ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಚರ್ಚಿಸಿದ ಮೋದಿ – ಯಾವೆಲ್ಲ ಚರ್ಚೆಗಳಾದವು?

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಂಟೈನ್ ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಚಿಕೆ ಆರಂಭಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದರು.

ದೇಶಾದ್ಯಂತ 54 ದಿನಗಳ ಲಾಕ್ ಡೌನ್ ಮೇ. 17ಕ್ಕೆ ಅಂತ್ಯವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಐದನೇ ಬಾರಿ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದರು. ಮೇ. 4 ರ ನಂತರ ದೇಶದಲ್ಲಿ ದೊಡ್ಡ ಪ್ರಮಾಣದ ವಲಸೆ ಕಾರ್ಮಿಕರು ನಗರಗಳಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದು, ವಲಸೆ ಕಾರ್ಮಿಕರಿಂದ ಉಂಟಾದ ಸಮಸ್ಯೆಗಳ ಕುರಿತು ಚರ್ಚಿಸಿದರು.

ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯಾವುದೇ ಕಾರಣಕ್ಕೆ ಹಿಂದೆ ಸರಿಯಬಾರದು. ಇಲ್ಲಿಯವರೆಗೂ ತೆಗೆದುಕೊಂಡಿರುವ ಕಠಿಣ ಕ್ರಮಗಳನ್ನೇ ಮುಂದುವರೆಸಬೇಕು ಎಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳಿಗೆ ಸಲಹೆ ನೀಡಿದ್ದಾರೆ.

ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು ಪ್ರಮುಖವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ಸು ಕಂಡಿದ್ದು, ಸಾಮಾಜಿಕ ಅಂತರದಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.

Exit mobile version