ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ತಾಲೂಕಾಡಳಿತದಿಂದ ಅಹವಾಲು ಸ್ವೀಕಾರ
ಗೋಳು ತೋಡಿಕೊಂಡ ಗೊಳಸಂಗಿ ಜನ.!

ಉತ್ತರಪ್ರಭ ಸುದ್ದಿ
ಗೊಳಸಂಗಿ:
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಗೊಳಸಂಗಿ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಶನಿವಾರ ನಿಡಗುಂದಿ ತಾಲೂಕು ಆಡಳಿತದಿಂದ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಲಾಯಿತು. ಈ ವೇಳೆ ಗ್ರಾಮಸ್ಥರು ವಾರ್ಡ ವಿಂಗಡಣೆ, ಮತಗಟ್ಟೆ ರಚನೆ, ಬಸ್ ನಿಲುಗಡೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಸಮರ್ಪಕ ವಿದ್ಯುತ್ ಪೂರೈಕೆ, ತೋಟದ ರಸ್ತೆ, ಉತಾರೆ, ಚರಂಡಿ-ರಸ್ತೆ ನಿರ್ಮಾಣ, ನಿವೇಶನ-ಮನೆಗಳ ಹಂಚಿಕೆ, ಪಿಂಚಣಿ ಸಮಸ್ಯೆ, ಒತ್ತುವರಿ ಸಮಸ್ಯೆ, ವಿಕಲಚೇನರ ಸಮಸ್ಯೆ, ರುದ್ರಭೂಮಿ ಮಂಜೂರಿ, ಮುಕ್ತಿವಾಹನದ ಬೇಡಿಕೆ ಹೀಗೆ ಹತ್ತಾರು ಸಮಸ್ಯೆಗಳನ್ನು ತಹಸೀಲ್ದಾರ ಅನೀಲಕುಮಾರ ಢವಳಗಿ ಮುಖಾಂತರ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರು.
ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಅಧಿಕಾರಿ ಬಳಗ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಕೆಲವು ಕ್ಲಿಷ್ಟಕರ ಸಂಗತಿಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಡಗುಂದಿ ತಹಸೀಲ್ದಾರ್ ಅನೀಲಕುಮಾರ ಢವಳಗಿ, ಹಳ್ಳಿಗರ ಸಮಸ್ಯೆ ತಾಲೂಕು, ಜಿಲ್ಲಾ ಕಛೇರಿವರೆಗೆ ಬರಬಾರದು, ಮಧ್ಯವತಿ೯ಗಳ ಹಾವಳಿಗೆ ಜನಸಾಮಾನ್ಯರು ಬಲಿಯಾಗಬಾರದೆಂಬ ಸದುದ್ದೇಶದಿಂದ ಸಕಾ೯ರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ನಿನೂತನ ಯೋಜನೆ ಜಾರಿಗೆ ತಂದಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ಕಂದಾಯ ನಿರೀಕ್ಷಕ ಸಲೀಂ ಯಲಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸುನಿತಾ ಪವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ರಾಜೇಸಾಬ ಹತ್ತರಕಿಹಾಳ ಸೇರಿದಂತೆ ಸುಮಾರು 20 ಅಧಿಕ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲಾಧಿಕಾರಿಗಳು ನೋ ದರ್ಶನಂ! ಎಲ್ಲಿ? ಕಾರ್ಯಕ್ರಮದ ನಡುವೆ ಗ್ರಾಮದ ಕೆಲವು ಯುವಕರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಹೆಸರಿನಡಿ ಗ್ರಾಮ ವಾಸ್ತವ್ಯ ನಡೆಸುತ್ತಿದ್ದೀರಿ. ಆದರೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸುವುದು ಅದೆಷ್ಟು ಸರಿ? ಎಂದು ತಹಶೀಲ್ದಾರ ಅನೀಲಕುಮಾರ ಢವಳಗಿಯವರನ್ನು ತರಾಟೆಗೆ ತಗೆದುಕೊಂಡರು. ಇದನ್ನು ಪ್ರತಿಕ್ರಿಯಿಸಿದ ತಹಶೀಲ್ದಾರ ಢವಳಗಿ, ಪ್ರತಿ ತಿಂಗಳು 3 ನೇ ಶನಿವಾರ ಜಿಲ್ಲೆಯ 12 ತಾಲೂಕಿನ ಹಳ್ಳಿಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಒಂದು ಕಡೆಯಲ್ಲಿ ಭಾಗಿಯಾಗಲು ಸಾಧ್ಯ. ಉಳಿದೆಲ್ಲ ಕಡೆಗಳಲ್ಲಿ ತಾಲೂಕು ಆಡಳಿತ ಗ್ರಾಮಸ್ಥರ ಸಮಸ್ಯೆಗಳ ಆಹವಾಲು ಆಲಿಸಿ ಸೂಕ್ತ ಪರಿಹಾರ ಒದಗಿಸಲಿದೆ ಎಂದು ಸಮಥಿ೯ಸಿಕೊಂಡರು.

ಕೈಕೊಟ್ಟ ಕರೆಂಟ್: ತಹಶೀಲ್ದಾರ ಅನೀಲಕುಮಾರ ಢವಳಗಿ ಮಾತನಾಡಲು ವೇದಿಕೆಗೆ ಬರುತ್ತಿದ್ದಂತೆಯೇ ಹಠಾತ್ತನೆ ವಿದ್ಯುತ್ ಕೈ ಕೊಟ್ಟಾಗ ಕ್ಷಣಕಾಲ ಇರುಸು ಮುರುಸು ಕಸಿವಿಸಿ ಉಂಟಾಯಿತು. ಇದನ್ನು ಕಂಡು ಕೆಲವರು ಗ್ರಾಮ ವಾಸ್ತವ್ಯ ಸಂದರ್ಭದಲ್ಲೇ ಹೀಗಾದರೆ ಉಳಿದಂತ ಸಂದರ್ಭದಲ್ಲಿ ಹೇಗೋ ಏನೋ ಎಂದು ತಂತಮ್ಮಲೇ ಸಾರ್ವಜನಿಕರು ಗುಸುಗುಸು ಪಿಸುಮಾತುಗಳು ಶುರು ಹಚ್ಚಿಕೊಂಡಿದರು. ಗ್ರಾಮ ಲೆಕ್ಕಾಧಿಕಾರಿ ರಫೀಕ್ ಬಡೇಗಾರ ಸ್ವಾಗತಿಸಿದರು. ಇನ್ನೋರ್ವ ಗ್ರಾಮ ಲೆಕ್ಕಾಧಿಕಾರಿ ನಾನಾಗೌಡ ಪಾಟೀಲ ನಿರೂಪಿಸಿದರು. ಪಿಡಿಒ ಎಂ.ಬಿ.ಹಾವರಗಿ ವಂದಿಸಿದರು.

Exit mobile version