ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?

ಬಳ್ಳಾರಿ: ಆರೋಗ್ಯ ಇಲಾಖೆ ಹೊರಗುತ್ತಿಗೆ ಕಾರ್ಮಿಕನೊಬ್ಬನ ಬದುಕು ಇದೀಗ ಬೀದಿಗೆ ಬರುವ ಆತಂಕದಲ್ಲಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನಗು-ಮಗು ವಾಹನಕ್ಕೆ ನೇಮಕಗೊಂಡಿದ್ದ ಚಾಲಕನನ್ನು ಕೆಲವೇ ತಿಂಗಳಲ್ಲಿ ಕೆಲಸದಿಂದ ತೆಗೆದು ಹಾಕುವ ಮೂಲಕ ಹೊರಗುತ್ತಿಗೆ ಕಂಪನಿ ಕಾರ್ಮಿಕನಿಗೆ ಅನ್ಯಾಯವೆಸಗಿದೆ. ಈ ಘಟನೆ ನಡೆದಿದ್ದು ಸ್ವತಃ ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲಿ..!

ಬೆಳಗಾವಿ ಮೂಲದ ಲಯನ್ಸ್ ಸೆಕ್ಯೂರಿಟಿ ಸರ್ವಿಸ್ ಹೊರಗುತ್ತಿಗೆ ಆಧಾರದ ಮೇಲೆ ಶ್ರೀನಾಥ್ ನಾಯ್ಕ ಅವರನ್ನು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನಗು-ಮಗು ವಾಹನ ಚಾಲಕರೆಂದು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿತ್ತು.

ನೇಮಕಕ್ಕೂ ಮೊದಲೇ ಬಿಡುಬಗಡೆ ಪತ್ರ

2-12-2019 ರಂದು ಶ್ರೀನಾಥ್ ನಾಯ್ಕ ಕೆಲಸಕ್ಕೆ ಹಾಜರಾದರು. ಈ ಬಗ್ಗೆ ಅಧಿಕೃತ ಪತ್ರ ಕೂಡ ಲಯನ್ಸ್ ಎಜನ್ಸಿ ನೀಡಿದೆ. ಆದರೆ ಬಿಡುಗಡೆಯ ಪತ್ರದ ದಿನಾಂಕ 23-01-2020 ಎಂದು ನೀಡಿದೆ. ಆದರೆ ಈ ಪತ್ರ ಕಚೇರಿಗೆ ಸ್ವೀಕೃತಗೊಂಡ ದಿನಾಂಕ 29-04-2020. ಇದಾದ ನಂತರ ಬೇರೊಬ್ಬರಿಗೆ 9-01-2020 ಎಂದು ಆದೇಶ ನೀಡಿದೆ. ಇದನ್ನೆಲ್ಲ ನೋಡಿದಾಗ ಇಲ್ಲದ ನೆಪವೊಡ್ಡಿ ಕಾರ್ಮಿಕನೊಬ್ಬನನ್ನು ಉದ್ದೇಶ ಪೂರ್ವಕವಾಗಿಯೇ ಲಯನ್ಸ್ ಕಂಪನಿ ತೆಗೆದು ಹಾಕಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಮಿಕನಿಗೆ ಅನ್ಯಾಯ

ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕನನ್ನು ನೇಮಿಸಿಕೊಂಡು ನಾಲ್ಕು ತಿಂಗಳ ನಂತರ ನೌಕರನ ಸೇವಾನುಭವ ಕುರಿತು ಇಲಾಖೆ ಅಧಿಕಾರಿಗಳು ವರದಿ ನೀಡಬೇಕು. ಇನ್ನು ಬೇರೆ ಉದ್ಯೋಗಿಯನ್ನು ನೇಮಕ ಮಾಡಿಕೊಳ್ಳಬೇಕಾದರೆ ಆರೋಗ್ಯ ಇಲಾಖೆ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯಬೇಕು. ಇನ್ನು ಒಬ್ಬ ಕಾರ್ಮಿಕನನ್ನು ಕೆಲಸದಿಂದ ತೆಗೆದು ಹಾಕಲು ಕೆಲವು ನಿಯಮಗಳಿವೆ. ಮುಖ್ಯವಾಗಿ ಲಾಕ್ ಡೌನ್ ಸಮಯದಲ್ಲಿ ಕಾರ್ಮಿರನ್ನು ಕೆಲಸದಿಂದ ತೆಗೆದು ಹಾಕಲು ಸಾಧ್ಯವೇ ಇಲ್ಲ. ಆದಾಗ್ಯೂ ಯಾವ ಆಧಾರದ ಮೇಲೆ ಈ ಕಾರ್ಮಿಕನನ್ನು ಲಯನ್ಸ್ ಕಂಪನಿ ತೆಗೆದು ಹಾಕಿದೆ ಎಂಬುದೇ ಪ್ರಶ್ನೆಯಾಗಿದೆ. ಇನ್ನು ಇಲಾಖೆ ಅಧಿಕಾರಿಗಳಿಗೆ ಮಾತ್ರ ಶ್ರೀನಾಥ್ ನಾಯ್ಕ್ ಕಾರ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.  

ಕುಂಟು ನೆಪ ಒಡ್ಡಿದ ಲಯನ್ಸ್ ಏಜೆನ್ಸಿ?

ಹೊರಗುತ್ತಿಗೆ ಪಡೆದಿರುವ ಲಯನ್ಸ್ ಏಜನ್ಸಿ ಚಾಲಕನ ಅನುಭವದ ಕೊರತೆಯ ನೆಪವೊಡ್ಡಿ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಬಿಡುಗಡೆಯ ಪತ್ರದಲ್ಲಿ ಸೂಚಿಸಿದೆ. ಆದರೆ ನೇಮಕಾತಿ ವೇಳೆ ಯಾವ ಮಾನದಂಡದ ಮೇಲೆ ಲಯನ್ಸ್ ಏಜನ್ಸಿ ಈ ಚಾಲಕನನ್ನು ನೇಮಕ ಮಾಡಿಕೊಂಡಿತು? ಹಾಗೂ ಈತನ ಕೆಲಸದ ಅನುಭವದ ಬಗ್ಗೆ ವರದಿ ನೀಡಬೇಕಾಗಿರುವುದು ವೈದ್ಯಾಧಿಕಾರಿಗಳು. ಆದರೆ ಯಾವುದೇ ಪೂರ್ವಾಪರ ಯೋಚನೆ ಮಾಡದೇ ಶ್ರೀನಾಥ್ ನನ್ನು ಕೆಲಸದಿಂದ ತೆಗೆದಿದ್ದು ಏಕೆ? ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.

ಮುಖ್ಯ ವೈದ್ಯಾಧಿಕಾರಿಯ ಪತ್ರಕ್ಕೂ ಪ್ರತಿಕ್ರಿಯಿಸದ ಏಜನ್ಸಿ

ಈ ಬಗ್ಗೆ ಸ್ವತಃ ತಾಲೂಕು ಮುಖ್ಯ ವೈದ್ಯಾಧಿಕಾರಿಗಳು ಬೆಳಗಾವಿಯ ಲಾಯನ್ಸ್ ಏಜನ್ಸಿಗೆ ಹಾಗೂ ಮೇಲಧಿಕಾರಿಗಳಿಗೆ ಪತ್ರ ಬರೆದು ಕೆಲಸದಿಂದ ತೆಗೆದು ಹಾಕುವ ಕುರಿತು ಮುಂಚಿತವಾಗಿ ಯಾವುದೇ ನೋಟಿಸ್ ನೀಡಿಲ್ಲ. ಸುಳ್ಳು ನೆಪವೊಡ್ಡಿ ಏಕಪಕ್ಷೀಯವಾಗಿ ಕೆಲಸದಿಂದ ತೆಗೆಯಲಾಗಿದೆ. ಹೊಸ ನೇಮಕಾತಿ ಪ್ರಕ್ರಿಯೇ ಪಾರದರ್ಶಕವಾಗಿರುವುದು ಕಂಡುಬರುತ್ತಿಲ್ಲ  ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಲಾಯನ್ಸ್ ಏಜನ್ಸಿ ಮಾತ್ರ ಈವರೆಗೂ ಪ್ರತಿಕ್ರಿಯಿಸಿಲ್ಲ.

ಏಜನ್ಸಿಗೆ ಯಾರ ಕುಮ್ಮಕ್ಕೂ?

ಇಲಾಖೆ ಒಂದರಲ್ಲಿ ಹೊರ ಸಂಪನ್ಮೂಲ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಂಡು ಸೇವೆ ಒದಗಿಸುವ ಕೆಲಸ ಸಂಸ್ಥೆಯದ್ದು. ಆದರೆ ತನ್ನ ಯಡವಟ್ಟಿನ ಬಗ್ಗೆ ಗಮನಕ್ಕೆ ತಂದಾಗಲೂ ಇಲಾಖೆ ಅಧಿಕಾರಿಗಳ ಪತ್ರಕ್ಕೆ ಏಜನ್ಸಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಂಶಯಕ್ಕೀಡು ಮಾಡುತ್ತಿದೆ. ಈ ಏಜನ್ಸಿ ಪ್ರಭಾವಿಗಳ ಒಡೆತನದಲ್ಲಿದೆಯೇ ಎನ್ನುವ ಬಗ್ಗೆ ಕೆಲವರು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ.

ಶ್ರೀನಾಥನ ಸಂಕಷ್ಟ..

ನಾನು ಬಡವ ವಯಸ್ಕ್ ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಲಾಯನ್ಸ್ ಕಂಪನಿಯಿಂದಾಗಿ ನನ್ನ ಕುಟುಂಬ ನಿರ್ವಹಣೆಗೆ ತೊಂದರೆ ಯಾಗುತ್ತದೆ. ಲಾಕ್ ಡೌನ್ ಪರಿಸ್ಥಿತಿಯಲ್ಲಿ ತೆಗೆದಿದ್ದು ಎಷ್ಟು ಸರಿ? ಬಿಡುಗಡೆ ಆದೇಶ ಹಿಂಪಡೆದ ಮತ್ತೆ ಸೇವೆಯಲ್ಲಿ ಮುಂದುವರೆಸಲು ಅನು ಮಾಡಿಕೊಡಬೇಕು ಎಂದು ಚಾಲಕ ಶ್ರೀನಾಥ್ ನಾಯ್ಕ್ ಆರೋಗ್ಯ ಸಚಿವ ಶ್ರೀರಾಮುಲು, ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version