ಆಲಮಟ್ಟಿ; ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೈಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಹಲವಾರು ಕಾರ್ಯಕರ್ತರು ಸುಮಾರು ಅರ್ಧ ಕಿ.ಮೀ ಉರುಳು ಸೇವೆ ಮಾಡಿ ಪ್ರತಿಭಟಿಸಿದರು. ಕಳೆದ ಏಳು ದಿನಗಳಿಂದ ಪಾದಯಾತ್ರೆಯ ಮೂಲಕ ಆಗಮಿಸಿ ಇಲ್ಲಿಯ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮವಾರ, ಅರ್ಧ ಕಿ.ಮೀ ಉದ್ದದವರೆಗೂ ಸುಮಾರು 20 ಕ್ಕೂ ಹೆಚ್ಚು ಜನ ಉರುಳು ಸೇವೆ ನಡೆಸಿದರು. ಪ್ರತಿಭಟನಾ ಸ್ಥಳದಿಂದ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗದವರೆಗೂ ಉರುಳು ಸೇವೆ ನಡೆಸಿದರು. ಜಿಲ್ಲೆಯ ರೈತರ ತ್ಯಾಗದ ಫಲವಾಗಿ ಅಣೆಕಟ್ಟು ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲೆ ಸಂಪೂರ್ಣ ನೀರಾವರಿಗೊಳಪಡಬೇಕು, ಸಂತ್ರಸ್ತರ ಆರ್ಥಿಕ ಅಭಿವೃದ್ಧಿಗೆ ವಿಶೇಷ ಅನುದಾನ ಯೋಜನೆ ಜಾರಿಗೆ ತರಬೇಕು, ಆಲಮಟ್ಟಿಯ ಅರಣ್ಯ ಜಾಗೆಯಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳ ನಿವೇಶನ ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ಮಾಡಬೇಕು ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ, ಸೀತಪ್ಪ ಗಣಿ, ಸಂಗಮೇಶ ಹೊನಕಟ್ಟಿ, ಮುರಿಗೆಪ್ಪ ತುಪ್ಪದ, ವೆಂಕಟೇಶ ವಡ್ಡರ, ಅಬ್ದುಲ್ ರೆಹಮಾನ್ ತಾಳಿಕೋಟೆ, ಗುಂಡಕ್ಕ ವಡ್ಡರ ಇನ್ನೀತರರು ಇದ್ದರು.
ಪೋಟೋ : ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲಮಟ್ಟಿ ಕೆಬಿಜೆಎನ್ ಎಲ್ ಮುಖ್ಯ ಎಂಜನಿಯರ್ ಕಚೇರಿ ಮುಂಭಾಗದಲ್ಲಿ ಸೋಮವಾರ ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದರು.