ಕೊರೋನಾ ಕಾವ್ಯ-2

ಮೂರು ಕವನ ಸಂಕಲನಗಳನ್ನು ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದವರು ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಕೊರೊ ನಾ

ಮರೆತಂತಿದೆ ಘಳಿಗೆ, ವಾರ, ತಿಥಿ

ನಿಧಾನ ಗೆದ್ದಿಲು ತಿನ್ನುತ್ತಿದೆ ಮಿತಿ.

ದುಡಿದಾಡಿದ ಕೈಗಳಿಗೀಗ ಕೆಲಸವಿಲ್ಲ.

ಅಡುಗೆ ಮನೆಯ ದೀಪ, ಒಲೆ ಗುಂಡಿನ  ಬಿಸಿ ಆರಿದಂತಿಲ್ಲ.

ಪೈಪೊಟಿಗೆ ಬಿದ್ದು ಮೇಲಕ್ಕೆ ಬೆಳೆಯುತ್ತಿದ್ದವರೆಲ್ಲ

ಈಗ ಅಡ್ಡಕ್ಕೆ ತಿರುಗಿದ್ದಾರೆ.

ಅನುಭವದ ವ್ಯಾಪ್ತಿ ಹೆಚ್ಚಿಸಲೆಂದು ಕಸರತ್ತು ನಡೆಸಿದವರೀಗ

ಬದಲಾಗುತ್ತಿರುವ ತಮ್ಮದೆ ಅಳತೆಯ ವ್ಯಾಪ್ತಿ ನೋಡಿಕೊಳ್ಳುತ್ತಿದ್ದಾರೆ.

ಅಪ್ಪನಿಗೆ ಬರಿದಾಗುತ್ತಿರುವ ದಿನಸಿಯ ಚಿಂತೆ

ಮಗನಿಗೆ ಪೋಲಿಸ್ ರ ಲಾಟಿ ಏಟಿಗೆ ಕುಣಿವವರ ನೋಡುವುದೆ ಮೋಜು.

ಏನು ನಿಂತರೂ ತಾನು ನಿಲ್ಲದ ಹಸಿವಿಗೆ

ಹೊತ್ತು ಹೊತ್ತಿಗೆ ಹೊಂದಿಸಲೇನೆಂದು ಅಮ್ಮಗೂ ದಿಗಿಲು.

ಕುಳಿತಲ್ಲೇ ಜಗದ ದೋಷ ಹುಡುಕಿ ಮಹಾ ಉಪದೇಶ ಕೊಡುವುದು ಈ ಮಕ್ಕಳಿಗೊಂದು ಅಮಲು.

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ….

ನನ್ನವರು ನಿನ್ನವರೂ ಎಂದು ಯಾರಿಗೂ ಭೇದವಿಲ್ಲ

ಹಣದ ರಕ್ಷೆಯಲಿ.

ಮೌನ ತಾಳಿದ ಶ್ರಮಿಕ ವರ್ಗ…

ಮೂಕ ಸಾಕ್ಷಿಯಾಗಿದೆ ಚಿಂತಕ ವರ್ಗ….

ಹೊಸಿಲ ದಾಟದೆ ಆಜ್ಞೆ ಪಾಲಿಸುತಿದೆ

ಪ್ರಜ್ಞಾವಂತ ಬಳಗ.

ಕೊರೊನಾ ಪಿಡಿನೆಗೊಳಗಾದವರದೊಂದು ಸಂಖ್ಯೆಯಾದರೆ

ಕೇಳಿ ಕೇಳಿ ಭಯ ಬಿದ್ದು ಜಂಗಾಬಲ ಕಳೆದುಕೊಂಡವರೇ ಅಸಂಖ್ಯಾತರು

ಕರ್ಮ ಭೂಮಿಯೂ ಅಪ್ಪಿದೆ…..

ಜನ್ಮ ಭೂಮಿಯನು

ತಲುಪದ ಜೀವ ಸಂಕಟವ‌ ಕೇಳುವವರಾರು……

        ಶಿಲ್ಪಾ ಮ್ಯಾಗೇರಿ

Exit mobile version