ಬೆಳೆ ರಕ್ಷಣೆಗೊಬ್ಬ ಆಪ್ತ: ನೇತಾಡುವ ಖಾಲಿ ಬಿಯರ್ ಬಾಟಲ್ಲು!

ನರೇಗಲ್ಲ: ಖಾಲಿ ಕ್ವಾಟರು ಬಾಟ್ಲಿ ಯಾವುದಕ್ಕೂ ಬರಂಗಿಲ್ಲ ಅನ್ನೋ ತರಹ ಯೋಗರಾಜ್ ಭಟ್ರು ಹಾಡು ಬರದಿದ್ರು. ಅದಕ್ಕೂ ಮೊದ್ಲಾನೂ ಒಮ್ಮೆ ಹಳೆ ಪಾತ್ರೆ, ಹಳೆ ಸೀಸೆ ಹಾಡಿನೊಳ್ಗೂ ಖಾಲಿ ಬಾಟ್ಲಿಗೆ ಕಿಮ್ಮತ್ತಿಲ್ಲ ಅಂತಾನೂ ಬರದಿದ್ದರು.

ಆದ್ರ ಅದನ್ನೆಲ್ಲ ಸುಳ್ ಮಾಡಿ ತೋರಿಸ್ಯಾರ ಗದಗ ಜಿಲ್ಲೆ ನರೇಗಲ್ ಹೋಬಳಿ ರೈತರು. ಅವರ ಜೀವಾನ ಆಗಿರುವ, ಬದುಕ ಆಗಿರುವ ಬೆಳಿ ರಕ್ಷಣೆ ಮಾಡಾಕ ಇವ್ರೆಲ್ಲ ಒಬ್ಬ ರೈತಮಿತ್ರನ್ನ ಹಿಡಕೊಂಡ್ ಬಂದಾರ. ಯಾರವ ಅಂತೀರನು? ಅದರಿ ಖಾಲಿ ಬಿಯರ್ ಬಾಟಲ್ಲು!

ಕೆಂಪ್ ಕೆಂಪ್ ಮಸಾರಿ ಮತ್ತ ನುಣುನುಣಪು ಕರೆಮಣ್ಣಿನ ಹೊರಹೊಲದಾಗ ಗಿಡಗಿಡಕ್ಕ ಖಾಲಿ ಬಿಯರ್ ಬಾಟಲ್ ಕಟ್ಯಾರ. ಒಬ್ಬೊಬ್ಬರಂತೂ ನಟ್ಟ ನಡುವ ಹೊಲದಾಗ ಎರಡು ಡಂಬ್ ಹುಗಿದು ನಡಕ ಒಂದ್ ಹಗ್ಗ ಕಟ್ಟಿ ಏಳೆಂಟ್ ಬಾಟ್ಲಿ ಇಳೇ ಬಿಟ್ಟಾರ.

ಈಗ ಹಿಂಡ್ ಹಿಂಡು ಜಿಂಕೆ ಬರಾಕೂ ಹೆದರತಾವ, ಮಂಗ್ಯಾಗಳ ಕಾಟಾನೂ ಇಲ್ಲ! ನಮ್ ಅಗ್ರಿ ಯುನಿವರ್ಸಿಟಿ, ಕೃಷಿ ವಿಜ್ಞಾನ ಕೇಂದ್ರ , ಮತ್ತ ಕೃಷಿ, ಅರಣ್ಯ ಇಲಾಖೆ ನೆಚ್ಚಿ ನೆಚ್ಚಿದ ರೈತರಿಗೆ ಸಿಗೋ ಪರಿಹಾರಾನೂ ಅಷ್ಟಕ್ಕಷ್ಟ. ತಾವ ಒಂದ್ ಆವಿಷ್ಕಾರ ಮಾಡ್ಯಾರ. ಇದರೊಳಗ ಸೈನ್ಸೂ ಐತಿ. ಕಾಮನ್ಸ ಸೆನ್ಸೂ ಐತಿ.

ಖಾಲಿ ಬಿಯರ್ ಬಾಟ್ಲ್ಯಾಗ ಹವಾ ಹೊಕ್ಕರ ಸೀಟಿ ಹೊಡದಂಗ ಶಬ್ದ ಬರತೈತಿ. ಗಾಳಿಗೆ ಬಾಟ್ಲಿನೂ ಅಳ್ಳಾಡಿ ಸೌಂಡ್ ಮಾಡ್ತಾವು.
‘ಏ, ಇವನೌನ್ ಯಾರಾ ಅದಾರಲೇ ಯಪ್ಪ ಅಂತ ಮಂಗ್ಯಾ, ಜಿಂಕಿ ಹಿಂಡು ಆ ಹೊಲ್ದ ಕಡಿಕ ಬರಂಗಿಲ್ಲ. ಹಿಂಗಾಗಿ ಹೆಸರು, ಸೇಂಗಾ, ಗ್ವಾವಿನ ಜ್ವಾಳ ಬೆಳಿಯಲ್ಲ ಸೇಫಾಗ್ಯಾವು.

ನಿದ್ದಿಗೆಟ್ಟು ರಾತ್ರಿಯೆಲ್ಲ ಕೇಕೆ ಹೊಡಕಂತ ಕುಂದ್ರತಿದ್ದ ರೈತಾಪಿ ಮಂದಿ ಈಗ ಆರಾಮ ಮನ್ಯಾಗ ನಿಶ್ಚಿಂತಿಯಿಂದ ನಿದ್ದಿ ಹೊಡಿತಾರ. ಖಾಲಿ ಬಾಟ್ಲಿ ಹೊಲ ಕಾಯ್ತಾವು.

ಜಿಲ್ಲೆಯ ಗಜೇಂದ್ರಗಡ, ರೋಣ ತಾಲೂಕಿನ್ಯಾಗ ಈ ಪ್ರಯೋಗ ನಡದದ ಮತ್ತ ಸಕ್ಸಸ್ಸು ಆಗೇದ. ಗಜೇಂದ್ರಗಡ, ನರೇಗಲ್ಲ, ಕುರಡಗಿ, ಎರೆಬೇಲೇರಿ, ನಿಡಗುಂದಿ ಕೊಪ್ಪ, ತೊಂಡಿಹಾಳ, ಬೆಳವಣಿಕಿ –ಹಿಂಗ ಕೆಲವು ಊರಾಗ ಹೊಲದಾಗ ಬಾಟ್ಲಿ ನೋಡಬಹುದು.

ಈಗ ನೋಡ್ರಿ ಖಾಲಿ ಬಿಯರ್ ಬಾಟ್ಲು ನಮ್ ಹೊಲ್, ಬೆಳಿ ಕಾಯಾಕ ಹತ್ಯಾವು ಎನ್ನುತ್ತಾರೆ ರೈತರಾದ ಶರಣಪ್ಪ ಮಾರನಸಬಸರಿ, ವೀರೇಶ ಮಡಿವಾಳರ, ಬಸವರಾಜ ಧರ್ಮಾಯತ ಮತ್ತ ಎಪಿಎಂಸಿ ಮೆಂಬರ್ ನಿಂಗನಗೌಡ ಲಕ್ಕನಗೌಡ್ರ.
ಅಗತ್ಯತೆ, ಅನಿವಾರ್ಯತೆ, ಅವಶ್ಯಕತಿನಾ ಅನ್ವೇಷಣೆಯ ತಾಯಿ ಅಂತಾರ. ಅವ್ರ ಬೆಳಿ ಕಾಪಾಡಿಕೊಳ್ಳೋ ಅಗತ್ಯ ಇತ್ರಿ, ರಾತ್ರಿ ನಿದ್ದಿಗೆಡೋದ್ ತಪ್ಪಿಸಬೇಕಿತ್ರಿ. ಹಿಂಗಾಗಿ ನಮ್ ರೈತ್ರು ಈ ಐಡಿಯಾ ಮಾಡ್ಯಾರ.

ಯೋಗರಾಜಭಟ್ಟರ, ಖಾಲಿ ಬಾಟ್ಲಿಗೂ ಈಗ ಭಾಳ್ ವ್ಯಾಲ್ಯು ಬಂದೈತ್ರಿ.

Exit mobile version