ನಾಡಪ್ರಭು ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

ಉತ್ತರಪ್ರಭ ಸುದ್ದಿ

ಬೆಂಗಳೂರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಉದ್ಘಾಟಿಸಿದ್ದು, ಈ ಟರ್ಮಿನಲ್ 2 ಉದ್ಯಾನನಗರಿಯ ಕೀರ್ತಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಮೊದಲ ಟರ್ಮಿನಲ್‌ಗಿಂತ 2ನೇ ಟರ್ಮಿನಲ್‌ನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ವಿವಿಧ ರೀತಿಯ ಅಲಂಕಾರದಿಂದ ಪ್ರಯಾಣಿಕರನ್ನು ಸೆಳೆಯುತ್ತಿದೆ. ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯದ ಅನುಭವ ನೀಡುವಂತೆ ಟರ್ಮಿನಲ್ 2 ಅನ್ನು ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಹೊಸ ಟರ್ಮಿನಲ್‌ನಲ್ಲಿ ಪ್ರಯಾಣಿಕರು ಸಾಗುವಾಗ ಉದ್ಯಾನದಲ್ಲಿ ನಡೆದಾಡಿದ ಅನುಭವ ಸಿಗಲಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ರಾಜ್ಯದ ಜಲಮೂಲಗಳು, ನೈಸರ್ಗಿಕ ಕಾಡು ತೋರಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಪುಟ್ಟ ಕಾಡಿನಲ್ಲಿ ಅನುಭವ ಸಿಗುವಂತೆ ಕಟ್ಟಡ ವಿನ್ಯಾಸಗೊಂಡಿದೆ.

ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

2008ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅತ್ಯಂತ ದಟ್ಟಣೆ ವಿಮಾನ ನಿಲ್ದಾಣವಾಗಿ ಬೆಳೆದಿದೆ. ಈ ದಟ್ಟಣೆ ನಿಯಂತ್ರಣ ಉದ್ದೇಶದಿಂದ ವಿಸ್ತರಣೆ ಮಾಡಲಾಗಿದೆ.

ಸುಮಾರು 13,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಸಿದ್ಧವಾಗಿರುವ ಈ ಟರ್ಮಿನಲ್ 2 ಉದ್ಯಾನ ನಗರಿ ಖ್ಯಾತಿಗೆ ಮತ್ತೊಂದು ಗರಿಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಟರ್ಮಿನಲ್ 2, ಎರಡನೇ ರನ್‌ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಈ ಟರ್ಮಿನಲ್ 2 ವನ್ನು ಗಾರ್ಡನ್ ಟರ್ಮಿನಲ್ ಎಂದು ಕರೆಯಲಾಗುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ಶೇ.100ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.

Exit mobile version