ಮಳೆಗಾಲ: ಕೊರೊನಾ ಮಧ್ಯೆ ಆರೋಗ್ಯಕ್ಕಾಗಿ ನಿಮ್ಮ ಆಹಾರ ಪದ್ಧತಿ ಹೀಗಿರಲಿ..!!

ಬೆಂಗಳೂರು: ಈಗ ಮಳೆಗಾಲ ಆರಂಭವಾಗಿದೆ. ಅಲ್ಲದೇ, ಕೊರೊನಾ ಕಾಟ ಕೂಡ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಎಲ್ಲರಿಗೂ ದೊಡ್ಡ ಚಿಂತೆಯಾಗಿ ಬಿಟ್ಟಿದೆ. ಮಳೆಗಾಲದಲ್ಲಿಯೇ ಸಾಮಾನ್ಯವಾಗಿ ಎಲ್ಲರ ಆರೋಗ್ಯ ಹದಗೆಡುತ್ತದೆ. ಗಾಳಿಯಲ್ಲಿನ ತೇವಾಂಶವು ಅನೇಕ ರೀತಿಯ ಹಾನಿಕಾರಕ ಸೂಕ್ಷ್ಮ ಜೀವಿಗಳ ಬೆಳವಣಿಗೆಗಳನ್ನು ಪ್ರಚೋದಿಸುತ್ತದೆ. ಈ ಕಾರಣಕ್ಕಾಗಿ ಅನಾರೋಗ್ಯ ಎಲ್ಲರನ್ನೂ ಬಾಧಿಸುತ್ತದೆ.

ಹೀಗಾಗಿ ಎಲ್ಲರೂ ಸಾಧ್ಯವಾದಷ್ಟು ಆರೋಗ್ಯ ಕಾಪಾಡಿಕೊಳ್ಳಬೇಕು. ಅಲ್ಲದೇ, ಈ ಸಂದರ್ಭದಲ್ಲಿಯೇ ಜನರ ಬಾಯಿ ಚಪಲ ಕೂಡ ಹೆಚ್ಚಾಗಿರುತ್ತದೆ. ಸಂಜೆಯಾಗುತ್ತಿದ್ದಂತೆಯೇ ಚಾಟ್ ಹಾಗೂ ಪಕೋಡಾ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಈ ಸಂದರ್ಭದಲ್ಲಿ ಆಹಾರ ಸೇವನೆ ಮಾಡವುದು ಉತ್ತಮವಲ್ಲ, ಸೂಪ್ ಸೇವನೆ ಮಾಡುವುದು ಉತ್ತಮವಾಗಿರುತ್ತದೆ.
ಸೂಪ್ ಗಳು ಪೌಷ್ಠಿಕಾಂಶಗಳಿಂದ ತುಂಬಿದ್ದು, ಬಾಯಿಗೂ ರುಚಿ ನೀಡುವುದಲ್ಲದೆ, ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಶುಂಠಿ, ಬೆಳ್ಳುಳ್ಳಿ ಹಾಗೂ ಕಾಳು ಮೆಣಸಿನೊಂದಿಗೆ ಸಿದ್ಧಪಡಿಸಿದ ಸೂಪ್ ಕುಡಿದರೆ ಒಳ್ಳೆಯದು.

ಗ್ರೀನ್ ಟೀ ಕುಡಿಯುವುದರಿಂದ ಸಾಕಷ್ಟು ಪ್ರಯೋಜನೆಗಳಿವೆ. ಜನರು ಟೀ, ಕಾಫಿ ಕುಡಿಯಲು ಇಚ್ಛಿಸುತ್ತಾರೆ. ಈ ಸಂದರ್ಭದಲ್ಲಿ ಗ್ರೀನ್ ಟೀ ಕುಡಿಯುವುದು ಉತ್ತಮ. ಜೇನುತುಪ್ಪ ಅನೇಕ ಪ್ರಯೋಜನಗಳನ್ನು ಹೊಂದಿದೆ. ಪ್ರತೀನಿತ್ಯ ಜೇನುತುಪ್ಪ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮನುಷ್ಯನ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಪ್ರತಿರೋಧಿಸುತ್ತದೆ.

ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಉಸಿರಾಟ ಸಮಸ್ಯೆಯ ಚಿಕಿತ್ಸೆಗೆ ಜೇನುತುಪ್ಪ ಬಳಕೆ ಮಾಡುವುದನ್ನು ಇನ್ನು ನೆನೆಯಬಹುದಾಗಿದೆ. ಕಫ, ಅಸ್ತಮಾ, ಕೆಮ್ಮು ಸಮಸ್ಯೆಗಳನ್ನು ಎದುರಿಸಲು ಪ್ರತೀನಿತ್ಯ ಜೇನುತುಪ್ಪ ಸೇವನೆ ಮಾಡುವಂತೆ ಸೂಚಿಸಲಾಗುತ್ತದೆ.

ಬೇವಿನ ಸೊಪ್ಪು ಎಷ್ಟು ಕಹಿಯಾಗಿರುತ್ತದೆಯೋ ಅಷ್ಟೇ ಲಾಭವನ್ನು ನೀಡುತ್ತದೆ. ಪ್ರತೀನಿತ್ಯ ಬೇವಿನ ಸೊಪ್ಪನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಎದುರಾಗುವ ಸಮಸ್ಯೆಗಳು ದೂರಾಗುತ್ತವೆ. ದೇಹದ ರಕ್ತವನ್ನು ಶುದ್ಧೀಕರಿಸುವ ಶಕ್ತಿ ಈ ಬೇವು ಹೊಂದಿದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಅಲೋವೆರಾ (ಲೋಳೆಸರ) ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ಪದಾರ್ಥವಾಗಿದೆ. 20 ಕ್ಕೂ ಹೆಚ್ಚು ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸೋಡಿಯಂ ಜೊತೆಗೆ ಕಿಣ್ವಗಳು, ಜೀವಸತ್ವಗಳು, ಸಾರಜನಕ ಮತ್ತು ಇತರೆ ಪ್ರಮುಖ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಕೂದಲು ಹಾಗೂ ಚರ್ಮದ ಸಮಸ್ಯೆಯನ್ನು ದೂರಾಗಿಸುವುದಲ್ಲದೆ, ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಮಲಬದ್ಧತೆಯಂತಹ ಸಮಸ್ಯೆಯನ್ನು ದೂರಾಗಿಸುವುದಲ್ಲದೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.

Exit mobile version