ಕೊರೊನಾ ಎಫೆಕ್ಟ್: ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ, ಐಟಿಐ ಉದ್ಯೋಗಿಗಳು ನರೆಗಾ ಕೆಲಸಕ್ಕೆ..!

ಬೀದರ್: ಕಳೆದ ಮೂರು ತಿಂಗಳಲ್ಲಿ ಜನರ ಆರ್ಥಿಕ ಸ್ಥಿತಿ ತೀರಾ ಬಿಗಡಾಯಿಸುತ್ತಾ ಹೊರಟಿದೆ. ಇದರಿಂದ ಕೊರೊನಾ ದುಡಿಯುವ ಕೈಗಳ ಕೆಲಸ ಕಸಿದಿದೆ. ಕೂಲಿ ಕಾರ್ಮಿಕರ ಸ್ಥಿತಿ ಒಂದೆಡೆ ಗಂಭೀರ ಸ್ವರೂಪ ತಾಳಿದ್ದರೆ, ಇದಕ್ಕೆ ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ ಓದಿ ಉದ್ಯೋಗದಲ್ಲಿದ್ದವರ ಪಾಡು ಭಿನ್ನವಾಗೇನಿಲ್ಲ. ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿರುವುದು ಬೀದರ್ ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಕಂಡು ಬಂದಿದೆ.

ಏನ್ ಮಾಡೊದ್ರಿ ಹೈದರಾಬಾದ್ ದಾಗ ಒಳ್ಳೆ ಕೆಲ್ಸದಾಗಿದ್ದೆ. ಲಾಲ್ ಡೌನ್ ನಿಂದ ಊರ್ ಸೇರಿದ್ ಮ್ಯಾಲೆ ಕೆಲ್ಸಾನಾ ಇಲ್ದಂಗಾಗಿತ್ತು. ಇರೋ ಬರೋ ಹಣ ಎಲ್ಲ ಖಾಲಿ ಆಗ್ಯಾವು. ಅದಕ್ಕ ನಮ್ಮ ಊರಾಗ ಉದ್ಯೋಗ ಖಾತ್ರಿ ಯೋಜನೆದಾಗ ಕೆಲ್ಸಾ ಶುರು ಮಾಡಿದ್ರು, ಹಿಂಗಾಗಿ ಕೆಲಸಕ್ಕ ಬಂದೇವ್ರಿ.

ಸತೀಶ್, ಗ್ರಾಮಸ್ಥ

ಅಂದಾಜು 20 ಕ್ಕೂ ಅಧಿಕ ಜನರು ಈ ಗ್ರಾಮದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆದ್ರೆ ಈಗ ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದರೂ ಕೂಡ ಇವರ ಪರಿಸ್ಥಿತಿ ಸುಧಾರಣೆಯಾಗುವ ಯಾವುದೇ ಲಕ್ಷಣ ಕಾಣದ ಹಿನ್ನೆಲೆ ಅನಿವಾರ್ಯವಾಗಿ ನರೆಗಾ ಕೂಲಿಗೆ ಹೋಗಬೇಕಾಗಿದೆ. ಈಗಾಗಲೇ ಕೊರೊನಾಗೂ ಮೊದಲೇ ದೇಶದ ಆರ್ಥಿಕ ಸ್ಥಿತಿ ನೆಲಕಚ್ಚುವ ಆತಂಕ ಎದುರಿಸುತ್ತಿತ್ತು. ಇನ್ನು ಕೊರೊನಾ ವಕ್ಕರಿಸಿಕೊಂಡ ಘಳಿಗೆ ಯಿಂದ ಆರ್ಥಿಕ ಸ್ಥಿತಿ ನೆಲ ಕಚ್ಚಿಯೇ ಬಿಟ್ಟಿತು. ಇದರಿಂದಾಗಿ ಬಹಳಷ್ಟು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು, ಸಂಬಳ ಕಡಿತ ಹೀಗೆ ಒಂದಲ್ಲ ಒಂದು ಕಾರಣದಿಂದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದಾರೆ.

ಇಂಥ ಸಂಕಷ್ಟ ಕಾಲದಲ್ಲಿ ವಿದ್ಯಾವಂತ ಯುವಕರು ಸರ್ಕಾರದ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ. ಎಲ್ಲ ವಿದ್ಯಾವಂತರಿಗೂ ಈ ಯುವಕರ ಕಾರ್ಯ ಮಾದರಿಯಾಗಿದೆ.

ಗ್ಯಾನೇಂದ್ರಕುಮಾರ್, ಜಿ.ಪಂ ಸಿಇಓ

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಂಡವರು ಈಗ ಅಕ್ಷರಶ: ಬೀದಿಗೆ ಬರುವಂತಾಗಿದೆ. ಈ ಕಾರಣದಿಂದ ತಮ್ಮ ಊರುಗಳಿಗೆ ಮರಳಿದ ಉದ್ಯೋಗಿಗಳು ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಕೆರೆ ಹೂಳೆತ್ತುವುದು, ನಾಲೆ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Exit mobile version