ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಮುಂದಾಗಿದ್ದಾರೆ. ಈ ಕುರಿತು ಸರ್ವೆ ಮಾಡಿಸಿ ಜಿಲ್ಲೆಯಲ್ಲಿನ ಸರ್ಕಾರದ ಆಸ್ತಿಯನ್ನು ನಿಗದಿತ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ತಾಲೂಕಿನ ಮುಗದ ಗ್ರಾಮದಲ್ಲಿ ಇಲಾಖೆಗೆ ಸೇರಿದ ಒಂದು ಎಕರೆ ಜಾಗವನ್ನು ಶುಕ್ರವಾರ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳದ ಅಳತೆ ಮಾಡಿ ಗಡಿ ಗುರುತಿಸಿದ್ದಾರೆ. 1970 ರಲ್ಲಿ ಮುಗದ ಗ್ರಾಮದಲ್ಲಿ ಪೊಲೀಸ್ ಠಾಣೆ ಮತ್ತು 12 ಕ್ವಾರ್ಟರ್ಸ್ ಗಳು ಇದ್ದವು. ಈ ಠಾಣೆ ರದ್ದಾದ ನಂತರ ಕಟ್ಟಡಗಳು ಖಾಲಿ ಬಿದ್ದಿದ್ದವು. ಆದರೆ, ಈ ಕಟ್ಟಡಗಳಲ್ಲಿ ಹಲವರು ಅಕ್ರಮವಾಗಿ ನೆಲೆಸಿದ್ದರು. ಆ ಜಾಗವನ್ನು ಸದ್ಯ ಪೊಲೀಸ್ ವರಿಷ್ಠಾಧಿಕಾರಿ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಇಲಾಖೆಗೆ ಸೇರಿದ ಬಹಳಷ್ಟು ಜಾಗಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಹಲವರು ಅತಿಕ್ರಮಿಸಿದ್ದಾರೆ. ಇಂಥ ಜಾಗಗಳನ್ನು ವಶಕ್ಕೆ ಪಡೆದು ಇಲಾಖೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಅದರಂತೆಯೇ ಮುಗದ ಗ್ರಾಮದಲ್ಲಿರುವ ಇಲಾಖೆ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶವಿದೆ. ಈ ಕುರಿತಂತೆ ಅನುಮತಿ ಕೋರಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

Exit mobile version