ಬಂಗಾಳದಲ್ಲಿ ಕೊರೊನಾದೊಂದಿಗೆ ಚಂಡಮಾರುತದ ಕಾಟ!

ಕೋಲ್ಕತಾ : ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಸೈಕ್ಲೋನ್ ರುದ್ರನರ್ತನ ಮುಂದುವರೆದಿದ್ದು, 12 ಜನ ಬಲಿಯಾಗಿದ್ದಾರೆ.

ಕೊರೊನಾ ವೈರಸ್ ನ ಹಾವಳಿಯ ಮಧ್ಯೆಯೇ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸುತ್ತಿದೆ. ಗಂಟೆಗೆ ಸುಮಾರು 185 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಮಳೆಗೆ ಸಾವಿರಾರು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಅಲ್ಲದೇ, ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ.

ಈ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಬಂಗಾಳದಲ್ಲಿ ಎದುರಾಗಿರುವ ಕೊರೊನಾ ಸಾಂಕ್ರಾಮಿಕ ರೋಗಕ್ಕಿಂತಲೂ ಚಂಡಮಾರುತದ ದುರಂತವೇ ದೊಡ್ಡದಾಗಿದೆ. 5 ಲಕ್ಷ ಜನರನ್ನು ಸ್ಥಳಾಂತರ ಮಾಡದೇ ಹೋಗಿದ್ದರೆ, ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸುವುದಕ್ಕೂ ಕಷ್ಟವಾಗುತ್ತದೆ. ಚಂಡಮಾರುತದಿಂದ ಎದುರಾಗಿರುವ ನಷ್ಟ ಇನ್ನೂ ತಿಳಿದುಬಂದಿಲ್ಲ. ರೂ.1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ನಮಗೆ ಎಲ್ಲರ ಸಹಕಾರ ಬೇಕಿದೆ. ರಾಜಕೀಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಕೇಂದ್ರದ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ.

ಚಂಡಮಾರುತದ ಅಬ್ಬಕ್ಕೆ 75,000ಕ್ಕೂ ಹೆಚ್ಚು ಜನರು ಇದೀಗ ನಿರ್ಗತಿಕರಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿರುವ ಜನರಿಗೆ ಸೂಕ್ತ ರೀತಿಯ ಆಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿರುವ ಪರಿಣಾಮ ಕರಾವಳಿ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅಧಿಕಾರಿಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.

Exit mobile version