ಕೊರೊನಾ ಜನರಲ್ಲಿ ಆತಂಕ ಬೇಡ: ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಹದಗೆಟ್ಟಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರು ತೊರೆಯಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಲಾಕ್ ಡೌನ್ ಭೀತಿ ಯಿಂದ ನಗರವನ್ನು ಬಿಟ್ಟು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಸೋಂಕಿನ ಭಯ ಹೆಚ್ಚಾಗುತ್ತಿದೆ. ಹೀಗಾಗಿ ಜನರು ದಯವಿಟ್ಟು ಬೆಂಗಳೂರಿನಲ್ಲಿ ಸುರಕ್ಷತೆಯಿಂದ ಇರಿ. ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಆಗುತ್ತದೆ ಎಂದು ಭಯ ಪಡಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಸಿಎಂ ಅವರ ನಿರ್ಣಯದಂತೆ ಪ್ರತಿ ಭಾನುವಾರ ಲಾಕ್ ಡೌನ್ ಆಗಿರುತ್ತದೆ. ಜನರು ಸ್ವಯಂ ಪ್ರೇರಿತರಾಗಿ ಕರ್ಪ್ಯೂಗೆ ಬೆಂಬಲ ಕೊಟ್ಟು ಸ್ವಯಂ ಲಾಕ್ ಆಗಿದ್ದಾರೆ. ನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಜನ‌ರೂ ಕೂಡಾ ಅನಗತ್ಯವಾಗಿ ಹೊರಗಡೆ ಬಂದಿಲ್ಲ. ಜನರು ತಾವೇ ನಿಯಂತ್ರಣ ಹೇರಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೊರೋನಾ ವಾರಿಯರ್ ಗಳಾದ ಪೊಲೀಸರಿಗೆ ಸೋಂಕು ಹೆಚ್ಚಾಗುತ್ತಿದೆ. ಮೂರು ತಿಂಗಳಿಂದ ನಿಮ್ಮನ್ನು ಕಾಯುತ್ತಿರುವ ಕೊರೋನಾ ವಾರಿಯರ್ ಗಳು ಸುರಕ್ಷತೆಯಿಂದ ಇರಬೇಕು ಎಂದರೆ ದಯವಿಟ್ಟು ಜನರು ಸಹಕಾರ ನೀಡಬೇಕು. ಪ್ರತಿ ದಿನ ಐದಾರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಆಗುತ್ತಿವೆ. ಪೊಲೀಸರ ಹಿತದೃಷ್ಟಿಯಿಂದ ಅವರ ಆರೋಗ್ಯ ತಪಾಸಣೆ, ಟೆಸ್ಟಿಂಗ್ ಟ್ರೀಟ್ ಮೆಂಟ್ ಗೆ ಮತ್ತಷ್ಟು ಆದ್ಯತೆ ನೀಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.

Exit mobile version