ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ

ವರದಿ : ಗುಲಾಬಚಂದ ಜಾಧವ
ಆಲಮಟ್ಟಿ:
ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ ಸುಂದರ ದೃಷ್ಟಿ ಪ್ರಾಪ್ತಿವಾಗಿದೆ. ಪರಿಸರ ಎಂಬುದು ದಿವ್ಯ ಸಂಜೀವಿನಿ. ಅದನ್ನು ಪರಿಶುದ್ಧವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಗದುಗಿನ ತೋಂಟದಾರ್ಯ ವಿದ್ಯಾಪೀಠದ ಹಾಗು ಆಲಮಟ್ಟಿ ಎಸ್.ವ್ಹಿ.ವ್ಹಿ.ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು.


ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಅಧಿನದಲ್ಲಿ ನಡೆಯುತ್ತಿರುವ ಶಾಲಾ,ಕಾಲೇಜುಗಳ ಅಂಗಳದಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಅವರು ಮಾತನಾಡಿದರು.
ಪರಿಸರ ಸಂರಕ್ಷಿಸಿದರೆ ಮಾತ್ರ ಉಳಿಗಾಲ.‌ ಇಲ್ಲದಿದ್ದರೆ ಕೆಡಗಾಲ ಎದುರಾಗುವುದರಲ್ಲಿ ಸಂದೇಹವಿಲ್ಲ.‌ ಶುದ್ದನೀರು, ಗಾಳಿಯಿಂದಲ್ಲೇ ಜೀವನ ಚೈತ್ರ ಅರಳುವುದು.‌ ಪ್ರಕೃತಿ ವೈವಿಧ್ಯತೆಯಲ್ಲಿ ಆರೋಗ್ಯ ಭಾಗ್ಯವಿದೆ. ಪರಿಸರ ಆರಾಧನೆ ಪ್ರತಿಯೊಬ್ಬರಲು ಮೂಡಬೇಕು. ಸಸ್ಯ ವಾತ್ಸಲ್ಯ ಮೊಳಕೆಯೊಡೆಯಬೇಕು. ಪರಿಸರ ಸ್ನೇಹಿಗಳಾಗಿ ಮನುಷ್ಯ ರೂಪಗೊಳ್ಳಬೇಕು ಎಂದರು.
ಅಂತರಂಗ, ಬಹಿರಂಗದಲ್ಲಿ ಪರಿಸರ ಶುದ್ಧಿ ಕಲ್ಪನೆ ನಮ್ಮಲ್ಲಿ ನೆಲೆಸಲಿ.‌ ಪರಿಸರ ನೈದಿಲೆಯ ಶೃಂಗಾರ ಎಲ್ಲೆಡೆ ಫಸರಿಸಲಿ. ಹೆಚ್ಚಾಗುತ್ತಿರುವ ತಾಪಮಾನ ಹಸಿರು ಸಿರಿಯಿಂದ ಕುಗ್ಗಲಿ. ಸಸ್ಯ ಪ್ರೇಮ ಬದ್ದತೆಯಿಂದ ಮೂಡಿಬರಲಿ ಎಂದು ಆಶಿಸಿದರು.
ಪರಿಸರ ಮೇಲಿನ ದೌರ್ಜನ್ಯ ತಡೆಗಟ್ಟಲು ಶ್ರಮಿಸಬೇಕಾಗಿದೆ. ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಲೇ ಇವೆ. ಗಿಡಮರಗಳನ್ನು ಸ್ವಾರ್ಥಕ್ಕಾಗಿ ಕಡಿದು ಸಮಾಜದ ಸ್ವತ್ತು, ಸ್ವಾಸ್ಥ್ಯ ಹಾಳುಗೆಡುವುತ್ತಿರುವುದು ವಿಷಾಧನೀಯ. ಪ್ರಕೃತಿ ವಿಕೃತಗೊಳಿಸಿದರೆ ಮನು ಕುಲ ಗಂಡಾಂತರ ಸುಳಿಗೆ ಸಿಲುಕಿ ನರಳಾಡಬೇಕಾದೀತು. ಅಭಿವೃದ್ಧಿ ಜಪದಲ್ಲಿ ಮರಗಳನ್ನು ಧರೆಗೆ ಉರುಳಿಸಲಾಗುತ್ತಿದೆ. ಒಂದು ರೀತಿಯಲ್ಲಿ ಎಥೇಚ್ಚ ಮಾರಣಹೋಮ ನಡೆಯುತ್ತಿರುವುದು ತುಂಬಾ ನೋವಿನ ಸಂಗತಿ ಎಂದರು.
ಪ್ರಕೃತಿ ಮಾತೆ ಋಣಭಾರ ಗಿಡಗಳನ್ನು ನೆಡುವುದರ ಮೂಲಕ ತಣಿಸೋಣ. ನಮ್ಮ ದೈನಂದಿನ ಕಾರ್ಯಗಳಲ್ಲಿ ಪರಿಸರಕ್ಕೆ ಮಹತ್ವ,ಆದ್ಯತೆ ನೀಡಿ ಪರಿಸರ ಪ್ರೀತಿ ಹಂಚೋಣ. ಪರಿಸರ ದಿನದಂದು ಮಾತ್ರ ಪರಿಸರ ಕಾಳಜಿ ಸಲ್ಲದು. ಪರಿಸರ ರಕ್ಷಣೆ ಭಾವ ನಿತ್ಯವೂ ಸಾಗಬೇಕು. ಪರಿಸರವೇ ನಮಗೆ ಜೀವಜಾಲ. ಅದು ಚಿಗುರಲಿ. ಹಸಿರಿನಡೆ ನಮ್ಮ ನಡೆ ಸಾಗಲಿ. ವೃಕ್ಷ ಪರಿಮಳ ಸೂಸಲಿ. ಸಕಲ ಜೀವ ಕುಲ ನೆಮ್ಮದಿಯ ಉಸಿರಿಗೆ ಗಿಡಗಳೇ ಕಾರಣ.ಪರಿಸರ ರಕ್ಷಣೆಯಲ್ಲಿ ನಮ್ಮೆಲ್ಲರ ಹಿತ ಅಡಗಿದೆ ಎಂದು ಶಿವಾನಂದ ಪಟ್ಟಣಶೆಟ್ಟರ ನುಡಿದರು.
ಹಿರಿಯ ವಕೀಲರಾದ ಎಸ್.ಎಸ್.ಶೆಟ್ಟರ, ಶ್ರೀಮತಿ ಶ್ರೀದೇವಿ ಶೆಟ್ಟರ, ಗದುಗಿನ ಜೆಟಿವಿಪಿ ಮ್ಯಾನೇಜರ್ ಎಂ.ಎಸ್.ಅಂಗಡಿ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ ಈರಣ್ಣ ಗುರುಪುತ್ರಪ್ಪನವರ ಇತರರಿದ್ದರು.


Exit mobile version