ವಾರಂಟಿಯೇ ಇಲ್ಲದ ಮೇಲೆ ಗ್ಯಾರಂಟಿ ಹೇಗೆ ?
ಕಾಂಗೈ ಕಾಡ್೯ ಠುಸ್ಸು ಪರಸ್ಥಿತಿ ಈಗ ಬಲು ದುಸ್ಥಿತಿ ಸಿ.ಟಿ.ರವಿ ವ್ಯಂಗ್ಯ


ಆಲಮಟ್ಟಿ: ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಭರಪೂರ ಸುಳ್ಳು ಭರವಸೆ ನೀಡುತ್ತಿದ್ದು, ಆ ಪಕ್ಷದ ವಾರಂಟಿಯೇ ಮುಗಿದಿದೆ, ಇನ್ನೂ ಯೋಜನೆಗಳಿಗೆ ಗ್ಯಾರಂಟಿ ಹೇಗೆ ನೀಡುತ್ತದೆ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಗಿ ಪ್ರಶ್ನಿಸಿದರು.
ಆಲಮಟ್ಟಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸಂಕಲ್ಪಯಾತ್ರೆಯ ಮುಂದೆ, ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆಯ ಸದ್ದಡಗಿದೆ , ಕಾಂಗ್ರೆಸ್ ನೀಡುವ ಸುಳ್ಳು ಭರವಸೆಯ ಕಾರ್ಡ್ ಠುಸ್ ಆಗಿದೆ ಎಂದರು.

ಬಿಜೆಪಿ ಸರ್ಕಾರ ಯೋಜನೆಗಳ ಶಂಕುಸ್ಥಾಪನೆ ಮಾಡದೇ ಅದನ್ನು ಪೂರ್ಣಗೊಳಿಸಿ ಉದ್ಘಾಟನೆಯನ್ನು ಮಾಡುತ್ತಿದೆ ಎಂದರು. ರಾಜ್ಯದಲ್ಲಿ 3314 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಜಲಜೀವನ್ ಮಿಷನ್ ಯೋಜನೆಯಿಂದ ಪ್ರತಿ ಹಳ್ಳಿಯ ಪ್ರತಿ ಮನೆಗೂ ನದಿಯ ಕುಡಿಯುವ ನೀರು ಪೂರೈಕೆಯ ಕಾರ್ಯ ನಡೆದಿದೆ ಎಂದರು.
ರಾಜ್ಯದಲ್ಲಿ ರೈಲ್ವೆ ಡಬಲಿಂಗ್ ಕಾರ್ಯ ಹಾಗೂ ವಿದ್ಯುತ್ತೀಕರಣ ಕಾರ್ಯ ಭರದಿಂದ ಸಾಗಿದೆ ಎಂದರು.

ಆಲಮಟ್ಟಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ.ರವಿ ಮಾತನಾಡಿದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಲಮಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವುದು.


ಮೊದಲೆಲ್ಲಾ ರಷ್ಯಾ ಆಧಾರಿತ ವಿದೇಶಾಂಗ ನೀತಿಯಿತ್ತು. ಆದರೆ ಈಗ ಭಾರತದ ಆಧಾರದ ವಿದೇಶಾಂಗ ನೀತಿ ಜಾರಿಗೆ ಬಂದಿದೆ. ರೈತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಭೂಸಿರಿ ಯೋಜನೆಯಡಿ ರೈತರಿಗೆ ಸಹಾಯ ಧನ, ಕಾರ್ಮಿಕರಿಗೆ ಮಾಸಾಶನ, ತಾಂಡಾಗಳಿಗೆ ಗ್ರಾಮದ ಸ್ಥಾನಮಾನ ಇವೆಲ್ಲವೂ ಬಿಜೆಪಿ ಪ್ರಣಾಳಿಕೆಯಲ್ಲಿಲ್ಲದಿದ್ದರೂ ಬಿಜೆಪಿ ಸರ್ಕಾರ ನೀಡಿದೆ ಎಂದರು.
ಬಿಜೆಪಿ ಪಕ್ಷದ ನೀತಿ, ನೇತೃತ್ವ ಹಾಗೂ ನಿಯತ್ತಿನ ಕಾರಣ ಬಿಜೆಪಿ ದೇಶದಲ್ಲಿ ಬೆಳೆದಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿಯ ಆಂತರಿಕ ಪ್ರಜಾಪ್ರಭುತ್ವ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿಲ್ಲ ಎಂದರು. ಅಲ್ಲಿ ದೊಡ್ಡ ಗೌಡರು, ಸಣ್ಣ ಗೌಡರು, ಮರಿಗೌಡರು ಮಾದರಿಯಲ್ಲಿ ಜೆಡಿಎಸ್ ನಲ್ಲಿ ಹಾಗೂ ಡಿಎನ್ ಎ ಆಧಾರಿತವಾಗಿ ಕಾಂಗ್ರೆಸ್ ನ ನಾಯಕತ್ವ ದೊರೆತಿದೆ. ಆದರೆ ಬಿಜೆಪಿಯಲ್ಲಿ ಆತ ನೀತಿಯಿಲ್ಲ ಎಂದು ಸಿ.ಟಿ, ರವಿ ಹೇಳಿದರು.
ಬಿಜೆಪಿಯಲ್ಲಿ ಡಿಎನ್ ಎ ಆಧಾರಿತ ಟಿಕೆಟ್ ನೀಡಲಾಗುತ್ತದೆಯೇ? (ಕುಟುಂಬದ ತಂದೆ, ಮಕ್ಕಳಿಗೆ ಟಿಕೆಟ್) ಎಂಬ ಪತ್ರಕರ್ತರ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಸಿ.ಟಿ. ರವಿ ಹಿಂಜರಿದರು. ಆದರೆ ಬಿಜೆಪಿಯಲ್ಲಿ ಅಡುಗೆ ಮನೆಯಲ್ಲಿ ಟಿಕೆಟ್ ಘೋಷಣೆಯಾಗುವುದಿಲ್ಲ, ಅದಕ್ಕಾಗಿ ಬಿಜೆಪಿಯ ಪಾರ್ಲಿಮೆಂಟ್ ಬೋರ್ಡ್ ಇದ್ದು, ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದರು. ರೌಡಿ ಶೀಟರ್ ಫೈಟರ್ ರವಿ ಮೋದಿ ಭೇಟಿಯ ಕುರಿತು ಪ್ರಶ್ನೆಗೆ, ರಮೇಶ ಜಾರಕಿಹೊಳಿ ಟಿಕೆಟ್ ಕೊಡುವ ಪ್ರಶ್ನೆಗೆ ರವಿ ಉತ್ತರಿಸಲಿಲ್ಲ.
ಕೆರೆ ತುಂಬುವ ಯೋಜನೆಯ ಪ್ರಸ್ತಾಪವನ್ನು ಆಗಿನ ಜಲಸಂಪನ್ಮೂಲ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವೈಜ್ಞಾನಿಕ ಎಂದು ಹೇಳಿ ತಿರಸ್ಕರಿಸಿ, ಆ ಪ್ರಸ್ತಾವನೆಯನ್ನು ಡಸ್ಟಬಿನ್ ಗೆ ಹಾಕಿದ್ದರು. ಆ ಯೋಜನೆ ಜಾರಿಗೆ ತಂದಿರುವುದು ಬಿಜೆಪಿಯ ಕೆಲಸ ಎಂದು ರವಿ ಹೇಳಿದರು. ರೇವಣಸಿದ್ದೇಶ್ವರ ಏತ ನೀರಾವರಿ, ಮುಳವಾಡ ಹಂತ-3, ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ 789 ಕೋಟಿ ರೂ ನೀಡಲಾಗಿದೆ ಎಂದರು.
ಬಿಜೆಪಿಗೆ ಭಾರಿ ಬೆಂಬಲ:
ಬಿಜೆಪಿ ಪಕ್ಷ 4 ಕಡೆಯಿಂದ ಆರಂಭಿಸಿರುವ ವಿಜಯ ಸಂಕಲ್ಪಯಾತ್ರೆಗೆ ಅಪೂರ್ವ ಬೆಂಬಲ ದೊರಕಿದ್ದು, ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಹೇಳಿದರು.
ಮಂಡ್ಯದ ಇತಿಹಾಸದಲ್ಲಿಯೇ ಬಿಜೆಪಿಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ ಎಂದರು. ಡಬಲ್ ಎಂಜಿನ್ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ ಎಂದರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದರು. ಕಾಂಗ್ರೆಸ್ ನೀಡಿರುವ 200 ಯುನಿಟ್ ಉಚಿತ ವಿದ್ಯುತ್, 2000 ರೂ ಮಾಸಾಶನ ಎಲ್ಲವೂ ಸುಳ್ಳು ಭರವಸೆ ಎಂದರು.
ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರ-2 ರ ಬಗ್ಗೆ ಸುಪ್ರಿಂಕೋರ್ಟ್ ನಲ್ಲಿ ಮೊಕದ್ದಮೆಯಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ವಾದಗಳು ಪೂರ್ಣಗೊಂಡಿವೆ. ಇನ್ನೂ ಸೀಮಾಂದ್ರದ ವಾದ ಬಾಕಿಯಿದೆ. ಅದು ಪೂರ್ಣಗೊಂಡ ನಂತರ ಗೆಜೆಟ್ ಹೊರಡಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಆರ್.ಎಸ್. ಪಾಟೀಲ (ಕೂಚಬಾಳ), ಮಹೇಶ ತೆಂಗಿನಕಾಯಿ, ಎಸ್.ಕೆ. ಬೆಳ್ಳುಬ್ಬಿ, ಸೋಮನಗೌಡ ಪಾಟೀಲ, ಅರುಣ ಶಹಾಪುರ, ಮಾಲಿಕಯ್ಯ ಗುತ್ತೇದಾರ ಇತರರು ಇದ್ದರು.

Exit mobile version