ಸರಕಾರಿ ಹುದ್ದೆಗಳ ನೇಮಕಾತಿ: “ವಯೋಮಿತಿ ಪರಿಷ್ಕರಣೆಗೆ” ನಿರುದ್ಯೋಗಿಗಳ ಆಗ್ರಹ

ಉತ್ತರಪ್ರಭ ಸುದ್ದಿ

ರಾಯಬಾಗ: “ರಾಜ್ಯ ಸರಕಾರ ಈಗ ಮೂರ್ನಾಲ್ಕು ವರುಷ ಕೋವಿಡ್ ವ್ಯಾಪಕವಾಗಿ ಹರಡಿ, ಲಾಕಡೊನ್ ಪರಿಣಾಮದಿಂದ ಯಾವುದೇ ತರಹದ ನೇಮಕಾತಿ ಮಾಡಿಕೊಂಡಿಲ್ಲ ಎಂಬುದು ಇದು ಎಲ್ಲರಿಗೂ ತಿಳಿದ ಸಾರ್ವತ್ರಿಕ ವಾಸ್ತವ ಸಂಗತಿ.ಉದ್ಯೋಗದ ಬಹು ನಿರೀಕ್ಷೆಯಲ್ಲಿದ್ದ ಈ ರಾಜ್ಯದಲ್ಲಿನ ಸಾವಿರಾರು ವಯೋಮಿತಿ ಮೀರಿದ ನಿರುದ್ಯೋಗಿ ಯುವಕರು ಸರಕಾರ ನಿಗಧಿಪಡಿಸಿದ ವಯೋಮಿತಿಯ, “ಲಕ್ಷ್ಮಣ ರೇಖೆ” ಮೀರಿ ಇದೀಗ ಹತಾಶರಾಗಿ ಆತಂಕದ ದಟ್ಟ ಕಾರ್ಮೋಡದಲ್ಲಿ ಬದುಕುತ್ತಿರುವುದು ಅತ್ಯಂತ ದುರಂತ.

ವಯೋಮಿತಿ ಮೀರಿದ ಅನೇಕ ಸಾವಿರಾರು ಯುವಕರ ಬಾಳಿನಲ್ಲಿ ತಲೆ ಮೇಲೆ ಆಕಾಶ ಬಿದ್ದಂತೆಯೇ ಆಗಿದೆ.!ಇಂತಹ ತುಟ್ಟಿಯ ದಿನಮಾನಗಳಲ್ಲಿ ಪರ್ಯಾಯ ಉದ್ಯೋಗ ಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆ, ದುಸ್ಥಿತಿ ವಯೋಮಿತಿ ಮೀರಿದ ಯುವಕರದ್ದಾಗಿದೆ.ಇತ್ತೀಚೆಗೆ ರಾಜ್ಯ ಸರಕಾರ ಶಿಕ್ಷಣ ಇಲಾಖೆಯಲ್ಲಿ ವಯೋಮಿತಿ ಪರಿಷ್ಕರಣೆ ಮಾಡುವ ಮೂಲಕ ಒಂದು “ವಿನೂತನ ಇತಿಹಾಸ” ಸೃಷ್ಟಿ ಮಾಡಿದಂತೆ ಇನ್ನುಳಿದ ಎಲ್ಲ ಬೇರೆ ಬೇರೆ ಇಲಾಖೆಯ ಹುದ್ದೆಗಳ ನೇಮಕಾತಿಗೂ ಸರ್ಕಾರ ವಯೋಮಿತಿ ಪರಿಷ್ಕರಣೆ ಮಾಡುವ ಮೂಲಕ ಪ್ರಸ್ತುತ ವಯೋಮಿತಿ ಮೀರಿದ ಸಾವಿರಾರು ನಿರುದ್ಯೋಗಿ ಯುವಕರ ಬಾಳಿಗೆ ಆಶಾಕಿರಣವಾಗಬೇಕು.

ಶಿಕ್ಷಣ ಇಲಾಖೆಗೆ ಮಾತ್ರ ವಯೋಮಿತಿ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದ ಸರಕಾರ, ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಮಾಡುವ ಸಂದರ್ಭದಲ್ಲಿ ಇನ್ನು ಮುಂದೆ ವಯೋಮಿತಿ ಹೆಚ್ಚಳ ಮಾಡಲು ಸರಕಾರ ಪ್ರಾಮಾಣಿಕವಾಗಿ ಕಾಳಜಿ ವಹಿಸಬೇಕು.ಇನ್ನುಳಿದ ಎಲ್ಲ ಇಲಾಖೆಗಳ ಸಿ.ಡಿ. ದರ್ಜೆಯ ಎಲ್ಲ ನೇಮಕಾತಿಗೆ ವಯೋಮಿತಿ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸುವ ಮೂಲಕ ಹತಾಶರಾದ ಸಾವಿರಾರು ನಿರುದ್ಯೋಗಿ ಯುವಕರ ಭವಿಷ್ಯ ಉಜ್ವಲಗೊಳಿಸಬೇಕಾಗಿದೆ..ಶಿಕ್ಷಣ ಇಲಾಖೆಯ ನಿರುದ್ಯೋಗಿ ಯುವಕರ ಹಿತ ಕಾಪಾಡಿದಂತೆ, ಈಗ ವಯೋಮಿತಿ ಮೀರಿದ ಅನೇಕ ಯುವಕರ ಭಾವನೆಗಳನ್ನು ರಾಜ್ಯ ಸರಕಾರ ಕೂಲಂಕುಷವಾಗಿ ಅರ್ಥಮಾಡಿಕೊಂಡು ಇವರ ಮೇಲೆ ಅನುಕಂಪ ತೋರಬೇಕು.ಪ್ರಸ್ತುತ ರಾಜ್ಯ ಸರಕಾರ ಉನ್ನತ ಅಧಿಕಾರಿಗಳ ಸಮೀತಿ ರಚಿಸಿ, ಕ್ಯಾಬಿನೆಟ್ ಸಭೆ ಕರೆದು, ದೀರ್ಘ ಚರ್ಚೆ ಮಾಡಿ ಒಂದು ಮಹತ್ವದ ಹೆಜ್ಜೆ ಇಡಬೇಕು.

ಪ್ರಸ್ತುತ ರಾಜ್ಯ ಸರಕಾರ ಈ ಕುರಿತು ದಿಟ್ಟ ನಿರ್ಧಾರ ಕೈಗೊಳ್ಳುತ್ತಾರೆಂಬ ನಿರೀಕ್ಷೆಯಲ್ಲಿ ಅನೇಕ ವಯೋಮಿತಿ ಮೀರಿದ ನಿರುದ್ಯೋಗಿ ಯುವಕರು ಸರಕಾರ ಮಹತ್ವದ ವಯೋಮಿತಿ ಮೀರಿದ ಯುವಕರನ್ನು ಮುಖ್ಯ ಗಮನದಲ್ಲಿಟ್ಟುಕೊಂಡು ನೇಮಕಾತಿ ಮಾಡುವ ಮುಂಚೆ ವಯೋಮಿತಿ ಪರಿಷ್ಕರಣೆ ಮಾಡಿ, ಈ ಕೂಡಲೇ ಮಹತ್ವದ ಘೋಷಣೆಗೆ ಕ್ರಮ ಕೈಗೊಳ್ಳಬೇಕು.ಅಧಿಸೂಚನೆಗೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಾವಿರಾರು ನಿರುದ್ಯೋಗಿ ಯುವಕರ ಬಾಳಿನಲ್ಲಿ ಸರಕಾರ ಮತ್ತೊಂದು ಹೊಸ ಇತಿಹಾಸ ಸೃಷ್ಟಿ ಮಾಡಬೇಕೆಂದು ನೊಂದ ಸಾವಿರಾರು ನಿರುದ್ಯೋಗಿ ಯುವಕರು ವಿನಮ್ರವಾಗಿ ಅಗ್ರಹಿಸಿದ್ದಾರೆ.

Exit mobile version