಟು ಪ್ರಶ್ನೆಗಳು

ಆದರೆ, ಇದು ಮೇಲ್ನೋಟಕ್ಕೆ ಅಪ್ರಾಯೋಗಿಕ ಎನಿಸುತ್ತಿದೆ. ‘ಮುಂದೆ ವಿವಾದ ಆದರೆ’ ಎಂದು ಅವರು ಹೇಳಿದ್ದು ಕೇವಲ ಊಹಾತ್ಮಕ ನೆಲೆಯಲ್ಲಿ. ಹಾಗೆ ಆಯ್ತು ಅಂತಿಟ್ಟುಕೊಂಡರೂ, ಆಗ 2 ಸಾವಿರ ಅಡಿ ‘ಕೆಳಕ್ಕೆ’ ಹೋಗಿ ಸತ್ಯ ದರ್ಶನ ಮಾಡಬೇಕೆ? ಇದರಿಂದ ಮಂದಿರಕ್ಕೆ ಧಕ್ಕೆ ಆಗುವುದಿಲ್ಲವೇ? ಎನ್ನುವ ಪ್ರಶ್ನೆಗಳು ಕೂಡ ಇವರ ಹೇಳಿಕೆಯಿಂದ ಉದ್ಭವವಾಗಿದೆ.

ಈ ಮಾಹಿತಿಯನ್ನು ಬಹಿರಂಗ ಮಾಡುತ್ತಾರೋ ಇಲ್ಲವೋ? ಮತ್ತೆ, ಇವರು ಇಡುತ್ತಿರುವ ಮಾಹಿತಿ ನ್ಯಾಯ ಪ್ರಕ್ರಿಯೆಯ ಮಾನದಂಡದಲ್ಲಿ ಶೇಖರಿಸಿದ್ದಾ? ಏನೇ ಆಗಲಿ ಟೈಮ್ ಕ್ಯಾಪ್ಸುಲ್ ಇಡದೇ ಇದ್ದರೂ ಅದರ ಬುನಾದಿ ಅದೇ ಆಗಿರುತ್ತದೆ ಅಲ್ಲವೇ? ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version