ಅಕ್ಟೋಬರ್ ನಲ್ಲಿ ಗ್ರಾಪಂ ಚುನಾವಣೆ ?ಜುಲೈ 13ರಿಂದ ಮತದಾರರ ಪಟ್ಟಿ ಪ್ರಕ್ರಿಯೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ಅಕ್ಟೋಬರ್ ನಲ್ಲಿ ನಡೆಸುವ ಸಾಧ್ಯತೆ ಇದ್ದು. ಇದೇ ಜುಲೈ 13ರಿಂದ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಕಳಿಸಿರುವ ತುರ್ತು ಆದೇಶದಲ್ಲಿ ತಿಳಿಸಿದ್ದಾರೆ.

ಜುಲೈ 13ರಿಂದ ಕ್ಷೇತ್ರವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಶುರುವಾಗಲಿದ್ದು, ಅಗಸ್ಟ್ 31ಕ್ಕೆ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಮಾರ್ಚ್ 7ರ ಆದೇಶದಲ್ಲಿ ಚುನಾವಣೆ ನಿಮಿತ್ತ ಕ್ಷೇತ್ರವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿತ್ತು. ನಂತರ ಕೋವಿಡ್ ತುರ್ತು ಪರಿಸ್ಥಿತಿಯ ಕಾರಣದಿಂದ ಜುಲೈ 26ರಂದು ಆದೇಶ ಹೊರಡಿಸಿ, ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿ, ಚುನಾವಣೆ ಮುಂದೂಡಿಕೆ ಘೋಷಿಸಿತ್ತು.

ಇದನ್ನು ಪ್ರಶ್ನಿಸಿ ಗದಗ ಮಾಜಿ ಶಾಸಕ ಡಿ.ಆರ್ ಪಾಟೀಲ್, ಎಂಎಲ್ಸಿ ಕೊಂಡಯ್ಯ, ಪಂಚಾಯತ್ ಸಬಲೀಕರಣ ಸಂಘದ ರಂಗಸ್ವಾಮಿ ಮತ್ತು ಬೆಂಗಳೂರು ಜಿಲ್ಲೆಯ ಹಲವು ಗ್ರಾಪಂ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠ, ಚುನಾವಣಾ ಆಯೋಗಕ್ಕೆ ಚುನಾವಣೆ ಮುಂದೂಡುವ ಅಧಿಕಾರವಿಲ್ಲ, ಕೂಡಲೇ ಆಯೋಗ ತನ್ನ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಸೂಚಿಸಿತ್ತು.

ಹಾಗಾಗಿ ಆಯೋಗ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಅಕ್ಟೋಬರ್ ನಲ್ಲಿ ಗ್ರಾಪಂ ಚುನಾವಣೆ ನಡೆಸಲು ನಿರ್ಧರಿಸಿದೆ.

ಇಂದು ಮಂಗಳವಾರ ಈ ಕುರಿತಾದ ತುರ್ತು ಆದೇಶವನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ, ಜುಲೈ 13ರಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ.

ಮತದಾರರ ಪಟ್ಟಿ ತಯಾರಿಕೆ ಕುರಿತ ವಿವಿಧ ಹಂತಗಳ ವೇಳಾಪಟ್ಟಿಯನ್ನು ಇಲ್ಲಿ ನೋಡಬಹುದು.

Exit mobile version