ಅನಕ್ಷರಸ್ಥರಿಗೆ ಜೀವನ ಕೌಶಲ್ಯ ಶಿಕ್ಷಣ ಮುಂದುವರಿಕೆ- ಎನ್.ಎಚ್.ನಾಗೂರ

ಉತ್ತರಪ್ರಭ ಸುದ್ದಿ

ಆಲಮಟ್ಟಿ: ಕೇಂದ್ರ ಸರಕಾರ ಪುರಸ್ಕೃತ ಎನ್.ಐ.ಎಲ್.ಪಿ. ನವಭಾರತ ಸಾಕ್ಷರತಾ ಕಾರ್ಯಕ್ರಮ ಯೋಜನೆಯಡಿ ರಾಜ್ಯದ 33 ಜಿಲ್ಲೆಗಳ 4.82 ಲಕ್ಷ ಅನಕ್ಷರಸ್ಥರಿಗೆ ಜೀವನ ಕೌಶಲ್ಯ ನೀಡುವ ಶಿಕ್ಷಣ ಕಲಿಕಾ ಚಟುವಟಿಕೆ ಪ್ರಸಕ್ತ ಸಾಲಿನಲ್ಲಿ ಮುಂದುವರೆಯಲಿದೆ ಎಂದು ಬೆಂಗಳೂರು ಲೋಕ ಶಿಕ್ಷಣ ನಿದೇ೯ಶನಾಲಯದ ಉಪ ನಿದೇ೯ಶಕ ಎನ್.ಎಚ್.ನಾಗೂರ ತಿಳಿಸಿದರು. ಇಲ್ಲಿನ ಎಂ.ಎಚ್.ಎಂ.ಪ್ರೌಢಶಾಲೆಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಶಾಲಾ ದಾಖಲಾತಿಗಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿ, ಲೋಕ ಶಿಕ್ಷಣ ನಿದೇ೯ಶನಾಲಯದ ವತಿಯಿಂದ 2022-23 ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ರೂಪರೇಷೆಗಳ ಮಾಹಿತಿ ನೀಡಿದರು.
ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿ ಆಯ್ಕೆಯಾದ ಸಾವಿರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ 3.66 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೇ ರಾಜ್ಯದ 33 ಜಿಲ್ಲೆಗಳಲ್ಲಿ ಗುರುತಿಸಲಾಗಿರುವ 4.82 ಲಕ್ಷ ಅನಕ್ಷರಸ್ಥರಿಗೆ ಸ್ಪಷ್ಟ ಓದು, ಬರಹ ಜೊತೆಗೆ ಸಾಮಾನ್ಯ ಗಣಿತ ಕಲಿಕೆಯ ಕೌಶಲ್ಯ ಮೂಡಿಸಲು ಯತ್ನಿಸಲಾಗುತ್ತಿದೆ. ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ 33 ಜಿಲ್ಲೆಗಳಲ್ಲಿನ ಜಿಪಂ ಅನುದಾನದಿಂದ ವಿವಿಧ ಕಲಿಕಾ ಕಾರ್ಯಕ್ರಮ ಪ್ರಕ್ರಿಯೆಗೆ ಚಾಲನೆ ನೀಡಿ 67 ಸಾವಿರ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಈ ಮೂರು ರೀತಿಯ ಸಾಕ್ಷರತಾ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಹಿಂದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಲಿಕಾ ಕೇಂದ್ರಗಳನ್ನು ಗುರುತಿಸಲಾಗುತ್ತಿದೆ. ಕಲಿಕಾಥಿ೯ಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಕಾರ ಮೂಲಕ ಅನಕ್ಷರಸ್ಥರಿಗೆ ಕಲಿಕೆ ಪ್ರಕ್ರಿಯೆ ಚಟುವಟಿಕೆಯಲ್ಲಿ ತೋಡಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ಗ್ರಾಮದಲ್ಲಿರುವ 15 ರಿಂದ 55 ವರ್ಷದೊಳಗಿನ ಅನಕ್ಷರಸ್ಥರು ತಮ್ಮ ಮನೆಗೆ ಸಮೀಪದಲ್ಲಿರುವ ಸರಕಾರಿ,ಅನುದಾನಿತ, ಅನುದಾನರಹಿತ ಶಾಲೆಗಳಿಗೆ ತೆರಳಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ತಾಲೂಕು ಹಂತದಲ್ಲಿ ಮಾಹಿತಿ ಕ್ರೋಡೀಕರಿಸಿ ಜಿಲ್ಲಾ ಹಂತಕ್ಕೆ ಕಳುಹಿಸಲು ಕೋರಲಾಗಿದೆ ಎಂದರು. ಪ್ರತಿ ವ್ಯಕ್ತಿಗೆ ಕಲಿಕೆಯೊಂದು ಬಾಳಿನ ಬೆಳಕು. ಕಲಿಕಾಥಿ೯ಗಳು ಕಲಿಯಬೇಕೆನ್ನುವ ಉತ್ಸುಕತೆಯ ಹಂಬಲದಿಂದ ಕಲಿಕಾ ಕೇಂದ್ರಕ್ಕೆ ಯಾವುದೇ ರೀತಿಯಿಂದ ಹಿಂಜರಿಯದೇ ಸೇರಬೇಕು. ಬಾಳಿಗೆ ಬೆಳಕು ನೀಡುವ ಪುಸ್ತಕಗಳನ್ನು ಸದಾ ಓದಬೇಕು.ಬರೆಯುವ,ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿತ್ಯ ನೋಟ್ ಬುಕ್ ಪುಸ್ತಕದಲ್ಲಿ ಈ ಅಭ್ಯಾಸ ರೂಢಿಗತ ಮಾಡಿಕೊಳ್ಳಬೇಕು ಎಂದು ಎನ್.ಎಚ್.ನಾಗೂರ ಅನಕ್ಷರಸ್ಥ ಜನತೆಯಲ್ಲಿ ಕೋರಿದರು. ಈ ಸಂದರ್ಭದಲ್ಲಿ ಅತಿಥೇಯ ಶಾಲೆಯ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಕಮದಾಳ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್.ಹೊಸಮನಿ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು. ಶಾಲಾ ಭೇಟಿ ನಂತರ ಲೋಕ ಶಿಕ್ಷಣ ನಿದೇ೯ಶನಾಲಯದ ಉಪ ನಿದೇ೯ಶಕ ಎನ್.ಎಚ್.ನಾಗೂರ ಆಲಮಟ್ಟಿ ಆಣೆಕಟ್ಟು ಪರಿಸರ ವೀಕ್ಷಿಸಿದರು.

Exit mobile version