ಚೀನಾ ಹಿಂದಿಕ್ಕಿ ಸಾಗುತ್ತಿದೆ ಭಾರತ!

ನವದೆಹಲಿ: ಮಹಾಮಾರಿ ಕೊರೊನಾ ಭಾರತದಲ್ಲಿ ತನ್ನ ಉಗ್ರ ಪ್ರತಾಪ ಮುಂದುವರೆಸಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3,904 ಜನರಲ್ಲಿ ಸೋಂಕು ಇರುವುದು ದೃಢ ಪಟ್ಟಿದೆ.

ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 85 ಸಾವಿರ ಗಡಿ ದಾಟಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದೆ.

ಇದರ ಜೊತೆಗೆ ಅತೀ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪೈಕಿ 11ನೇ ಸ್ಥಾನಕ್ಕೆ ಏರಿಕೆ ಕಂಡಿದೆ. 1.16ಲಕ್ಷ ಸೋಂಕಿತರು ಇರುವ ಇರಾನ್ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಪತ್ತೆಯಾಗುತ್ತ ಹೋದರೆ, ಇರಾನ್ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ತೀರಾ ದೂರವೇನೂ ಇಲ್ಲ.

2019ರ ನ.17ರಂದು ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಈ ನಡುವೆ ಮೃತರ ಸಂಖ್ಯೆಯಲ್ಲಿ ಭಾರತದ ಚೀನಾ ಮಟ್ಟಕ್ಕೆ ತಲುಪಿಲ್ಲ ಎಂಬುವುದು ತುಸು ಸಮಾಧಾನಕರ ವಿಚಾರವಾಗಿದೆ.

Exit mobile version