ಗದಗ ಜಿಲ್ಲೆಯಲ್ಲಿ ಮತ್ತೆ ಮೂಡಿವೆ ಬಲ್ದೋಟ ಹೆಜ್ಜೆ.! : ಕಪ್ಪತ್ತಗುಡ್ಡಕ್ಕೆ ಕನ್ನಹಾಕಲು ನಡೆದಿದೆಯಾ ಯತ್ನ..?

ಗದಗ: ಇನ್ನೇನು ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಜೊತೆಗೆ ವನ್ಯಧಾಮ ಆಯಿತಲ್ಲ ಬಲ್ದೋಟ ಕಾಟ ತಪ್ಪಿತು ಅಂತ ಗದಗ ಜಿಲ್ಲೆಯ ಪರಿಸರ ಪ್ರೇಮಿಗಳು ಹಾಗೂ ಜೀವಪರ ಮನಸುಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಮತ್ತೆ ಜಿಲ್ಲೆಯಲ್ಲಿ ಬಲ್ದೋಟ ಹೆಜ್ಜೆ ಮೂಡಿವೆ. ಇದರಿಂದ ಬಲ್ದೋಟ ಕಂಪನಿ ಮತ್ತಿನ್ನೇನು ಹುನ್ನಾರ ನಡೆಸಿದೆ ಎನ್ನುವ ಆತಂಕ ನಿರ್ಮಾಣವಾಗಿದೆ.

ಈಗಾಗಲೇ ಗದಗ ಜಿಲ್ಲೆಯಲ್ಲಿ 2017ರಲ್ಲಿ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ದಲಿಂಗಶ್ರೀಗಳ ನೇತೃತ್ವದಲ್ಲಿ ಕಪ್ಪತ್ತಗುಡ್ಡದ ಪರ ಹೋರಾಟ ನಡೆದಿತ್ತು. ಅಹೋರಾತ್ರಿ ಧರಣಿ ಮೂಲಕ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಗಣಿ ಕಂಪನಿ ಬಲ್ದೋಟ ವಿರುದ್ಧ ನಾಡಿನಾದ್ಯಂತ ಜನಾಂದೋಲನ ರೂಪಗೊಂಡಿತ್ತು. ಈ ಹೋರಾಟಕ್ಕೆ ಸರ್ಕಾರ ಅನಿವಾರ್ಯವಾಗಿ ಮಣಿದಿತ್ತು.

ಆದರೆ ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಕಪ್ಪತ್ತಗುಡ್ಡದ ಪರ ಹೋರಾಟಕ್ಕೆ ಬೆಂಬಲವೂ ನೀಡಿತ್ತು. ಆದರೆ ಇದೀಗ ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗದಗ ಜಿಲ್ಲೆಯಲ್ಲಿ ಮತ್ತೆ ಬಲ್ದೋಟ ಕಂಪನಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆಯೇ? ಎನ್ನುವ ಸಂಶಯ ಮೂಡಿದೆ. ಸಾಮಾನ್ಯವಾಗಿ ಗಣಿಗಾರಿಕೆಗೆ ಅನುಮತಿ ಕೈಬಿಟ್ಟ ಸರ್ಕಾರ ಈ ಭಾಗದ ಜನರ ಬೇಡಿಕೆಗೆ ಮಣಿದು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿತು. ನಂತರ ಇತ್ತಿಚಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅರಣ್ಯ ಸಚಿವರಿದ್ದಾಗ ವನ್ಯಧಾಮ ಘೋಷಣೆಯೂ ಆಯಿತು. ವನ್ಯಧಾಮ ಘೋಷಣೆಯಾದ ಮೇಲೆ ಗಣಿಗಾರಿಕೆ ಹೇಗೆ ಸಾಧ್ಯ? ಎಂಬ ಲೆಕ್ಕಾಚಾರದಲ್ಲಿ ಬಹುತೇಕರಿದ್ದಾರೆ. ಆದರೆ ಬಲ್ದೋಟದಂತಹ ಕಂಪನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ ಈ ಭಾಗದ ಜನರನ್ನು ಎದುರಿಸಿ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕುವ ಅವರ ಪ್ರಯತ್ನ ಮಾತ್ರ ವಿಫಲವಾಗಿತ್ತು. ಈ ನಿಟ್ಟಿನಲ್ಲಿ ಯಾವಾಗ ತನಗೆ ಹಿನ್ನಡೆಯಾಯಿತೋ ಅಂದಿನಿಂದ ಇಂದಿನವರೆಗೂ ಬಲ್ದೋಟ ಕಂಪನಿ ಮಾತ್ರ ತನ್ನ ಪ್ರಯತ್ನದಿಂದ ಹಿಂದೆ ಸರಿದಿಲ್ಲ.

2017 ರಲ್ಲಿ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಬಲ್ದೋಟ ಚಿನ್ನದ ಗಣಿಗಾರಿಕೆ ವಿರೋಧಿಸಿ ಹಾಗೂ ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ನಡೆದ ಹೋರಾಟ

ಹೋದಿಯಾ ಪಿಶಾಚಿ ಅಂದರೆ..!

ನ್ಯಾಯಾಂಗ ಹಾಗೂ ಸರ್ಕಾರಗಳ ಮಟ್ಟದಲ್ಲಿ ತನ್ನ ಪ್ರಯತ್ನ ಮುಂದುರೆಸೇ ಇದೆ. ಇದಕ್ಕೆ ಪೂರಕವೆಂಬಂತೆ ನಿನ್ನೆಯಷ್ಟೆ ಬಲ್ದೋಟ ಕಂಪನಿ ಅಧಿಕಾರಿಗಳು ಕಪ್ಪತ್ತಗುಡ್ಡದ ಸೆರಗಿಗೆ ಎಂಟ್ರಿ ಕೊಟ್ಟಿದ್ದಾರೆ. ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರಿಂದಾಗಿ ಅತ್ತಿಕಟ್ಟಿ ಸುತ್ತಮುತ್ತಲು ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಈ ಮೂಲಕ ಹೋದಿಯಾ ಪಿಶಾಚಿ ಎಂದರೆ ಬಂದಿಯಾ ಗವಾಕ್ಷಿ ಎನ್ನುವಂತಾಗುತ್ತಿದೆಯಾ? ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಏಕಾಏಕಿ 7-8 ವಾಹನದಲ್ಲಿ ಬಂದ ಬಲ್ದೋಟ ಅಧಿಕಾರಿಗಳು ಈಗಾಗಲೇ ಅತ್ತಿಕಟ್ಟಿಯಲ್ಲಿ ಗಣಿಗಾರಿಕೆ ಸ್ಥಾಪನೆಗೆ ಮುಂದಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದು ಸಹಜವಾಗಿ ಜನರನ್ನು ಆತಂಕಕ್ಕೀಡು ಮಾಡುವ ಜೊತೆಗೆ ಹತ್ತು ಹಲವು ಚರ್ಚೆಗೆ ಗ್ರಾಸವಾಗಿದೆ. ಇಷ್ಟು ದಿನ ಇಲ್ಲದೇ ಈಗ ಏಕಾಏಕಿ ಬಲ್ದೋಟ ಕಂಪನಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರು ಯಾರು? ಒಂದು ವೇಳೆ ಬಂದವರೆ ಹೇಳುವ ಹಾಗೆ ಅವರು ಬಲ್ದೋಟ ಕಂಪನಿಯ ಅಧಿಕಾರಿಗಳೇ ಆಗಿದ್ದರೇ ಅವರು ಬಂದದ್ದು ಏಕೆ? ಎನ್ನುವ ಪ್ರಶ್ನೆ ಸೃಷ್ಟಿಯಾಗಿವೆ.

ಒಂದೆಡೆ ರಾಜ್ಯ ಸರ್ಕಾರ ಮತ್ತೆ ಬಲ್ದೋಟಕ್ಕೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎನ್ನುವ ಗುಮಾನಿ. ಇದಕ್ಕೆ ಪೂರಕವಾಗಿ ನಿನ್ನೆ ಪಶ್ಚಿಮ ಘಟ್ಟಗಳ ಕುರಿತು ಕಸ್ತೂರಿ ರಂಗನ್ ವರದಿ ವಿಚಾರವಾಗಿ ಸಿಎಂ ಯಡಿಯೂರಪ್ಪ ಕೇಂದ್ರ ಅರಣ್ಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವೇಳೆ ಕಪ್ಪತ್ತಗುಡ್ಡದ ವಿಚಾರವಾಗಿಯೂ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಕಾರಣದಿಂದಲೇ ನಿನ್ನೆ ಜನಪರ ಹೋರಾಟಗಾರ ಜೊತೆಗೆ ಕಪ್ಪತ್ತಗುಡ್ಡದ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರವಿಕೃಷ್ಣಾ ರೆಡ್ಡಿ, ಕಪ್ಪತ್ತಗುಡ್ಡಕ್ಕೆ ಸಂಬಂಧ ಪಟ್ಟಂತೆ ಇಂದು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಬೆಂಗಳೂರಿನಲ್ಲಿ ಏನೆಲ್ಲ ನಡೆಯುತ್ತಿರಬಹುದು ಎಂಬ ಗುಮಾನಿಯಲ್ಲಿ ಜನರಿರುವಾಗಲೇ ಇತ್ತ ಬಲ್ದೋಟ ಕಂಪನಿ ಅಧಿಕಾರಿಗಳು ಎಂದು ಹೇಳಿಕೊಂಡ ಒಂದು ತಂಡ ಕಪ್ಪತ್ತಗುಡ್ಡದ ಸೆರಗಿಗೆ ಭೇಟಿ ನೀಡಿದೆ.. ಇವೆಲ್ಲ ಬೆಳವಣಿಗೆ ನೋಡಿದರೆ ಸದ್ಯ ಎಲ್ಲವೂ ಸರಿಯಿಲ್ಲ ಎಂಬುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಂಪನಿಯ ಬಲದ ಮುಂದೆ ಯಾವ ಆದೇಶ ಯಾವಾಗ ತಲೆ ಕೆಳಗಾಗುತ್ತೋ ಗೊತ್ತಿಲ್ಲ. ಅಥವಾ ಕಂಪನಿಯ ಪೋಷಣೆಗೆ ಸರ್ಕಾರಗಳು ಮತ್ಯಾವ ವಾಮ ಮಾರ್ಗ ಹುಡುಕುತ್ತಾರೋ ಅದೂ ಗೊತ್ತಿಲ್ಲ. ಆದರೆ ಈ ಭಾಗದ ಜನರು, ಪರಿಸರವಾದಿಗಳು ಅಬ್ಬಾ ಅಂತೂ ಕಪ್ಪತ್ತಗುಡ್ಡ ರಕ್ಷಣೆಯಾಯಿತಲ್ಲ ಎಂದು ಸುಮ್ಮನಾಗಿರಬಹುದು. ಒಳಗೊಳಗೆ ಈಗಾಗಲೇ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಂದು ಹಿಂದೇಟು ಅನುಭವಿಸಿದ ಬಲ್ದೋಟ ಕಂಪನಿ ಮಾತ್ರ ವಿರಮಿಸುತ್ತಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗುತ್ತಿದೆ.

ಅತ್ತಿಕಟ್ಟಿಯಲ್ಲಿ ಚಿನ್ನದ ಗಣಿಗಾರಿಕೆಯ ಕೈಗಾರಿಕೆ ಸ್ಥಾಪನೆಯ ಉದ್ದೇಶಿತ ಸ್ಥಳಕ್ಕೆ ಬಲ್ದೋಟಾ ಕಂಪನಿ ಅಧಿಕಾರಿಗಳು ಭೇಟಿ ನೀಡಿದ್ದು

ಅತ್ತಿಕಟ್ಟಿ ಭಾಗದಲ್ಲಿ ಮತ್ತೆ ಬಲ್ದೋಟ ಕಂಪನಿ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಾರೆ. ಇದೆಲ್ಲ ಮತ್ತೆ ನಮಗೆ ಹಲವು ಸಂಶಯಗಳಿಗೆ ಎಡೆ ಮಾಡಿದೆ. ಮತ್ತೇನಾದರೂ ಬಲ್ದೋಟ ಕಂಪನಿ ಪ್ರಯತ್ನಗಳಿಗೆ ಮುಂದಾದರೆ ಮತ್ತೆ ಕಪ್ಪತ್ತಗುಡ್ಡಕ್ಕಾಗಿ ಹೋರಾಟ ಅನಿವಾರ್ಯ. ಯಾವುದೇ ಕಾರಣಕ್ಕೂ ಬಲ್ದೋಟ ಕಂಪನಿ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಿಡುವುದಿಲ್ಲ ಅಂತಾರೆ ಹೋರಾಟಗಾರ ರವಿಕಾಂತ ಅಂಗಡಿ.

ಬಲ್ದೋಟ ಕಂಪನಿ ಸಿಬ್ಬಂಧಿಗಳು ಅತ್ತಿಕಟ್ಟಿ ಭಾಗಕ್ಕೆ ಬಂದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ಮಾಹಿತಿ ಪಡೆಯುವೆ ಎಂದು ಡಿಎಫ್ಓ ಸೂರ್ಯಸೇನ ಉತ್ತರಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ಜನರನ್ನು ಕಾಡುತ್ತಿದೆ ಅನಾಥ ಪ್ರಜ್ಞೆ..!

ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳು

ಈ ಎಲ್ಲ ಬೆಳವಣಿಗೆ ನಡೆಯುತ್ತಿದ್ದಂತೆ ಅತ್ತಿಕಟ್ಟಿ ಸುತ್ತಮುತ್ತಲಿನ ಗ್ರಾಮದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥನೊಬ್ಬ, ಏನ್ ಮಾಡೋದ್ರಿ, ನಮ್ ಅಜ್ಜಾರ(ತೋಂಟದ ಸಿದ್ಧಲಿಂಗ ಶ್ರೀಗಳು) ಪ್ರಯತ್ನದಿಂದ ನಮ್ಮ ಅವ್ವನಂಗಿದ್ದ ಕಪ್ಪತ್ತಗುಡ್ಡ ನಮಗುಳದೈತಿ. ಈಗ ಮತ್ತೇನ.., ಕಂಪನಿಯಾರು ಬಂದು ಹೋಗಿ ಮಾಡಾಕತ್ಯಾರ್, ಏನ್ ಆಗುತ್ತೋ ಅಂತ ನಮಗ ಚಿಂತಿ ಹತ್ತೈತಿ. ನಮಗೆ ಹಿಡಕೊಂಡ ಬಡದಾಡಿದ ಆ ನಮ್ ಅಪ್ಪ(ಶ್ರೀಗಳು) ಹ್ವಾದ್ ಮ್ಯಾಲ ನಾವು ಅನಾಥರಾಗೇವಿ ನೋಡ್ರಿ. ಈಗ ನಮಗ್ಯಾರ ಅದಾರ ಅಂಥ ನೆನಿಸ್ಕೊಂಡ್ರ ಕಣ್ಣಾಗ್ ನೀರ ಬರ್ತಾವು ಅಂತ ತನ್ನ ದುಖ: ಹೇಳಿಕೊಂಡ. ಇದು ಕೇವಲ ಆ ಒಬ್ಬ ವ್ಯಕ್ತಿಯ ಮಾತಲ್ಲ ನಾಡಿನ ಬಹುತೇಕ ಜನಪರ,ಜೀವಪರ ಮನಸ್ಸುಗಳ ಅಭಿಪ್ರಾಯವೂ ಹೌದು. ಏನೇ ಆಗಲಿ ಬಲ್ದೋಟ ಕಂಪನಿ ಈಗಾಗಲೇ ತನ್ನ ಪ್ರಯತ್ನದಿಂದ ಬಹಳಷ್ಟು ಆಳಕ್ಕೆ ಇಳಿದಿದೆ. ಈ ನಿಟ್ಟಿನಲ್ಲಿ ತೋಂಟದಾರ್ಯ ಮಠದ ಸದ್ಯದ ಪೀಠಾಧಿಪತಿ ತೋಂಟದ ಸಿದ್ಧರಾಮಶ್ರೀಗಳು ಕೂಡ ಜೀವಪರ ಕಾಳಜಿಯ ಮನಸ್ಸುಳ್ಳುವರು. ಸಿದ್ಧಲಿಂಗ ಶ್ರೀಗಳ ತತ್ವಾದರ್ಶಗಳನ್ನು ಪಾಲಿಸುವವರು. ಹೀಗಾಗಿ ಅವರು ಕೂಡ ನಮಗೆ ತೋಂಟದ ಶಿದ್ಧಲಿಂಗ ಶ್ರೀಗಳ ಸ್ಥಾನ ತುಂಬಿ ಕೊಡುತ್ತಾರೆ ಎನ್ನುವ ವಿಶ್ವಾಸವೂ ಬಹುತೇಕರಲ್ಲಿದೆ

Exit mobile version