ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಕೇರಳದಲ್ಲಿ ನಡೆದಿದೆ. ಅಂಚಲ್ ನಿವಾಸಿ ಎಸ್.ಉತ್ತರ ಎಂಬ 25 ವರ್ಷದ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ. ಆದರೆ ಮಹಿಳೆ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪತ್ನಿಯನ್ನು ಕೊಲೆ ಮಾಡಿದ ಪತಿ ಸೂರಜ್ ನನ್ನು ಬಂಧಿಸಿದ್ದಾರೆ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸೂರಜ್ ರೂ.10 ಸಾವಿರ ನೀಡಿ ಹಾವಾಡಿಗ ಸುರೇಶ್ ನಿಂದ ಹಾವನ್ನು ತರಿಸಿದ್ದ. ಬಳಿಕ ತನ್ನ ರೂಮ್ ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ಅಂದುಕೊಂಡಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖಳಾಗಿ ತವರು ಮನೆಗೆ ತೆರಳಿದ್ದಳು. ಆದರೆ ಎರಡನೇ ಬಾರಿ ಸುರೇಶ್ ನಿಂದ ಹಾವನ್ನು ಬಾಡಿಗೆ ಪಡೆದು ಪತ್ನಿ ಮಲಗಿದ್ದಾಗ ಅದನ್ನು ಬಿಟ್ಟಿದ್ದಾನೆ. ಎರಡನೇ ಬಾರಿ ಹಾವು ಕಚ್ಚಿದ್ದರಿಂದ ಪತ್ನಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಳಿಯ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ಸಹ ಪೋಷಕರು ದೂರಿದ್ದಾರೆ.
ಹಾವು ಬಿಟ್ಟು ಪತ್ನಿ ಕೊಲೆ ಮಾಡಿದ ಪತಿ!
