ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೇ ಪರಿಹಾರ : ಜಾರಕಿಹೊಳಿ

ಗದಗ: ಕಪ್ಪತ್ತಗುಡ್ಡ ರಕ್ಷಣೆ ಮಾಡುವ ವಿಚಾರದಲ್ಲಿ ನಮ್ಮ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಈಗೀನ ಬಿ.ಎಸ್.ವೈ ಸರ್ಕಾರ ಗಣಿಗಾರಿಕೆ ಮುಕ್ತ ಮಾಡುವಲ್ಲಿ ಬಹುತೇಕ ಕೆಲಸ ಮುಗಿಸಿದೆ. ಈ ನಿಟ್ಟಿನಲ್ಲಿ ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೊಲನ ಒಂದೇ ಪರಿಹಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಈ ಕುರಿತು ಗದಗನಲ್ಲಿ ಮಾತನಾಡಿ, ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ನಮ್ಮ ಪಕ್ಷದಿಂದ ಸಹ ಕಪ್ಪತ್ತಗುಡ್ಡ ಉಳಿವಿಗಾಗಿ ಹೋರಾಟ ಮಾಡುತ್ತೇವೆ ಎಂದರು.

ಇದೇ ವೇಳೆ  ಕರೊನಾ ವೈರಸ್ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಲೋಪ ದೋಷಗಳನ್ನು ಮಾಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಪರಿ ಅವೈಜ್ಞಾನಿಕವಾಗಿತ್ತು. ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಕೋಟ್ಯಾಂತರ ಜನರಿಗೆ ಸಮಸ್ಯೆಯಾಗಿದೆ. ದೇಶದಲ್ಲಿ 1947 ಸಂದರ್ಭಗಳಲ್ಲಿ ಉಂಟಾದ ಸಮಸ್ಯೆ ಮತ್ತೆ ಉಂಟಾಗಿದೆ. ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಸಾವಿರಾರು ಕಿಲೋಮೀಟರ್ ನಡೆದುಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿತ್ತು. ಕೇಂದ್ರ ಸರ್ಕಾರ 20 ಲಕ್ಷ  ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದೆ ಆದರೆ ಆ ಯೋಜನೆ ಎಲ್ಲರಿಗೂ ಸರಿಯಾಗಿ ತಲುಪುವುದಿಲ್ಲ ಎಂದು ಆರೋಪಿಸಿದರು.

ಜೂನ್ 7 ರಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮೂವರು ಕಾರ್ಯಧ್ಯಕ್ಷರ ಪದ ಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಆಯಾ ಗ್ರಾಮಗಳಲ್ಲಿ ಸಣ್ಣ ಸಣ್ಣ ಕಾರ್ಯಕ್ರಮ ಆಯೋಜನೆ ಮಾಡಲು ಹೇಳಲಾಗಿದೆ. ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಂಡು ಕಾರ್ಯಕ್ರಮ ಯಶಸ್ವಿ ಮಾಡುತ್ತೇವೆ ಎಂದು ಹೇಳಿದರು.

Exit mobile version