ಉಗ್ರರಿಂದ ಬಿಜೆಪಿ ನಾಯಕ ವಾಸೀಂ ಹತ್ಯೆ: ತಂದೆ, ಸಹೋದರನೂ ಬಲಿ

ಶ್ರೀನಗರ: ಬುಧವಾರ ರಾತ್ರಿ 9ಕ್ಕೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸೀಂ ಬಾರಿ, ಆತನ ತಂದೆ ಮತ್ತು ಸಹೋದರನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.

ಹೊಸ ಕೇಂದ್ರಾಡಳಿತ ಪ್ರದೇಶದ ಬಂದಿಪೋರ್ ನಲ್ಲಿ ಘಟನೆ ನಡೆದಿದೆ. ರಾತ್ರಿ 9ರ ಸುಮಾರಿಗೆ ಸ್ಥಳೀಯ ಪೊಲೀಸ್ ಠಾಣೆಯ ಸಮೀಪದ ಅಂಗಡಿ ಎದುರು ಕುಳಿತಿದ್ದ ವಾಸೀಂ ಕುಟುಂಬದ ಸದಸ್ಯರ ಮೇಲೆ ಉಗ್ರರು ದಾಳಿ ನಡೆಸಿದರು.
ವಾಸೀಂ, ಅವರ ತಂದೆ ಬಶೀರ್ ಅಹ್ಮದ್, ಸಹೋದರ ಉಮರ್ ಬಶೀರ್ ತಲೆಗೆ ಗುಂಡಿಕ್ಕಿ ಪರಾರಿಯಾದರು. ತಕ್ಷಣ ಬಂದಿಪೋರ್ ಜಿಲ್ಲಾಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಮೂವರೂ ನಿಧನರಾಗಿದ್ದಾರೆ.

ಇದನ್ನು ಭದ್ರತಾ ವೈಫಲ್ಯ ಎನ್ನಲಾಗಿದೆ. ‘ವಾಸೀಂ ಅವರಿಗೆ ಸರಕಾರ ಭದ್ರತೆ ನೀಡಿದ್ದು, ದಾಳಿ ವೇಳೆ ಎಲ್ಲ ಎಂಟೂ ಗಾರ್ಡ್ ಗಳು ಸ್ಥಳದಲ್ಲಿ ಇರಲಿಲ್ಲ. ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಐಜಿಪಿ ವಿನಯಕುಮಾರ್ ಹೇಳಿದ್ದಾರೆ.

‘ರಾತ್ರಿಯೇ ಪ್ರಧಾನಿ ಫೋನ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ’ ಎಂದು ಕೇಂದ್ರ ಮಂತ್ರಿ ಜಿತೇಂದ್ರ ಕುಮಾರ್ ಟ್ವೀಟ್ ಮಾಡಿದ್ದಾರೆ. ಜೆ.ಪಿ.ನಡ್ಡಾ, ರಾಮ್ ಮಾಧವ್, ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿ ಕೃತ್ಯವನ್ನು ಖಂಡಿಸಿದ್ದಾರೆ.

Exit mobile version