ಎನ್ ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ನಿಡಗುಂದಿಯಲ್ಲಿ ಬೈಕ್ ರ್ಯಾಲಿ

ಉತ್ತರಪ್ರಭ ಸುದ್ದಿ

ನಿಡಗುಂದಿ: ಎನ್ ಪಿಎಸ್ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಟಿರುವ ಓಪಿಎಸ್ ಸಂಕಲ್ಪ ಯಾತ್ರೆಯನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ಅದ್ಧೂರಿಯಾಗಿ ಬರಮಾಡಿಕೊಂಡು ಭವ್ಯ ಸ್ವಾಗತ ನೀಡಲಾಯಿತು.

ತಾಲ್ಲೂಕಿನ ಶಿಕ್ಷಣ, ಆರೋಗ್ಯ, ಪೊಲೀಸ್, ಕೆಬಿಜೆಎನ್ ಎಲ್ ಸೇರಿದಂತೆ ನಾನಾ ಇಲಾಖೆಯ ನೂರಾರು ನೌಕರರು ಪಟ್ಟಣದ ಮುದ್ದೇಬಿಹಾಳ ಕ್ರಾಸ್ ನಲ್ಲಿ ಸೇರಿ ಓಪಿಎಸ್ ಯಾತ್ರೆಗೆ ಸ್ವಾಗತ ಮಾಡಿ, ಎನ್ ಪಿಎಸ್ ರದ್ದುಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಪಟ್ಟಣದ ತುಂಬೆಲ್ಲಾ ಬೈಕ್ ರ್ಯಾಲಿ ನಡೆಸಿದ ನಂತರ ಮಾತನಾಡಿದ ಎನ್ ಪಿಎಸ್ ನೌಕರರ ರಾಜ್ಯ ಘಟಕದ ಅಧ್ಯಕ್ಷ ಶಾಂತರಾಮ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಎನ್ ಪಿಎಸ್ ನಿಂದ ನೌಕರರು ಅನುಭವಿಸುತ್ತಿರುವ ಸಂಕಟವನ್ನು ಎಳೆಎಳೆಯಾಗಿ ತೆರೆದಿಟ್ಡರು.

ಪಿಂಚಣಿ ಕೊಡುವುದು ಸರ್ಕಾರದ ಕರ್ತವ್ಯ, ಅದು ನೌಕರರ ಹಕ್ಕು, ಆದರೆ ಎನ್ ಪಿಎಸ್ ಜಾರಿಯಿಂದ ನಿವೃತ್ತಿ ವೇಳೆಗೆ ಪಿಂಚಣಿ ಕೇವಲ 2 ಸಾವಿರ ರೂ ದಾಟುವುದಿಲ್ಲ ಎಂದರು. ಸರ್ಕಾರ ನಮ್ಮ ವೇತನದಲ್ಲಿ ಕಟಾವು ಮಾಡಿದ ಹಣವನ್ನು ಎಲ್ಲಿ ತೊಡಗಿಸುತ್ತದೆಯೋ, ಅದು ಪಾರದರ್ಶಕವಾಗಿ ತೋರಿಸುವುದಿಲ್ಲ, ಷೇರು ಪೇಟೆಯಲ್ಲಿ ತೊಡಗಿಸುವುದರಿಂದ ನಮ್ಮ ಹಣಕ್ಕೆ ನಿಶ್ಚಿತ ಭದ್ರತೆಯೂ ಇಲ್ಲ ಎಂದರು.

ದೇಶದ ನಾನಾ ರಾಜ್ಯಗಳಲ್ಲಿ ಈಗಾಗಲೇ ಎನ್ ಪಿಎಸ್ ರದ್ದುಗೊಳಿಸಲಾಗಿದೆ, ಈಗ ರಾಜ್ಯದಲ್ಲಿಯೂ ರದ್ದುಗೊಳಿಸಿ, ಸರ್ಕಾರಿ ನೌಕರರ ಹಿತ ಕಾಪಾಡಬೇಕು ಎಂದರು. ಶಿಕ್ಷಕರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ನಾಗನಗೌಡ, ಬಿ.ಟಿ. ಗೌಡರ, ಆರ್.ಎ. ನದಾಫ್, ಎಂ.ಎಸ್. ಮುಕಾರ್ತಿಹಾಳ, ಸಂಗಮೇಶ ಮಡಿಕೇಶ್ವರ, ಭಾಷಾಸಾಬ್ ಮನಗೂಳಿ, ಸಂತೋಷ ಬೂದಿಹಾಳ, ಸಲೀಂ ದಡೆದ, ಆರ್.ಎಸ್. ಕಮತ, ಪ್ರಕಾಶ ಕೂಚಬಾಳ ಸೇರಿದಂತೆ ಹಲವರು ಇದ್ದರು.ತೆರೆದ ಜೀಪ್ ನಲ್ಲಿದ್ದ ನಾನಾ ಮುಖಂಡರು, ಮುಂದೆ ಬೈಕ್ ಗಳ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳ ತುಂಬೆಲ್ಲಾ ಸಂಚರಿಸಿ,ಆಲಮಟ್ಟಿಯವರೆಗೂ ರ್ಯಾಲಿ ನಡೆಯಿತು.

ಇದೇ ವೇಳೆಯಲ್ಲಿ ಎನ್ ಪಿಎಸ್ ರಾಜ್ಯ ಘಟಕದ ಅಧ್ಯಕ್ಷ ಶಾಂತರಾಮ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ನಾಗನಗೌಡ, ಬಿ.ಟಿ. ಗೌಡರ ಇನ್ನೀತರರು ಇದ್ದರು.

ನಿಡಗುಂದಿ ಪಟ್ಟಣದಲ್ಲಿ ಎನ್ ಪಿಎಸ್ ರದ್ದುಗೊಳಿಸುವಂತೆ ಆಗ್ರಹಿಸಿ, ಬೆಂಗಳೂರಿನಿಂದ ಆಗಮಿಸಿರುವ ಓಪಿಎಸ್ ಸಂಕಲ್ಪ ಯಾತ್ರೆಗೆ ಶುಕ್ರವಾರ ರಾತ್ರಿ ನಿಡಗುಂದಿ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ನೂರಾರು ಬೈಕ್ ರ್ಯಾಲಿ ನಡೆಸಲಾಯಿತು.

Exit mobile version