ಗಾಂಧಿ ಕುಟುಂಬದ 3 ಟ್ರಸ್ಟ್ ವ್ಯವಹಾರ ತನಿಖೆಗೆ ಆದೇಶಿಸಿದ ಕೇಂದ್ರ ಸರಕಾರ

ನವದೆಹಲಿ: ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್ ವ್ಯವಹಾರಗಳ ಕುರಿತು ತನಿಖೆಗೆ ಕೇಂದ್ರ ಗೃಹ ಇಲಾಖೆ ಬುಧವಾರ ತನಿಖೆಗೆ ಆದೇಶಿಸಿದೆ.

ಗೃಹ ಇಲಾಖೆಯು ಒಂದು ಅಂತರ್-ಸಚಿವರ ಸಮಿತಿ ರಚಿಸಿದ್ದು, ಇದು ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ ಈ ಮೂರು ಸಂಸ್ಥೆಗಳ ವ್ಯವಹಾರಗಳ ತನಿಖೆ ನಡೆಸಲಿದೆ. ಈ ಸಮಿತಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ.

ಆದಾಯ ತೆರಿಗೆ ಮತ್ತು ವಿದೇಶಿ ದೇಣಿಗೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಈ ಮೂರು ಸಂಸ್ಥೆಗಳು ಎದುರಿಸುತ್ತಿದ್ದು ತನಿಖೆಯ ಅಗತ್ಯವಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

1991ರಲ್ಲಿ ಸ್ಥಾಪನೆಯಾದ ರಾಜೀವ್ ಗಾಂಧಿ ಫೌಂಡೇಷನ್ ಮತ್ತು 2002ರಲ್ಲಿ ಸ್ಥಾಪನೆಯಾದ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇವೆರಡಕ್ಕೂ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ.

ಮನಮೋಹನಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಪ್ರಧಾನಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಷನ್ಗೆ ಅನುದಾನ ನೀಡಲಾಗಿತ್ತು ಎಂದು ಕಳೆದ ತಿಂಗಳು ಬಿಜೆಪಿ ಆರೋಪಿಸಿತ್ತು.

ಮೊದಲಿನಿಂದಲೂ ಬಿಜೆಪಿ ಪಕ್ಷ ಈ ಮೂರೂ ಟ್ರಸ್ಟ್ ಮೇಲೆ ಆರೋಪಿಸುತ್ತ ಬಂದಿದ್ದರೂ ಈಗ ಏಕಾಏಕಿ ತನಿಖೆಗೆ ಆದೇಶ ಮಾಡಿರುವುದು, ಇದು ಜನರ ಗಮನ ಬೇರೆಡೆ ಸೆಳೆಯುವ ತಂತ್ರವೇ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ತನಿಖೆಗೆ ಉದ್ದೇಶಿಸಿದ ಸಂಗತಿಗಳು ಮನಮೋಹನಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಸಂಭವಿಸಿವೆ.

Exit mobile version