ನಿನ್ನೆಯಷ್ಟೆ ಲಾಕ್ ಡೌನ್ ಹಿನ್ನೆಲೆ ಸಂಕ್ಷಿಪ್ತ ಹಾಗೂ ಸರ್ಕಾರ ವಿಧಿಸಿರುವ ನಿಯಮಗಳನ್ವಯ ಕೆಲವು ಆಪ್ತರನ್ನು ಕರೆಸಿ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆಗೊಳಿಸಲಾಯಿತು. ಆದರೆ ಆ ಕ್ಷಣ ನನ್ನ ಜೀವನದಲ್ಲಿ ಅವಿಸ್ಮರಣೀಯ ಕ್ಷಣ. ವ್ಯವಹಾರದ ಯಾವುದೇ ಲೆಕ್ಕಾಚಾರ ಹಾಗೂ ಲಾಭ ಹಾನಿಯ ಗಣೀತದ ಯೋಚನೆ ಇಲ್ಲದೆ ನಾನು ಪತ್ರಿಕೆ ಆರಂಭಿಸಬೇಕು ಎನ್ನುವ ಇಂಗಿತವನ್ನು ನನ್ನ ಪತಿ ಎದುರಿಗೆ ವ್ಯಕ್ತ ಪಡಿಸಿದೆ. ಆದರೆ ನನ್ನ ಆಸೆಗೆ ನೀರೆರೆದು ಪೋಶಿಸುವ ಮೂಲಕ ನನ್ನ ಈ ಕಾರ್ಯಕ್ಕೆ ನನ್ನ ಪತಿ ಜೊತೆಯಾಗಿದ್ದಾರೆ. ಆದರೆ ಲಾಕ್ ಡೌನ್ ಇರುವುದರಿಂದಾಗಿ ಕೆಲ ತಾಂತ್ರಿಕ ಕಾರಣಗಳಿಂದ ಪತ್ರಿಕೆ ಆರಂಭವನ್ನು ಮುಂದೂಡಿದ್ದೇವೆ. ಸದ್ಯ ಪೋರ್ಟಲ್ ಆರಂಭವಾಗಿದೆ.

ನಿನ್ನೆ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದ ಕೆಲವೇ ಕೆಲವರಲ್ಲಿ ಹಿರಿಯ ಜೀವಿ ಸೂಜಿ, ಮುಟ್ಟದ ಸರದಾರ ಖ್ಯಾತಿಯ ಆಯುರ್ವೇದ ವೈದ್ಯ, ತಂದೆಯ ಸ್ವರೂಪರಾದ ಕೆ.ಯೋಗೇಶನ್ ಅವರು ಪೋರ್ಟಲ್ ಲೋಕಾರ್ಪಣೆಗೆ ಆಗಮಿಸಿ ನನ್ನನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರು.

ಆಯುರ್ವೇದ ವೈದ್ಯ ಕೆ.ಯೋಗೇಶನ್

ಪೋರ್ಟಲ್ ಲೋಕಾರ್ಪಣೆಗೊಂಡ ತಕ್ಷಣ ನನ್ನ ಕೈಗೆ ಒಂದು ಕವರ್ ಕೊಟ್ಟರು. ಅವರು ಆ ಕವರ್ ಕೊಟ್ಟ ಕ್ಷಣದಿಂದ ನನ್ನಲ್ಲಿ ಕುತೂಹಲ. ಒಬ್ಬ ಹಿರಿಯ ಜೀವ ಶುಭ ಹಾರೈಸಿ ಸಂದೇಶ ನೀಡಿ ಪತ್ರ ಕೊಟ್ಟಿರಬಹುದು. ಅದರಲ್ಲಿ ಪತ್ರಿಕೆಗಾಗಿ ಹಾಗೂ ನನಗೆ ಏನು ಮಾರ್ಗದರ್ಶನ ನೀಡಿರಬಹುದು ಎನ್ನುವ ಕುತೂಹಲವೇ ಹೆಚ್ಚಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗಿ ತೆಗೆದು ನೋಡಿದರೆ 1111 ರೂ ಚೆಕ್ ಅದರಲ್ಲಿತ್ತು. ಇದೇನು ಆಶ್ಚರ್ಯ, ಅವರೇಕೆ ಚೆಕ್ ಕೊಟ್ಟರು ಎಂಬ ಹತ್ತು ಹಲವು ಪ್ರಶ್ನೆ ಮೂಡಿದವು. ಈ ಬಗ್ಗೆ ನನ್ನ ಪತಿ ಗಮನಕ್ಕೆ ತಂದಾಗ ಅವರು ಒಂದು ಪತ್ರಿಕೆ ಅಥವಾ ಮಾದ್ಯಮ ನಿರ್ವಹಣೆಯ ಖರ್ಚು ವೆಚ್ಚದ ಲೆಕ್ಕಾಚಾರ ತಿಳಿ ಹೇಳಿದರು. ಆಗ ನನಗೆ ಇನ್ನಿಲ್ಲದಷ್ಟು ಭಯ ಚಿಂತೆ ಶುರುವಾಯಿತು. ಜೊತೆಗೆ ಅಂತಹ ಹಿರಿಯ ಜೀವ ಸ್ವ ಇಚ್ಛೆಯಿಂದ ಸಹಾಯ ಹಸ್ತ ಚಾಚಿದ ಹೃದಯ ವಂತಿಕೆಯಿಂದ ನನ್ನ ಕಣ್ಣಾಲೆಗಳು ತುಂಬಿ ಬಂದವು.

ಸಾಮಾಜಕ ಕಾಳಜಿಯೊಂದಿಗೆ ಒಂದು ಪತ್ರಿಕೆಯನ್ನು ಆರಂಭಿಸಬೇಕು ಎನ್ನುವ ನನ್ನ ಆಸೆಗೆ ನಿರಾಶೆ ಮಾಡಬಾರದು ಎನ್ನುವ ಕಾರಣಕ್ಕೆ ನನ್ನ ಪತಿ ಯಾವ ಲಾಭ ಹಾನಿಯ ಲೆಕ್ಕಾಚಾರದ ಗಣೀತವನ್ನು ನನಗೆ ಹೇಳಲಿಲ್ಲ. ನಿನ್ನಿಷ್ಟದಂತೆ ಆಗಲಿ ಪತ್ರಿಕೆಯನ್ನು ಆರಂಭಿಸು ಅಂತ ಅಷ್ಟೆ ಹೇಳಿದ್ದರು. ಆದರೆ ಯೋಗೀಶನ್ ಅವರು ನೀಡಿದ ಚೆಕ್ ನಿಂದಾಗಿ ನನಗೆ ಇಷ್ಟೆಲ್ಲ ಕಥೆ ಗೊತ್ತಾಯಿತು. ರಾತ್ರಿ ಇಡೀ ನಿದ್ರೆ ಬಾರದ ಹಣಕಾಸಿನ ನಿರ್ವಹಣೆ ಹೇಗೆ? ಎಂಬೆಲ್ಲ ಚಿಂತೆ ನನ್ನ ನಿದ್ರೆಯನ್ನು ಕಸಿದುಕೊಂಡಿತು. ಮುಂದುವರೆಯುವುದು ಹೇಗೆ? ಎಂಬ ಅನುಮಾನ ಶುರುವಾಯಿತು.

ಆದರೆ ಬೆಳಿಗ್ಗೆ ಎದ್ದ ತಕ್ಷಣ ವಾಟ್ಸಅಪ್ ನೋಡಿದಾಗ ನನ್ನ ರಾತ್ರಿಯ ಚಿಂತೆ ಹಾಗೂ ದುಗೂಡವೆಲ್ಲ ದೂಯಾಯಿತು. ಮೊಬೈಲ್ ನೆಟ್ ಆರಂಭವಾಗುತ್ತಿದ್ದಂತೆ 1000 ಕ್ಕೂ ಅಧಿಕ ಸಂದೇಶಗಳು ಬಂದಿದ್ದವು. ನಮ್ಮ ಈ ಪ್ರಯತ್ನಕ್ಕೆ ಶುಭ ಹಾರೈಕೆಯ ಮಹಾಪೂರವೇ ಹರಿದು ಬಂದಿತ್ತು.

ಇತರೇ ಜಿಲ್ಲೆಗಳಲ್ಲಿ ಪೋರ್ಟಲ್ ಲೋಗೊ ಬಿಡುಗಡೆ

ನಮ್ಮ ಉತ್ತರ ಪ್ರಭ ಪೋರ್ಟಲ್ ಲೋಗೊ ತಾವೇ ಅಭಿಮಾನದಿಂದ ಬಿಡುಗಡೆ ಮಾಡಿದ್ದಾರೆ. ಗಂಗಾವತಿಯಲ್ಲಿ ಸಾಮಾಜಿಕ ಸಂಘಟನೆಯ ಆತ್ಮಿಯರು ಪೋರ್ಟಲ್ ಲೊಗೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಿ ನಮ್ಮ ಉದ್ದೇಶ ಹಾಗೂ ಆಶಯಗಳನ್ನು ಇತರರಿಗೂ ತಿಳಿಸಿದ್ದಾರೆ. ಇದನ್ನೆಲ್ಲ ನೋಡಿ ನನ್ನ ಉತ್ಸಾಹ ಇಮ್ಮಡಿಯಾಯಿತು. ಈ ಪ್ರಯತ್ನಕ್ಕೆ ಹಣಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಬೆಂಬಲಿಸಿ ಕೈಹಿಡಿದು ಮುನ್ನಡೆಸುವವರು ಸಾವಿರಾರು ಜನರಿದ್ದಾರೆ ಎನ್ನುವುದು ನನ್ನ ಆತ್ಮ ವಿಶ್ವಾಸ ಹೆಚ್ಚಿಸಿತು. ಹೀಗಾಗಿ ನಿಮ್ಮ ಪ್ರೋತ್ಸಾಹ ಬೆಂಬಲ ಹೀಗೆ ಇರಲಿ, ನಿಮ್ಮ ಹಾರೈಕೆ ಹೀಗೆ ಇದ್ದರೆ ನಿಜಕ್ಕೂ ಸಾಮಾಜಿಕ ಕಾಳಜಿ ಹಾಗೂ ಜನರ ಧ್ವನಿಯಾಗಿ ಉತ್ತರ ಪ್ರಭ ಪತ್ರಿಕೆ ಹಾಗೂ ಪೋರ್ಟಲ್ ಕಟ್ಟುವುದರಲ್ಲಿ ಸಂದೇಹವಿಲ್ಲ ಎನ್ನುವ ವಿಶ್ವಾಸ ಮೂಡಿತು.