ಪಟ್ಟಣ ಪಂಚಾಯತಿ ಆದೇಶಕ್ಕೂ ಕಿಮ್ಮತ್ತು ನೀಡದ ಹೆಸ್ಕಾಂ…!

ಗದಗ: ಶಿರಹಟ್ಟಿ ಪಟ್ಟಣದಲ್ಲಿನ 7 ಕಟ್ಟಿಗೆ ಅಡ್ಡೆಗಳದ್ದು ಒಂದೊಂದು ಕಹಾನಿ ಇದೆ. ಆದರೆ ಈ ಕಥೆಯಲ್ಲಿ ಹೆಸ್ಕಾಂ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಈಗಾಗಲೇ ಪಟ್ಟಣ ಪಂಚಾಯತಿ ಕಟ್ಟಿಗೆ ಅಡ್ಡೆಗಳಿಗೆ ನೀಡಿದ ವಿದ್ಯುತ್ ಸಂಪರ್ಕ ಕಡಿತ ಮಾಡುವ ಬಗ್ಗೆ ಹೆಸ್ಕಾಗೆ ಆದೇಶ ನೀಡಿದರೂ ಕೂಡ ಈವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸದ ಹೆಸ್ಕಾಂನ ಉದ್ದೇಶವೇನು? ಪಟ್ಟಣದ ನಿರ್ವಹಣೆಯ ಜವಾಬ್ದಾರಿಯುತ ಅಧಿಕಾರಿಯ ಆದೇಶ ಪಾಲನೆ ಮಾಡದೇ ಮೊಂಡುತನ ಪ್ರದರ್ಶನ ಮಾಡುತ್ತಿರುವುದರ ಹಿಂದಿನ ಮರ್ಮವೇನು? ಎಂದು ಜನರು ಪ್ರಶ್ನಿಸಿಕೊಳ್ಳುವಂತಾಗಿದೆ.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ 19-05-2020ಕ್ಕೆ ಇಲ್ಲಿನ 15 ಮತ್ತು 16ನೇ ವಾರ್ಡಿನಲ್ಲಿರುವ ಕಟ್ಟಿಗೆ ಅಡ್ಡಗಳಿಗಳಿಂದ ಹೊರಹೊಮ್ಮುವ ಧೂಳು ಮತ್ತು ಶಬ್ದದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಕಂದಾಯ ಇಲಾಖೆ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಕೊಟ್ಟಿರುವ ವರದಿಯನ್ವಯ ಕಟ್ಟಿಗೆ ಅಡ್ಡೆಗಳನ್ನು ತೆರವು ಅಥವಾ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕಟ್ಟಿಗೆ ಅಡ್ಡೆಗಳಿಗೆ ನೀಡಲಾದ ನಿರಾಪೇಕ್ಷಣೆಯನ್ನು ಹಿಂಪಡೆದಿರುವ ಬಗ್ಗೆ ಆದೇಶದಲ್ಲಿ ತಿಳಿಸಿದ್ದಾರೆ.  

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೆಸ್ಕಾಂ ಇಲಾಖೆಗೆ ನೀಡಿದ ಆದೇಶ

ನಿರಾಪೇಕ್ಷಣೆಯನ್ನು ಹಿಂಪಡೆದಾಗ್ಯೂ ಈವರೆಗೂ ಇನ್ನು ಕೂಡ ಕಟ್ಟಿಗೆ ಅಡ್ಡೆಗಳು ಚಾಲ್ತಿಯಲ್ಲಿರುವ ಕಾರಣ, ಈ ಪ್ರದೇಶ ಜನವಸತಿ ಪ್ರದೇಶ ಆಗಿದ್ದರಿಂದ ಜನಸಾಮಾನ್ಯರು, ಮಕ್ಕಳು, ವೃದ್ಧರಿಗೆ ಇದರ ಧೂಳಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಜವಾಬ್ದಾರಿಗೆ ನೀವೆ ಹೊಣೆಗಾರರು ಎಂದು ಆದೇಶದಲ್ಲಿ ಮುಖ್ಯಾಧಿಕಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ ಹೆಸ್ಕಾಂ ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಇನ್ನು ಗಂಭೀರತೆ ಬಂದಂತೆ ಕಾಣುತ್ತಿಲ್ಲ.

ಮುಖ್ಯಾಧಿಕಾರಿ ಆದೇಶ ಮಾಡಿ 20 ದಿನಗಳಾದರೂ ಈವರೆಗೆ ಹೆಸ್ಕಾಂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ. ಒಬ್ಬ ಹಿರಿಯ ಅಧಿಕಾರಿ ಆದೇಶ ಪಾಲನೆಗೂ ಇಷ್ಟೊಂದು ಮೀನಾಮೇಷವೇ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೇಗೆ ಶಿರಹಟ್ಟಿ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆದರೆ ಅವರ ಮೊಬೈಲ್ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ.

ಇನ್ನಾದರೂ ಜನಸೇವೆ ಮಾಡಬೇಕಿದ್ದ ಅಧಿಕಾರಿಗಳು ಜನಸಾಮಾನ್ಯರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ. ಜೊತೆಗೆ ಮೇಲಾಧಿಕಾರಿಗಳ ನ್ಯಾಯಯುತ ಆದೇಶವನ್ನು ಪಾಲಿಸಬೇಕು ಎನ್ನುವುದು ನಮ್ಮ ಆಶಯ.  

Exit mobile version