VTU ಸೇರದಂಗ ಉಳಿದ್ ವಿದ್ಯಾರ್ಥಿಗಳು ಹೇಳೋದ್ ಹಂಗ…! ಆದ್ರ ನಮ್ ಸಿಎಂ ಸಿಎಂ ಹೇಳಿದ್ದ ಏನು..??

ಹಲೋ ಎಲ್ಲಿದಿಲೇ ಚೇತ್ಯಾ..!, ಅಂದ್ಹಂಗ ನಿನ್ನೇ ನಮ್ಮ ಸಿಎಂ ಸಾಹೇಬ್ರು ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಮಾಡ್ಯಾರಂತ. ಒಂದೀಟು ಪೇಪರ್ ಹಣಿಕ್ಯಾಕಿ ನೋಡಲ್ಲ, ನಮ್ದೇನಾರಾ ಬಂದೈತೇನಾ ಅಂತಾ ಜುವೆಲ್, ಚೇತನ್ ಗೆ ಕಾಲ್ ಮಾಡಿದ್ದ.

ಇನ್ನು ನಿದ್ದಿ ಗಣ್ಣಾಗ್ ಫೋನ್ ಎತ್ತಿ ಮಾತಾಡಿದ್ ಚೇತನ್, ಈ ವಿಷಯ ಕೇಳಿ ಅದೇನ್ ಅವರಸ ಅಂತಿರಿ ದಡಬಡಾಯಿಸಿ ಎದ್ದ, ಇಂವಾ ಎದ್ದಿದ್ ನೋಡಿ ಮನಿಮಂದಿಯಲ್ಲ ಇಂವಂಗೇನಾತು? ಅಂತ ಕಣ್ ಬಿಟ್ಟು ನೋಡಿದ್ರ. ಭಾಳ್ ಅವಸರದಾಗ ಒಂದೊಂದು ಗುಂಡಿ ಏರುಪೇರು ಹಾಕ್ಕೊಂಡು ಚೇತ್ಯಾ ಬಸ್ ಸ್ಟ್ಯಾಂಡ್ ಕಡಿಗೆ ಹೊಂಟ.

ಅಂದ್ಹಂಗ ಚೇತ್ಯಾನ ಈ ಅವರಸಕ್ಕ ಕಾರಣ ಏನಿರಬಹುದು, ಅಂತ ಭಾಳ್ ಕುತೂಹಲ ಮೂಡಿರಬೇಕಲ್ಲ. ಇಲ್ಲೇ ಇರೋದು ನೋಡ್ರಿ ಮಜಾ. ಸ್ವಲ್ಪ ದಿನದ್ ಹಿಂದ, ವಿಟಿಯು ವಿದ್ಯಾರ್ಥಿಗಳು ಒಂದ್ ಅಭಿಯಾನ ಶುರು ಮಾಡಿದ್ರು. ನಮಗ ಪರೀಕ್ಷೆ ಬ್ಯಾಡ. ಆನ್ಲೈನ್ ಕ್ಲಾಸ್ ಸರಿಯಾಗಿ ತಿಳಿವಲ್ದು, ಹಂಗಾಗಿ ಎಲ್ಲರ್ನೂ ಪಾಸ್ ಮಾಡಿ ಬಿಡ್ರಿ ಅಂತ ಸೋಶಿಯಲ್ ಮಿಡಿಯಾದಾಗ ಇವರ ಈ ಮನವಿ ಭಾಳ್ ಸದ್ದ ಮಾಡಿತ್ತು. ಹಿಂಗಾಗಿ ನಿನ್ನೆ ಬೆಂಗಳೂರು ವಿಧಾನಸೌಧದಾಗ ಸಿಎಂ ಬಿ.ಎಸ್.ಯಡಿಯೂರಪ್ಪ ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ನಡೆಸಿದ್ರು. ಅದಕ್ಕ ತಮ್ಮ ಬೇಡಿಕೆ ಬಗ್ಗೆ ಸಭೆಯೊಳಗ ಏನಾರ ಚರ್ಚೆಯಾಗಬಹುದು ಅಂತ ನಮ್ಮ ವಿಟಿಯು ವಿದ್ಯಾರ್ಥಿಗಳು ಕಣ್ ಬಿಟ್ ಕುಂತಿದ್ರು. ಇದು ಬರೀ ವಿಟಿಯು ಅವರದ್ ಅಷ್ಟ ಅಲ್ರಿ ಉನ್ನತ ಶಿಕ್ಷಣದಲ್ಲಿರೋ ಭಾಳ್ ವಿಭಾಗದ ವಿದ್ಯಾರ್ಥಿಗಳದ್ ಕಥಿ ಐತ್ರಿ.

ಅಂದ್ಹಂಗ್ ಪೇಪರ್ ಓದಾಕ್ ಹ್ವಾದ್ ನಮ್ಮ ಚೇತ್ಯಾ ಬರೂದು ಇನ್ನೂ ತಡಾ ಆಗಬಹುದು ಅಷ್ಟರೊಳಗ ಇವ್ರ ಬಗ್ಗೆ ಸಣ್ಣದಾಗಿ ವಿವರಿಸ್ತಿನಿ ನೋಡ್ರಿ. ಈಗಾಗ್ಲೆ ಆನ್ಲೈನ್ ತರಗತಿಗಳು ಭಾಳ್ ವಿದ್ಯಾರ್ಥಿಗಳಿಗೆ ಅರ್ಥ ಆಗಿಲ್ಲಂತ. ಇನ್ನು ಕೆಲವು ವಿದ್ಯಾರ್ಥಿಗಳು ಹಳ್ಯಾಗಿರೋದ್ರಿಂದ ನೆಟ್ ವರ್ಕ್ ಸಮಸ್ಯೆ. ಇನ್ನು ಕೆಲವರಿಗಂತೂ ಮೊಬೈಲ್ ಇಲ್ಲದ್ ಸಮಸ್ಯೆ. ಇಷ್ಟೆಲ್ಲ ಸಮಸ್ಯೆದಾಗ ಆನ್ಲೈನ್ ಕ್ಲಾಸ್ ಎಷ್ಟ ಮಂದಿ ತಲಿ ಹೊಕ್ಕಿರಬಹುದು ನೀವಾ ವಿಚಾರ ಮಾಡ್ರಿ ಅಂತ ವಿದ್ಯಾರ್ಥಿಗಳು ಹೇಳಿಕೊಂಡಿದ್ರು.

ಇನ್ನೊಂದು ವಿಚಿತ್ರ ಗೊತ್ತನ್ರಿ, ಒಬ್ಬ ಹುಡುಗಂತೂ ಹ್ಯಾಂಗಾರ ಪ್ರಯತ್ನ ಮಾಡಿ ಆನ್ಲೈನ್ ಕ್ಲಾಸ್ ಸೇರಬೇಕು ಅಂತ ಊರಾಗ್ ಮೊಬೈಲ್ ನೆಟ್ ವರ್ಕ್ ಬರಲಿಲ್ಲಾ ಅಂದ್ರು ಊರ್ ಹೊರಗ್ ಬಂದ್ ಗಿಡಾ ಏರಿ ತುತ್ತ ತುದಿಗೆ ಕುಂತ್ ಕ್ಲಾಸ್ ಕೇಳತಿದ್ದನ್ರಿ. ಯಪ್ಪಾ ಎಂಥಾ ಸ್ಥಿತಿರೀ ಸ್ವಲ್ಪ ಯಾಮಾರಿದ್ರು ಅವನ್ ಪರಿಸ್ಥಿತಿ ಏನ್ ಆಗಬಾರ್ದು. ಹಿಂಗ್ ಭಾಳ್ ಮಂದಿ ಒಂದೊಂದು ರೀತಿಯ ಕಷ್ಟ ಅನುಭವಿಸ್ಯಾರ.

ಇದರ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿ ಎಲ್ಲರ್ನೂ ಪಾಸ್ ಮಾಡೋದು ನನ್ನ ಕೈಯಾಗಿಲ್ಲ. ಅದು ಸರ್ಕಾರದ್ ಮಟ್ಟದಾಗ ಆಗಬೇಕಾದ್ ಕೆಲ್ಸಾ ಅಂತ ಹೇಳಿದ್ರ. ಹಿಂಗಾಗಿ ಸಹಜವಾಗಿ ವಿದ್ಯಾರ್ಥಿಗಳು ಕಣ್ಣು ನಿನ್ನೆ ನಡೆದ ಸಭೆ ಕಡೆಗೆ ಹೋಗಿದ್ವು. ಆದ್ರ ಏನ್ ಆತು ಅಂತ ಗೊತ್ತಾಗಿರಲಿಲ್ಲ.

ಅಂದ್ಹಂಗ್ ತಡಿರಿ ಅಗೋ ಅಲ್ಲಿ ಪೇಪರ್ ಓದಾಕ್ ಹ್ವಾದ್ ನಮ್ಮ ಚೇತ್ಯಾ ಬಂದಂಗ್ ಕಾಣಾಕತ್ತೈತಿ. ಏನ್ ಸುದ್ದಿ ತಂದ್ನೋ ಏನೋ…? ಅಲೀ ಇವ್ನ ಹುರುಪಿಲೇ ಹ್ವಾದ್ ಚೇತ್ಯಾ ಹ್ಯಾಪ್ ಮಾರಿ ಹಾಕ್ಕೊಂಡು ಬರಾಕತ್ತಾನಲ್ಲ…! ಇರ್ಲಿ ಮೊದ್ಲ ಬರ್ಲಿ ಆ ಮೇಲೆ ಏನಾತು ಅಂತ ಕೇಳಾಣ.

ಅಷ್ಟರೊಳಗ ಮತ್ ಫೋನ್ ರಿಂಗಾತು. ಇದರ ಬಗ್ಗೆ ವಿಚಾರ ಮಾಡಾಕ ಜುವೆಲ್ ಫೋನ್ ಮಾಡಿದ್ದ. ಫೋನ್ ಎತ್ತಿ ಚೇತ್ಯಾ ಹೇಳ್ತಾನ, ಇಲ್ಲಲೇ ಜುವೆಲ್ ನಮ್ಮ ಬೇಡಿಕೆ ಬಗ್ಗೆ ಏನು ಚರ್ಚೆ ಆಗಿಲ್ಲ. ಸಿಎಂ ಸಾಹೇಬರು ಇನ್ನು ಪರಿಣಾಮಕಾರಿಯಾಗಿ ಆನ್ಲೈನ್ ಕ್ಲಾಸ್ ಮಾಡ್ರಿ ಅಂತ ಅಧಿಕಾರಿಗಳಿಗೆ ಸೂಚನಾ ಕೊಟ್ಟಾರ. ಹಿಂಗಾಗಿ ಮತ್ತು ನಮ್ಗ ಗಿಡ ಏರೋದು, ಮಾಳಗಿ ಹತ್ತೋದರ ಜೊತಿಗೆ ಆನ್ಲೈನ್ ಕ್ಲಾಸ್ ಕೇಳಾಕ ಸರ್ಕಸ್ ಮಾಡೋದ್ ತಪ್ಪಂಗ್ ಕಾಣವಲ್ದು ಅಂದ. ಆ ಕಡೆಯಿಂದ ಮಾತಾಡ್ತಿದ್ ಜುವೆಲ್ ನ ಧ್ವನಿನೂ ಸ್ವಲ್ಪ ಸಪ್ಪಾತು.

ಇದು ನೋಡ್ರಿ ಕಥಿ. ಆದ್ರೂ ಉನ್ನತ ಶಿಕ್ಷಣದಾಗ ಕ್ಲಾಸ್ ನ್ಯಾಗ್ ಕುಂತ್ ಕೇಳಿದ್ರ ಒಮ್ಮೊಮ್ಮೆ ಅರ್ಥ ಆಗ್ತಿರಂಗಿಲ್ಲ, ಅಂಥಾದ್ರಾಗ ಆನ್ಲೈನ್ ಎಷ್ಟ ಪರಿಣಾಮಕಾರಿ ಅಂತ ವಿದ್ಯಾರ್ಥಿಗಳು ಕೇಳಾಕತ್ಯಾರ. ಇದಕ್ಕ ಉನ್ನತ ಶಿಕ್ಷಣ ಇಲಾಖೆ ಏನಾರಾ ಪರಿಹಾರ ಕಂಡುಕೊಳ್ ಬೇಕಾಗೈತಿ.

Exit mobile version