ಸೋಂಕಿತರ ಸಂಖ್ಯೆಯಲ್ಲಿ 4 ನೆ ಸ್ಥಾನದಲ್ಲಿ ಕರ್ನಾಟಕ : ರಿಕವರಿಗಿಂತ ಆಕ್ಟಿವ್ ಕೇಸ್ ಹೆಚ್ಚು

covid-19

corona

ಸೋಂಕಿತರ ಸಂಖ್ಯೆ (ಕೇಸ್ ಲೋಡ್) ಆಧಾರದ ಪಟ್ಟಿಯಲ್ಲಿ ಕರ್ನಾಟಕ ಈಗ ಗುಜರಾತ್ ದಾಟಿ 4ನೆ ಸ್ಥಾನಕ್ಕೆ ಏರಿದೆ. ಗುಣಮುಖರ ಸಂಖ್ಯೆಗಿಂತ (ರಿಕವರಿ) ಸಕ್ರಿಯ ಪ್ರಕರಣಗಳ (ಆಕ್ಟಿವ್ ಕೇಸ್) ಸಂಖ್ಯೆ ಹೆಚ್ಚಿರುವ ಆರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 2,496 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 44.077ಕ್ಕೆ ತಲುಪಿದೆ. ಈ ಮೂಲಕ  ಹೆಚ್ಚು ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ಗುಜರಾತ್ ದಾಟಿ ನಾಲ್ಕನೆ ಸ್ಥಾನಕ್ಕೆ ತಲುಪಿದೆ.

ಟೆಸ್ಟ್ ಸಂಖ್ಯೆ ಹೆಚ್ಚಿಸಿದ್ದರಿಂದ ಸಹಜವಾಗಿಯೇ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇದು ನಿಜವೇ. ಆದರೆ, ರಾಜ್ಯದ ರಿಕವರಿ ರೇಟ್ (ಗುಣಮುಖರ ಸಂಖ್ಯೆ) ಕಡಿಮೆ ಮಟ್ಟದಲ್ಲಿದೆ. ದೇಶದಲ್ಲಿ ಟಾಪ್-3 ಸೋಂಕು ಹೆಚ್ಚಿರುವ ರಾಜ್ಯಗಳು ಸೇರಿ 22 ರಾಜ್ಯಗಳಲ್ಲಿ ಗುಣಮುಖರ ಸಂಖ್ಯೆ ಸಕ್ರಿಯ ಕೇಸ್ಗಳಿಗಿಂತ ಹೆಚ್ಚಿದೆ. ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಗುಣಮುಖರಿಗಿಂತ ಸಕ್ರಿಯ ಕೇಸ್ ಹೆಚ್ಚಿದ್ದು ಅದರಲ್ಲಿ ರಾಜ್ಯವೂ ಒಂದಾಗಿದೆ. ಈ ಕುರಿತಂತೆ ಆರೋಗ್ಯ ಅಥವಾ ವೈದ್ಯಕೀಯ ಶಿಕ್ಷಣ ಸಚಿವರು ಮಾತೇ ಆಡದಿರುವುದು ವಿಚಿತ್ರವಾಗಿದೆ.

ರಾಜ್ಯದಲ್ಲಿ ಮಂಗಳವಾರದ ಅಂತ್ಯದ ಹೊತ್ತಿಗೆ 17,390 ಗುಣಮುಖರಿದ್ದರೆ, 25,389 ಸಕ್ರಿಯ ಕೇಸ್ಗಳಿವೆ. ಈ ತಿಂಗಳ ಮೊದಲ ಎರಡು ವಾರಗಳಲ್ಲಿ 29 ಸಾವಿರ ಕೇಸ್ ದಾಖಲಾಗಿವೆ. ಸೋಂಕಿನ ಬೆಳವಣಿಗೆ ದರ ಶೇ. 7.36 ಇದ್ದು ದೇಶದಲ್ಲೇ ಇದು ಹೆಚ್ಚಿನ ದರವಾಗಿದೆ.

       ಒಂದು ಅನುಕೂಲವಿದೆ

ಟೆಸ್ಟ್ ಸಂಖ್ಯೆ ಜಾಸ್ತಿ ಮಾಡಿರುವುದರಿಂದ ಸೋಂಕಿತರು ಬೇಗನೆ ಪತ್ತೆಯಾಗಿ ಐಸೊಲೇಷನ್ಗೆ ಒಳಗಾಗುವುದರಿಂದ ಸೋಂಕಿನ ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ. ಎರಡು ವಾರಗಳ ಹಿಂದೆ ದೆಹಲಿ ಕೂಡ ರಾಜ್ಯದಂತೆ ದಿನವೂ ಸಾಕಷ್ಟು ಸೋಂಕಿತ ಪ್ರಕರಣಗಳನ್ನು ಕಾಣುತ್ತಿತ್ತು. ನಂತರ ಈಗ ಅಲ್ಲಿ ಸೋಂಕು ಪ್ರಕರಣ ಕಡಿಮೆಯಾಗಿವೆ. ಸಕ್ರಿಯ ಕೇಸ್ಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರಾಜ್ಯದಲ್ಲೂ ಇನ್ನೆರಡು ವಾರಗಳ ನಂತರ ಸೋಂಕಿನ ಪ್ರಕರಣ ಕಡಿಮೆ ಆಗಬಹುದು ಎಂದು ನಿರೀಕ್ಷಿಸಬಹುದು.

Exit mobile version