ಬೆಂಗಳೂರು: ರಾಜ್ಯಕ್ಕೆ ಇನ್ನೂ ಮೂರು ತಿಂಗಳು ಮಹಾ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ ಬಹಿರಂಗವಾಗಿದೆ.
ಹೀಗಾಗಿ ಟ್ರೈನ್, ಅಂತರ್ ರಾಜ್ಯ ಬಸ್ ಸೇವೆ ಇನ್ನೂ ಒಂದು ತಿಂಗಳು ಬೇಡ. ಅದರಲ್ಲೂ ಮಹಾರಾಷ್ಟ್ರಕ್ಕಂತೂ ಬಸ್ ಸೇವೆ ಬೇಡವೇ ಬೇಡ. ಒಂದು ವೇಳೆ ಕರೆತಂದರೂ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ. ಹಾಗೆಯೇ ಹೆಚ್ಚಿನ ಜನರನ್ನು ಒಟ್ಟಿಗೆ ಕ್ವಾರಂಟೈನ್ ಮಾಡಬೇಡಿ ಎಂದು ತಜ್ಞರು ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ನಾನಾ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು 1.69 ಲಕ್ಷ ಜನ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 43 ಸಾವಿರಕ್ಕೂ ಅಧಿಕ ಜನ ಮಹಾರಾಷ್ಟ್ರದಿಂದ ಬರಲು ಸಿದ್ಧರಾಗಿದ್ದಾರೆ. ಹೀಗಾಗಿ ಸರ್ಕಾರ ಮೇ. 31ರ ವರೆಗೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಲು ಒಪ್ಪಿಗೆ ನೀಡಿಲ್ಲ. ಆದರೆ ಸೋಮವಾರದವರೆಗೆ ಸೇವಾ ಸಿಂಧುವಿನಡಿ ನೋಂದಣಿ ಮಾಡಿಕೊಂಡವರಿಗೆ ಅನುವು ಮಾಡಿದೆ. ಒಂದು ವೇಳೆ ಸರ್ಕಾರ ಮಹಾರಾಷ್ಟ್ರದಲ್ಲಿ ಸಿಲುಕಿದ ರಾಜ್ಯದ ಜನರಿಗೆ ಅವಕಾಶ ಮಾಡಿಕೊಟ್ಟರೆ ಇಲ್ಲಿಯ ಸ್ಥಿತಿಯಂತೂ ಅಲ್ಲೋಲ ಕಲ್ಲೋಲವಾಗಲಿದೆ.
ಕರ್ನಾಟಕಕ್ಕೆ ಈಗಾಗಲೇ ಮುಂಬೈ ಮಹಾರಾಷ್ಟ್ರದಿಂದ ಬೆಟ್ಟ ಗುಡ್ಡ ಹತ್ತಿ ಹೈವೇ ತಪ್ಪಿಸಿ ಕಳ್ಳದಾರಿಯಲ್ಲಿ ಅನೇಕರು ಬಂದಾಗಿದೆ. ಇವರ ಲೆಕ್ಕ ಇನ್ನೂ ಸಿಕ್ಕಿಲ್ಲ. ಇವರು ಕೊರೊನಾ ಹಂಚಿದರೆ ಇನ್ನೂ ಮೂರು ತಿಂಗಳು ರಾಜ್ಯಕ್ಕೆ ಅಪಾಯ ಕಾದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
