ಸಚಿತ್ರ ವರದಿ : ಗುಲಾಬಚಂದ ಜಾಧವ

ಗದಗ : ಕ್ರಿಯಾಶೀಲತೆಯ ಮಾತೃ ಹೃದಯಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಬಹುಮುಖ ವ್ಯಕ್ತಿತ್ವದ ಮೇರು ಕಾವಿಧಾರಿ. ಶ್ರೇಷ್ಠ ಶ್ರೇಣಿಯ ಪರ್ವತ. ಅವರ ವಿಶಿಷ್ಟ ಬದುಕಿನ ಬಗೆಗೆ ಸಾವಿರಾರು ಸಹೃದಯಿ ಭಾವದ ಮಾತುಗಳಿವೆ.ಸಮಾಜಕ್ಕೆ ಅವಿಸ್ಮರಣೀಯ ಆದರ್ಶಗಳನ್ನು ನೀಡಿದ್ದಾರೆ. ಪೂಜ್ಯರ ಅಂತಃಕರಣ ಅಮೂಲ್ಯಮಯ.ಅವುಗಳನ್ನು ಬಣ್ಣಿಸಲು, ವ್ಯಾಖ್ಯಾನಿಸಲು ಪದಗಳಿಲ್ಲ ಎಂದು ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು. ನಗರದ ತೋಂಟದಾರ್ಯ ಮಠದ ಆವರಣದಲ್ಲಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ನಡೆದ ಭಾವೈಕ್ಯತೆ ಹರಿಕಾರ ಲಿಂ, ಡಾ.ತೋಂಟದ ಸಿದ್ದಲಿಂಗ ಶ್ರೀಗಳವರ ನಾಲ್ಕನೇ ಪುಣ್ಯ ಸ್ಮರಣೋತ್ಸವ ಮರಣವೇ ಮಹಾನವಮಿ ಆಚರಣೆ ಹಾಗು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ,ಸಂಮಾನ,ಗ್ರಂಥಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.

ನಾಡಿನ ನೆಲ,ಜಲ,ಪರಿಸರ ಬಗೆಗಿನ ಕಾಳಜಿ ಅಮೋಘ.ಅನನ್ಯ. ಸಾಹಿತ್ಯ, ಸಂಸ್ಕೃತಿ,ಕಲೆ,ಸಂಗೀತ ಪ್ರೀತಿಸುವ ಮಹಾದಾಸೆಯ ಗುಣ ತೋಂಟದ ಸಿದ್ದಲಿಂಗ ಶ್ರೀಗಳವರಲ್ಲಿತ್ತು.ಇವುಗಳಿಗಾಗಿ ತಮ್ಮ ಬದುಕು ಮೀಸಲಿರಿಸಿದ್ದರು.ಪೂಜ್ಯರು ಸಮಾಜದ ಕಣ್ಣಾಗಿದ್ದರು. ಮಾನವೀಯತೆಯ ಅಂತಃಕರಣ ಹೊಂದಿದ್ದರು. ಅವರ ದೂರ ದೃಷ್ಟಿಯ ಮಹಾನ ಕಾರ್ಯಗಳ ಕೈಂಕರ್ಯದ ಸಾರ ನಿಜಕ್ಕೂ ಉಚ್ಚಾಯಮಟ್ಟದಲ್ಲಿವೆ. ಅನುಪಮವಾಗಿವೆ ಎಂದು ಬಣ್ಣಿಸಿದರು.

ನೇರ ನಡೆ,ನುಡಿ,ನಿಷ್ಠುರತೆಗೆ ಖ್ಯಾತಿ ಜೊತೆಗೆ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದರು. ಭಕ್ತರ ಆಂತರಿಕ ಭಾವನೆಗಳಿಗೆ ಸ್ಪೂರ್ತಿಯ ಸೆಲೆ ನೀಡಿದ್ದಾರೆ. ಸ್ಪಶಿ೯ಸಿದ್ದಾರೆ. ಬ್ರಹತ್ತಾಕಾರದ ಕಾವ್ಯಕ್ಕೆ ವಸ್ತುವಾಗುವಷ್ಟು ಚೇತನಭರಿತ ವ್ಯಕ್ತಿತ್ವ ಲಿಂ,ಸಿದ್ದಲಿಂಗ ಶ್ರೀಗಳದ್ದಾಗಿದೆ ಎಂದರು.

ನಾಲ್ಕು ವರ್ಷದ ಹಿಂದೆ ಬನ್ನಿ ಬನ್ನಿ ಎಂದು ಭಕ್ತರನ್ನು ಅದರದಿಂದ ಬರಮಾಡಿಕೊಂಡು ಬನ್ನಿ ವಿನಿಮಯ ಮಾಡಿಕೊಂಡರು. ಎಲ್ಲರ ಬದುಕು ಬಂಗಾರವಾಗಲೆಂದು ಶುಭ ಹರಿಸಿದರು. ಮರಣವೇ ಮಹಾನವಮಿ ಎಂದು ಆಶೀರ್ವಚನ ನೀಡಿದರು.ಅಂದು ತಡರಾತ್ರಿವರೆಗೆ ಮರಣದ ಬಗ್ಗೆಯೇ ಹೆಚ್ಚು ಮಾತನಾಡಿ    ಮರೆಯಾಗಿದ್ದಾರೆ. ಈ ಆಘಾತವನ್ನು ಸಹಿಸಿಕೊಂಡು ಭಕ್ತಿ,ಶ್ರದ್ಧೆಯಿಂದ ಸಿದ್ದಲಿಂಗ ಶ್ರೀಗಳ ಪುಣ್ಯಾರಾಧನೆ ಆಚರಿಸುವ ಮೂಲಕ ಅಸಂಖ್ಯ ಅಭಿಮಾನಿ ಭಕ್ತ ವೃಂದ ತಮ್ಮ ಭಾವ ಮಿಡಿತ ಸಮಪಿ೯ಸಿದ್ದಾರೆ ಎಂದರು.

ಪ್ರೀತಿ,ನಂಬಿಕೆ ಎನ್ನುವ ವಸ್ತು ಬಹಳಷ್ಟು ಪವಿತ್ರ. ಪ್ರೀತಿಗಿಂತಲೂ ಶ್ರೇಷ್ಠ ವಸ್ತು ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ.ಎಲ್ಲರೂ ಪ್ರೀತಿ ವಿಶ್ವಾಸದಿಂದಿರುವ ಮನೋಭಾವ ಬೆಳೆಸಿಕೊಳ್ಳುಬೇಕು. ಲಿಂ,ಸಿದ್ದಲಿಂಗ ಶ್ರೀಗಳು ಎಲ್ಲರಿಗೂ ಪ್ರೀತಿ ತೋರಿದ್ದಾರೆ. ಶ್ರೀಮಠದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಸೌಹಾರ್ದತೆ ಕಣಗಳನ್ನು ಬಿತ್ತಿದ್ದಾರೆ. ಪೂಜ್ಯರ ತತ್ವಾದರ್ಶ ಮೌಲ್ಯದಲ್ಲಿ ನಾವೆಲ್ಲರೂ ಸಾಗೋಣ. ಅವರು ಕಂಡ ಕನಸು ನನಸಾಗಿಸೋಣ.ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಗೈಯೋಣ. ಸಿದ್ದಲಿಂಗ ಶ್ರೀಗಳ ಸೌಹಾರ್ದತೆ ಸಂದೇಶ,ಆದರ್ಶತನದ ಭಾವ ಎಲ್ಲರಲ್ಲೂ ಮನೆ ಮಾಡಲಿ ಎಂದು ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.

 ತೋಂಟದ ಲಿಂ, ಡಾ.ಸಿದ್ದಲಿಂಗ ಶ್ರೀಗಳವರ ಹೆಸರಿನ ಮೇಲೆ ರಾಷ್ಟ್ರೀಯ ಸ್ಮಾರಕ ದತ್ತಿನಿಧಿ ಸ್ಥಾಪನೆ ಮಾಡಿ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ಮೂರು ವರ್ಷದಿಂದ ಈ ಸಂಪ್ರದಾಯ ಸಾಗುತ್ತಿದ್ದು ಈ ಬಾರಿ ಪೂಜ್ಯರ ಆಶಯಗಳಿಗೆ ತಕ್ಕಂತೆ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು ಅವರಿಗೆ ನೀಡುತ್ತಿದ್ದು ಸಂತಸ ತಂದಿದೆ. ಅವರು ಬಸವತತ್ವ,ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನೆರೆಯ ರಾಜ್ಯಗಳಲ್ಲಿ ಧರ್ಮಪ್ರಸಾರಮಾಡಿದ್ದಾರೆ. ಡಾ.ಬಸವಲಿಂಗ ಪಟ್ಟದ್ದೇವರ ವ್ಯಕ್ತಿತ್ವ ಪ್ರಶಸ್ತಿಗಿಂತಲೂ ಹೆಚ್ಚು ಮೌಲ್ಯಿಕವಾಗಿದೆ. ಯೋಗ್ಯ ಸಾಧಕರಿಗೆ ಐದು ಲಕ್ಷ ರೂ.ನಗದು ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು. ಜೊತೆಗೆ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಪುಸ್ತಕ ಪ್ರೇಮಿ ಲಿಂ,ಸಿದ್ದಲಿಂಗ ಶ್ರೀಗಳ ಕುರಿತಾದ ಗ್ರಂಥಗಳು ಸಹ ಬಿಡುಗಡೆವಾಗುತ್ತಿರುವುದು ಬಸವಾಭಿಮಾನಿಗಳಿಗೆ ಖುಷಿ ತಂದಿದೆ. ಅಭಿಮಾನ ಇಮ್ಮಡಿಗೊಳಿಸಿದೆ ಎಂದರು.

ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಭಾಜನರಾದ ಭಾಲ್ಕಿ ಸಂಸ್ಥಾನ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರ ಅವರಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು, ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಸಿದ್ದಲಿಂಗ ಶ್ರೀಗಳ ಹೆಜ್ಜೆ ಗುರುತಿನ ಅಮೂಲ್ಯ ಜೀವನ ಪುಟಗಳ ಮೇಲೆ ಮೆಲುಕು ಹಾಕಿ ಮನಸ್ಸಾರೆ ಸ್ಮರಿಸಿಕೊಂಡರು. ಆರಾಧನಾ ಭಾವ ಸಚಿವರ  ಮೊಗದಲ್ಲಿ ಕಂಡಿತು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು, ಸಿದ್ದಲಿಂಗ ಶ್ರೀಗಳೇ ತಮಗೆ ಶ್ರೀರಕ್ಷೆ. ಪೂಜ್ಯರ ಕೃಪಾಶೀವಾ೯ದ ತಮ್ಮ ಮೇಲಿದೆ. ಅವರೇ ನನಗೆ ಸ್ಪೂತಿ೯ ಪ್ರೇರಕರು. ಶ್ರೀಗಳವರ ಸೆಲೆ ಹೃದಯದಲ್ಲಿ ನೆಲೆಗೊಂಡಿದೆ ಎಂದರು.

     ಇದೇ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಆಯ್ಕೆಗೊಂಡ ನಿಮಿತ್ತ  ಚಿಂಚಣಿ,ಶಿರೋಳದ ಅಲ್ಲಮ್ಮಪ್ರಭು ಮಹಾಸ್ವಾಮಿಗಳನ್ನು ಹಾಗು ಬೆಳಗಾವಿ ರಾಣಿ ಚೆನ್ನಮ್ಮ ವಿವಿದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಬೀದರ ಬಸವಸೇವಾ ಪ್ರತಿಷ್ಠಾನದ ಶರಣೆ ಅಕ್ಕ ಅನ್ನಪೂಣಾ೯ತಾಯಿ ಅವರನ್ನು  ಸನ್ನಾನಿಸಿ ಗೌರವಿಸಲಾಯಿತು.

   ಮುಂಡರಗಿ,ಬೈಲೂರು ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಲಿಂ,ಸಿದ್ದಲಿಂಗ ಪೂಜ್ಯರು ಬಸವತತ್ವದಡಿಯಲ್ಲಿ ಬಾಳಿ ಬದುಕಿ ನಮಗೆಲ್ಲ ನವ ಬೆಳಕು ನೀಡಿದ್ದಾರೆ. ಅವರ ವೈಚಾರಿಕ ಪ್ರಜ್ಞೆ ಅದ್ಭುತ. ನುಡಿಯುತ್ತಿದ್ದ ವಾಣಿಗಳಂತೂ ಅತ್ಯಾಧ್ಬುತ. ಸಾಮಾನ್ಯರ ಸ್ವಾಮೀಜಿಗಳಾಗಿ ಎಲ್ಲರ ಮನದಲ್ಲಿ ಹಸಿರಾಗಿದ್ದಾರೆ. ಪೂಜ್ಯರ ಮೊಗದ ತೇಜಸ್ ಭರಿತ ಕಳೆ  ಕಣ್ಣಂಚಿನಲ್ಲಿ ಸುಳಿದಾಡುತ್ತಿವೆ. ಅಪರೂಪದ ಪೂಜ್ಯರನ್ನು  ಎಂದು ಮರೆಯಲಾಗದು.ಸದಾಕಾಲ ಶ್ರೀಗಳು ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.

ಗ್ರಂಥಗಳ ಬಿಡುಗಡೆ :  ಮಂಡ್ಯದ ಡಾ.ಪ್ರದೀಪಕುಮಾರ ಹೆಬ್ರಿ ಡಾ.ತೋಂಟದ ಸಿದ್ದಲಿಂಗ ಶ್ರೀಗಳ ಕುರಿತು ಶ್ರೀಗುರು ಷಟ್ಪದಿಯಲ್ಲಿ ರಚಿಸಿರುವ ಮನುಕುಲದ ಬೆಳಕು ” ಮಹಾಕಾವ್ಯ ಹಾಗು ಬೆಳಗಾವಿಯ ಸುಷಮಾ ಬಸವರಾಜ ಜಗಜಂಪಿ ಅವರ ವಿರಚಿತ ” ಭಾವಮೇರು” ಮರಾಠಿ ಅನುವಾದಿತ ಗ್ರಂಥ ಬಿಡುಗಡೆಗೊಂಡವು. ಬನಹಟ್ಟಿಯ ಪ್ರೋ. ಬಿ.ಆರ್.ಪೋಲಿಸ್ ಪಾಟೀಲ ತಂಡ ಸಿದ್ದಲಿಂಗ ಶ್ರೀಗಳ ಕುರಿತಾದ ಲಾವಣಿ ಪದಗಳ ಗೀತಗಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,ಸಿದ್ದಲಿಂಗ ಶ್ರೀಗಳ ಗುಣಗಾನ ಮಾಡಿದರು. ಜ.ತೋ.ವಿದ್ಯಾಪೀಠದ ಕಾರ್ಯದರ್ಶಿ ಪ್ರೋ.ಎಸ್.ಎಸ್.ಪಟ್ಟಣಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

  ಜ.ತೋಂ.ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಎಂ.ಎಸ್.ಅಂಗಡಿ, ವೀರಣ್ಣ ಜ್ಯೋತಿ, ಪ್ರಕಾಶ ಕರಿಸೋಮನಗೌಡರ,ಶಶಿಧರ ತೋಡಕರ, ಕೊಟ್ರೇಶ ಮೆಣಸಿನಕಾಯಿ, ಬಾಲಚಂದ್ರ ಭರತಗೌಡರ, ಟಿ.ಬಿ.ಕರದಾನಿ, ಎಸ್.ಎಸ್.ನೀಲಗುಂದ,ದೊಡ್ಡಬಸಪ್ಪ ಚಿತ್ರಗಾರ, ಶ್ರೀಮತಿ ಶಿವಲೀಲಾ ಅಕ್ಕಿ, ಗಿರಿಜಕ್ಕ, ಇತರರಿದ್ದರು. ವಿವೇಕಾನಂದಗೌಡ ಪಾಟೀಲ,ವೀರನಗೌಡ ಮರಿಗೌಡ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

ಮಳೆಯಬ್ಬರ…ಸ್ಮರಣೆಉಬ್ಬರ ! ಲಿಂ,ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ನಾಲ್ಕನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಮಳೆ ರಭಸ ಶೂರುವಾಯಿತು. ಧೋ ಎಂದು ಮೇಘ ವೃಷ್ಟಿಯ ಸಿಂಚನ ಜೋರಾದಾಗ್ಯೂ ಭಕ್ತರು,ಅಭಿಮಾನಿಗಳು ಎಲ್ಲೂ ಕದಲಲ್ಲಿಲ್ಲ. ವಿಚಲಿತಗೊಳ್ಳದೇ  ಶ್ರದ್ಧೆಯಿಂದ,ಏಕಚಿತ್ತದ ಭಕ್ತಿಭಾವದಿಂದ ಪೂಜ್ಯರ ಪುಣ್ಯ ಸ್ಮರಣೆಯಲ್ಲಿ ಭಾಗಿಯಾದರು. ಮಳೆಯಲ್ಲಿಯೇ ಮಠದ ಆವರಣಕ್ಕೆ ಕಾರಿನಲ್ಲಿ ಆಗಮಿಸಿದ ಬಹುತೇಕ ಅತಿಥಿ, ಅಭ್ಯಾಗತರು,ಗಣ್ಯ ಮಾನ್ಯರು,ಶ್ರೀಗಳು ಕೋಡೆ ಹಿಡಿದು ನಂತರ  ಶಿವಾನುಭವ ಮಂಟಪ ಪ್ರವೇಶಿಸಿದರು. ಕಾರ್ಯಕ್ರಮದ  ಭವ್ಯ ವೇದಿಕೆಯತ್ತ ಹೆಜ್ಜೆ ಹಾಕಿದರು. ತಂಪು ವಾತಾವರಣದಲ್ಲಿ,ಮಳೆಯ ಹನಿಗಳಲ್ಲಿ ಪೂಜ್ಯರ ಪುಣ್ಯ ಸ್ಮರಣೀಯ ಆರಾಧನಾ ಮಹೋತ್ಸವ ಅರ್ಥಪೂರ್ಣವಾಗಿ ಜರುಗಿದ್ದು ವಿಶೇಷತೆಗೆ ಸಾಕ್ಷಿಯಾಗಿತ್ತು. ನಾಡಿನ ವಿವಿಧೆಡೆಯಿಂದ ಸ್ವಾಮೀಜಿಗಳು, ಭಕ್ತ ಸಾಗರ, ಅಭಿಮಾನಿಗಳು, ಸಂಸ್ಥೆಯಡಿಯಲ್ಲಿನ ಸಿಬ್ಬಂದಿಗಳ ದಂಡೇ ನೆರೆದಿತ್ತು.      

Leave a Reply

Your email address will not be published. Required fields are marked *

You May Also Like

ಪೋಷಕರ ಕಣ್ಣ ಮುಂದೆಯೇ ಆತ್ಮಹತ್ಯೆಗೆ ಶರಣಾದ ಯುವತಿ!

ವಿಜಯಪುರ : ಪೋಷಕರ ಎದುರೇ ಯುವತಿ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಳು ಹಿಂಡುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…

ಸೋಂಕು ಉಲ್ಬಣ: ಬೆಂಗಳೂರಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್!

ಜುಲೈ 14ರಿಂದ 7 ದಿನ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…