27 ವಸಂತದ ಬಳಿಕ ಆಲಮಟ್ಟಿಯಲ್ಲಿ ಗುರು-ಶಿಷ್ಯರ ಅಪೂರ್ವ ಸಮ್ಮಿಲನದ ಸೊಬಗು ಅನಾವರಣ…!

ಉತ್ತರಪ್ರಭ
ಸಚಿತ್ರ ವರದಿ : ಗುಲಾಬಚಂದ ಆರ್.ಜಾಧವ
ಆಲಮಟ್ಟಿ (ವಿಜಯಪುರ ಜಿಲ್ಲೆ)
: ಇದು ಆಧುನಿಕತೆಯ ಫ್ಯಾಶನ್ ಯುಗ. ಆ ವೈಭವದ ಗುಂಗಿನಲ್ಲಿ ಹೆತ್ತವರನ್ನೇ ದೂರುದಬ್ಬಿ ವಿಕೃತಿಯಿಂದ ತಳ್ಳುವ ಮನಸ್ಥಿತಿ ಅದೆಷ್ಟೋ ಕುಡಿಗಳಲ್ಲಿಂದು ಕಾಣುತ್ತಲ್ಲಿದ್ದೆವೆ. ಕ್ಷಣಕ್ಷಣವೂ ಬದುಕಿನಲ್ಲಿ ಸ್ವೇಚ್ಛಾಚಾರದ ವ್ಯಾಮೋಹ, ಸಂಸ್ಕಾರ, ಸಂಸ್ಕೃತಿಗಳಿಲ್ಲದ ಹೊಸತನದ ಹಂಬಲದ ಲಾಲಸ್ಯಕ್ಕೆ ಒಳಗಾಗುತ್ತಿರುವ ಈ ಭಿನ್ನಾಣದ ಸೊಗಡು ಕಾಲಮಾನದಲ್ಲಿ ಗುರು,ಹಿರಿಯರೆಂದರೆ ಬಹುತೇಕ ಯುವಜನತೆಗೆ ಅಲರ್ಜಿ.! ಅಂಥದರಲ್ಲಿ ಅನನ್ಯತೆಯ ಪ್ರೀತಿ, ಅಂತಃಕರಣದಿಂದ ಕಾಣುವದೆಂದರ? ಅಪರೂಪವೇ ಸರಿ!
ಇಂಥದೊಂದು ವಿಶೇಷ, ಅವಿಸ್ಮರಣೀಯ ದೃಶ್ಯ ವೈಭವ ಜಂಗಮರ ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಈಚೆಗೆ ಗೋಚರಿಸಿತು!.


ಗುರು-ಶಿಷ್ಯರ ಪವಿತ್ರ ಸಂಬಂಧ, ಬಂಧನ, ಅಪೂರ್ವ ಸಮ್ಮಿಲನದ ತೇರು ಅಲ್ಲಿ ಪ್ರಸನ್ನ ಭಾವದಿಂದ ಸಾಗಿತ್ತು. ಹಳೆಯ ನೆನಪುಗಳ ಬುತ್ತಿ ಗುರು-ಶಿಷ್ಯರ ಮಸ್ತಿಕದಲ್ಲಿ ಅಳಿದುಳಿದ ಸ್ಮೃತಿಪಟಲದ ಗಂಟಿನಿಂದ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದವು. ಆ ರೋಚಕ ಮೆಲುಕುಗಳ ಪರಿಮಳ ಹೊರಸೂಸಿ ಘಮಘಮಿಸಿದವು. ವಸಂತ ಮಾಸ ಚೈತ್ರಾಗಮನದಿಂದ ನವ ಹರುಷ,ಉಲ್ಲಾಸ, ಆನಂದ ತರುವಂತೆ ಅಲ್ಲಿ ಗುರು-ಶಿಷ್ಯರ ಹಳೆ ಮೌಲಿಕ ಮೆಲುಕುಗಳ ಸಲ್ಲಾಪ ಊರಿಬಿಸಿಲನ್ನು ಲೆಕ್ಕಿಸದೇ ಸಂತಸಮಯದಿಂದ ಎಣಿಯಿಲ್ಲದೇ ಸಾಗಿತ್ತು!.
ಬದುಕಿನಲ್ಲಿ ಅದೆಷ್ಟೇ ನಾಗಾಲೋಟದ ಹೆಜ್ಜೆಯನ್ನಿರಿಸಿದ್ದರೂ ಕೂಡ ಗುರು-ಶಿಷ್ಯರ ಸಂಬಂಧ ಮಾತ್ರ ಪುರಾತನ ಕಾಲದಿಂದಲೂ ತನ್ನತನ ಉಳಿಸಿಕೊಂಡು ಬಂದಿದೆ ಎಂಬ ಮಾತಿಗೆ ಕೃಷ್ಣೆಯ ತೀರದಲ್ಲಿ ಶನಿವಾರ ನಡೆದ “ಗುರುವಂದನ” ಕಾರ್ಯಕ್ರಮ ಸಾಕ್ಷಿಯಾಯಿತು.
ಆಲಮಟ್ಟಿ ಡ್ಯಾಂಸೈಟ್ ನ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1992 ರಲ್ಲಿ 7 ನೇ ವರ್ಗ, ಸ್ಥಳೀಯ ಎಂಎಚ್ ಎಂ ಪ್ರೌಢಶಾಲೆಯಲ್ಲಿ 1995 ರಲ್ಲಿ 10 ನೇ ವರ್ಗ ಪೂರೈಸಿದ ಹಳೆಯ ವಿದ್ಯಾರ್ಥಿ ಬಳಗ ಆಯೋಜಿಸಿದ ಗುರುವಂದನ ಜನಮನ್ನಣೆಗೆ ಪಾತ್ರವಾಯಿತು.
ಅಂದಿನ ಆ ವಿದ್ಯಾರ್ಥಿಗಳು ಮೂರು ದಶಕಗಳ ನಂತರ ಹತ್ತಾರು ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದರೂ ಕೂಡ, ಕಲಿಸಿದ ಗುರುಗಳನ್ನು ಕಂಡೊಡನೆ ಕಣ್ಣಾಲಿಗಳನ್ನು ತುಂಬಿಕೊಂಡು ಚರಣ ಕಮಲಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಗೈದ ದೃಶ್ಯ ಅವರ್ಣನೀಯ.
ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಬದುಕಿನ ಕಾಲಘಟ್ಟದ ಕೊನೆಯಲ್ಲಿ ದಿನಗಣನೆ ಮಾಡುತ್ತಿದ್ದ ಅದೆಷ್ಟೋ ಜನ ವಿಶ್ರಾಂತ ಗುರುವರ್ಯರು ಅಪರೂಪದ ಈ ಕಾರ್ಯಕ್ರಮ ಕಂಡು ಮೂಕ ವಿಸ್ಮಿತರಾದರು.
ಆಲಮಟ್ಟಿಡ್ಯಾಂ ಸೈಟ್ ಅಂದರೇ ಕೆಬಿಜೆಎನ್ ಎಲ್ ನೌಕರರ ವಸಾಹತು, ರಾಜ್ಯದ ನಾನಾ ಕಡೆಯಿಂದ ನೌಕರರು ಕೆಲಸಕ್ಕೆ ಇಲ್ಲಿ ಬಂದಾಗ ಅವರ ಮಕ್ಕಳೆಲ್ಲರೂ ಇಲ್ಲಿಯೇ ಕಲಿತಿದ್ದು ವಿಶೇಷ. ಕಲಿತ ಬಹುತೇಕ ಜನ ರಾಜ್ಯದ ನಾನಾ ಕಡೆ ಇದ್ದಾರೆ. 27 ವರ್ಷಗಳ ತರುವಾಯ ತಮ್ಮ ತಮ್ಮ ಮಿತ್ರರನ್ನು ಕಂಡು ಖುಷಿ ಪಟ್ಟವರು ಹೆಚ್ಚಿನವರಿದ್ದರು.
ವಿಶ್ರಾಂತ ಗುರುಗಳು ಮೂರು ದಶಕದ ಹಿಂದೆ ವೃತ್ತಿ ಜೀವನದ ಒಂದು ಭಾಗವಾಗಿದ್ದ ಆಲಮಟ್ಟಿಯ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಅದೇನೋ ಅವ್ಯಕ್ತ ಭಾವ ಮನಸ್ಸಿನ ಮೂಲೆಯಲ್ಲಿ ಗತ ಇತಿಹಾಸವನ್ನು ಮೆಲಕು ಹಾಕುವಂತೆ ಮಾಡಿತು!.
ಸರ್, ನಾನು ನಿಮ್ಮ ಹಳೇ ವಿದ್ಯಾರ್ಥಿ, ನಿಮ್ಮ ಕೈಯಲ್ಲಿ ಕಲಿತಿರುವೆ, ನನ್ನ ಹೆಸರು… ಈಗ ಆ ಊರಲ್ಲಿ ಕೆಲಸ… ಮಾಡುತ್ತಿರುವೆ ಎಂಬಿತ್ಯಾದಿ ವಿಷಯ ಗುರುಗಳಿಗೆ ಹಳೆಯ ನೆನಪುಗಳೊಂದಿಗೆ ಶಿಷ್ಯಬಳಗ ತಮ್ಮನ್ನು ತಾವು ಮೊದಲು ಪರಿಚಯಿಸಿಕೊಳ್ಳುತ್ತಿದ್ದರು. ಆಗ, ಓ ನೀನಾ ಎಂಬ ಉದ್ಘಾರ ಗುರುಗಳ ಬಾಯಿಂದ ತಡವರಿಸುತ್ತ ಬರುತ್ತಿದ್ದವು.
ಶಿಷ್ಯರು ಅಂದು ಕಲಿತ ವಿದ್ಯಾಭ್ಯಾಸ ಹಾಗೂ ಗುರುಗಳು ಕಲಿಸಿದ ಪಾಠದ ಸವಿರುಚಿ ಆ ಹಿಂದಿನ ದಿನಗಳು ಎಷ್ಟೊಂದು ಚಂದವಾಗಿದ್ದವು ಎನ್ನುತ್ತ ಅಂದಿನ ಸುಂದರ ಘಳಿಗೆಗಳನ್ನು ಸ್ಮರಿಸಿಕೊಂಡು ಹಳೇ ಲೋಕದ ಜಮಾನದಲ್ಲಿ ಮಿಂದೆದ್ದು ರೋಚಕ ಅನುಭವಗಳನ್ನು ಹಂಚಿಕೊಂಡರು. ಇದು ಅವರಿಗೆ ಪ್ರಿಯವೂ ಹಿತವೂ ಅಗಿತ್ತು.ಈ ವಿಶೇಷ ಲಹರಿಯ ಅಮೂಲ್ಯ ಭೂಷಣ ಗುರು-ಶಿಷ್ಯರ ನಿಷ್ಕಲ್ಮಶ ಪ್ರತೀತಿಯ ಪ್ರೀತಿ ಗೌರವವುಳ್ಳ ಬಂಗಾರವೆಂಬ ಆಭರಣಕ್ಕೆ ಪಾತ್ರವಾಗಿರುವಂತೆ ಭಾಸವಾಯಿತು ! ಗುರು ಪದಕ್ಕೆ ಇರುವ ಮೌಲ್ಯ ಬೇರೆ ಯಾವುದೇ ಪದಕ್ಕೆ ಸರಿ ಹೊಲುವದಿಲ್ಲ ಎಂಬುದು ಇಲ್ಲಿನ ನೋಟ ಸಾಕ್ಷೀಕರಿಸುವಂತಿತ್ತು !
ಶಿಷ್ಯರ ಎದೆಯಾಳದಲ್ಲಿ ಹುದುಗಿದ ಗುರು ಪ್ರೇಮ ಅದೆಂಥಾ ಕಾಳಜಿಪೂರ್ವಕ ಗೌರವಾರ್ಥ ಅಗಿತ್ತೆಂದರೆ ಬಣ್ಣಿಸಲು ಪದಗಳೇ ಸಾಲದು ! ತ್ಯಾಗಮೂತಿ೯ ಗುರುಗಳ ಮಹತ್ವ ಈ ಗುರುವಂದನಾ ಕಾರ್ಯಕ್ರಮದಲ್ಲಿ ಮನೋಜ್ಞವಾಗಿ ಬಿಂಬಿತವಾಯಿತು.
ಕಷ್ಟ, ತಾಪತ್ರಯಗಳಿದ್ದರೂ ಪ್ರೀತಿಯಿಂದ ನಾಲ್ಕಕ್ಷರ ಅಂದು ಮಕ್ಕಳಿಗೆ ಗುರುಗಳು ಉಣಬಡಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಸುಂದರ ಹೊಂಗನಸು ಭಿತ್ತಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದ್ದಾರೆ. ಆ ಅಂತರಾಳದ ಕಲಿಸಿದ ನಮ್ಮ ಗುರುಗಳೆಂಬ ಅಂತಃಕರಣದ ಪ್ರೀತಿ ಉನ್ಮಾದ ಇಲ್ಲಿ ಶಿಷ್ಯವೃಂದದ ಹೃದಯದಲ್ಲಿ ಕಲ್ಪನೆಗೂ ಮೀರಿ ಉಕ್ಕಿಹರಿದಿತ್ತು ! ಒಳ್ಳೆ ನಡೆ,ನುಡಿಯ ಕಲಿಕೆ, ಕಲಿಸುವಿಕೆ ಪರಿಣಾಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಈ ಹಳೆಯ ಗುರು ಸಮೂಹ ಶ್ರಮಿಸಿರುವದರಿಂದ ನೈತಿಕ ಮೌಲ್ಯಗಳ ಶಿಕ್ಷಣದ ನೆಲೆಗಟ್ಟು ಇಂದಿನವರೆಗೂ ವಿಶಾಲವಾಗಿ ಶಿಷ್ಯರ ಮನದಲ್ಲಿ ನೆಲೆಯೂರಿದೆ. ಹೀಗಾಗಿ ಓಲ್ಡ್ ಗುರು ಬ್ರಹ್ಮರನ್ನು ಪ್ರಾಂಜಲ್ಯ ಮನದಿಂದ ಸ್ಮರಿಸಿ ಅದರದ ಗೌರವಾರ್ಪಣೆ ಸಲ್ಲಿಸಿದ್ದಾರೆ. ಕಲಿಸಿದ ಗುರುಗಳನ್ನು ತಮ್ಮ ಮನದಿಂದ ದೂರು ಸರಿಸದೇ ಅಕ್ಕರೆಯಿಂದ ಕಂಡು ಎಲ್ಲರನ್ನೂ ಒಗ್ಗೂಡಿಸಿ ಋಣಭಾರ ಸಮಪಿ೯ಸಿದ್ದು ಎಂದಿಗೂ ಮರೆಯಲಾಗದು! ಇದು ಗುರು-ಶಿಷ್ಯರ ಮನದಲ್ಲಿ ಉಸಿರಿರುವರೆಗೂ ಹಸಿರಾಗಿರುವಂತೆ ಸ್ಮರಣೀಯ ಕಾಯಕ ದೀವಿ ಗೋಚರಿಸಿತು. ಹಳೆಯ ನೆನಪುಗಳ ಹರಿವು ಅದರ ಅರಿವು ನಿಜಕ್ಕೂ ಅಚ್ಚಳಿಯಾಗಿ ಬಿಗಿದಪ್ಪಿಕೊಳ್ಳುವಂತೆ ವೈವಿಧ್ಯಮದಿಂದ ನಡೆದಿತ್ತು!.
ಗುರು-ಶಿಷ್ಯರ ಈ ಅಪೂರ್ವ ಸಂಗಮದಲ್ಲಿ ತಾಜಾತನದ ಬೆವರಿನ ಉಸಿರಿತ್ತು. ವಾತ್ಸಲ್ಯದ ಮೆರಗಿತ್ತು. ಗುರುಗಳೇ ನಿಮ್ಮ ನೆನಪಿನಾಳದಿ ಜೊತೆಗಿನ ಬಿಡಿಸಲಾಗದ ನಂಟು ನಮ್ಮಯ ಎದೆಯೊಳು ಮಿಟುತಿದೆ. ಮನಸ್ಸಿಗೆ ಒಂಥರ ಖುಷಿ. ಅದಂತೂ ಅವರ್ಣನೀಯ ಎಂಬ ಭಾವ ಮೇಳದಲ್ಲಿ ಮಿಂದೆದಿದ್ದರು ಶಿಷ್ಯಂದಿರು ! ಬಹು ವರುಷದ ನಂತರ ಪರಸ್ಪರ ಮೊಗಗಳನ್ನು ಕಣ್ಣಾರೆ ಕಂಡು ಅಚ್ಚರಿಯ ಖುಷಿ ಹಂಚಿಕೊಂಡರು. ಹಿಗ್ಗಿದ ಈ ಅವಿಸ್ಮರಣೀಯ ಸಂತಸಕ್ಕೆ ಪಾರವೇ ಇರಲಿಲ್ಲ ! ಭಿನ್ನ ವಿಭಿನ್ನ ಭಾವಾಂತರ ಮೊಗ ನೋಟ ಮೇಳೈಸಿ ಸೃಜನಶೀಲ ಆತ್ಮೀಯ ರಂಗೊಂದು ಸೃಷ್ಟಿಯಾಗಿತ್ತು!. ಒಂದೆಡೆ ಸ್ವಾಭಿಮಾನದ ಗುರುಗಳಲ್ಲಿ ಸಂಭ್ರಮ ಮನೆ ಮಾಡಿದ್ದರೆ ಇನ್ನೊಂದೆಡೆ ವಿದ್ಯಾದಾನ ಗೈದ ಗುರುಗಳನ್ನು ಆತ್ಮೀಯತೆಯಿಂದ ಪೂಜಿಸಿ ಸತ್ಕರಿಸಿದ ಸಿರಿತನದ ಸಡಗರ ಶಿಷ್ಯ ಬಳಗದಲ್ಲಿ ಮೊಳಕೆಯೊಡೆದಿತ್ತು! ಮಮತೆಯ ವಿಭಿನ್ನ ಅನುಭವದಲ್ಲಿ ಅವರೆಲ್ಲಾ ತೇಲಿದರು.‌ ಅನುಭಾವ ವೇದಗಳು,ಸಾಂಪ್ರದಾಯಿಕ ಗುರು-ಶಿಷ್ಯರ ಜೀವನ ಬೆಸುಗೆ ಬೆಸೆಯುವ ಸೇತುವೆಯಾಗಿ ಕಂಗೊಳಿಸಿತು ಈ ಕಾರ್ಯಕ್ರಮ!.
ಹಳೆಯ ವಿದ್ಯಾರ್ಥಿಗಳು 80 ಜನ ಕೂಡಿ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ದೂರದಿಂದ ಬಂದು ಎರಡು ದಿನ ಇಲ್ಲಿಯೇ ಇದ್ದು ಸ್ಥಳೀಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ವಿಶೇಷ.
ನಿವೃತ್ತರಾಗಿರುವ ಶಿಕ್ಷಕರಾದ ಸಿ.ಎಸ್. ಕಣಕಾಲಮಠ, ಬಿ.ಎ. ಕುಂಬಾರ, ಎಸ್.ಐ. ಹರಣಶಿಕಾರಿ, ವಿ.ಎ. ಭಾಂಡವಾಳಕರ, ಸಿ. ಓಂಕಾರಪ್ಪ, ಕೆ.ಎಂ. ತಾಂಬೆ, ಜಿ.ಎಸ್. ಬಡಿಗೇರ, ಪಿ.ಎಂ. ಮಹೇಂದ್ರಕರ, ಪಿ.ಎಲ್. ಮಿಂಚನಾಳ, ಬಿ.ಬಿ. ಉಣ್ಣಿಭಾವಿ, ಎಸ್.ಆರ್. ಹುಣಶಿಕಟ್ಟಿ, ಎಸ್.ಬಿ.ನಾಗೂರ, ಕೆ.ಎಂ. ವಜ್ಜಲದ, ಎಸ್.ಜಿ. ಹಿರೇಗೌಡರ, ಜೆ.ಎಸ್. ಪಾಟೀಲ, ಆರ್.ಆರ್. ಕುಲಕರ್ಣಿ, ಎಸ್.ಎಸ್. ಬಡಿಗೇರ, ಲಿಂಬುರಾಜ ನಾಯಕ, ಎಸ್.ಎಸ್. ಹಿರೇಮಠ, ಜಿ.ಎಂ. ಕೊಟ್ಯಾಳ ಸೇರಿ ಹಲವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಾನಾ ಕಡೆಯಿದ್ದ ಎಲ್ಲಾ ಶಿಕ್ಷಕರಿಗೂ ಬಾಡಿಗೆ ಕಾರು ಮಾಡಿಸಿ ಅವರನ್ನು ಆಲಮಟ್ಟಿಗೆ ಕರೆಯಿಸಿ ಗೌರವಿಸಿದ ಶಿಷ್ಯ ಬಳಗದ ಕಾರ್ಯ ಕಂಡು ಶಿಕ್ಷಕರು ಭಾವುಕರಾದರು. ನಮ್ಮ ಮಕ್ಕಳೇ ನಮ್ಮನ್ನು ಕಾಲು ಮುಗಿಯಲು ಹಿಂದೇಟು ಹಾಕುತ್ತಾರೆ, ಅಂತಹದರಲ್ಲಿ ಎಲ್ಲಿಯೋ ಇರುವ ನೀವು ಕಾಲು ಮುಗಿದು ಸನ್ಮಾನಿಸಿ ಗೌರವಿಸಿದ್ದು ಜೀವನದ ಇಳೆ ಕಾಲದಲ್ಲಿರವ ನಮಗೆ ಸ್ಪೂರ್ತಿ ದೊರೆತಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿ, ಶಿಕ್ಷಕ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ವಿರೇಶ ಹೆಬ್ಬಾಳ, ಮುಖ್ಯ ಶಿಕ್ಷಕರಾದ ಬಸವರಾಜ ಯರವಿನತೆಲಿಮಠ, ಎಸ್.ಐ. ಗಿಡ್ಡಪ್ಪಗೋಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಲ್ಲ ಶಿಕ್ಷಕರು ಹಾಗೂ ಹಲವು ಹಳೆ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಹಿಂದಿನ ಸವಿಸವಿ ನೆನಪುಗಳ ಮೆರವಣಿಗೆ ಮನಮನಗಳಲ್ಲಿ ಸಖತ್ತಾಗಿ ಹರಿದಾಡಿತು. ಅಕ್ಕರೆಯ ಉಮೇದು ನಲಿದಾಡುತ್ತಿತ್ತು. ಅಲ್ಲಿ ಹಳೆ ಹೊಳಪು ಮಾಸಿದಿಲ್ಲ. ಬದಲಿಗೆ ಹೊಸ ಹುರುಪಿನ ಟಚ್ ಸ್ಪಶಿ೯ಸಿತು ! ಮುದುಡಿದ ತಾವರೆ ಅರಳಿದಂತೆ ಬಾಡಿ ಕಮರುತ್ತಿರುವ ಇಳಿ ಮುಸ್ಸಂಜೆಯ ಮುಖ ಕಂಗಳುಗಳಲ್ಲಿ ನವ್ಯ ಪುನಶ್ಚೇತನ ಜನುಮದ ಸೊಗಸು,ಸೊಬಗು ಅರಳಿ ನಿಂತಿತ್ತು!.
ಗುರು ಜನ್ಮ ತಾಳಿದಕ್ಕೆ ಸಾರ್ಥಕವಾಯಿತ್ತೆಂಬಂತೆ ಹುರುಪಿನ ಆಧುನಿಕ ನವೀನ ಮಾದರಿ ಗುರು-ಶಿಷ್ಯರ ಬಾಂಧವ್ಯದ ಭಾವಾವರಣ ಕಂಡಿತು. ಬಹುತೇಕ ಎಲ್ಲ ಸ್ತರದ ಸಂಬಂಧಗಳು ಸಮಾಜದಲ್ಲಿ ದಿನೆದಿನೆ ಮುಸುಕು ಮುಸುಕಾಗುತ್ತಾ ಸಾಗುತ್ತಿದೆ. ಇಂಥ ಜಿಜ್ಞಾಸೆಯಲ್ಲಿಯೇ ಜೀವನ ಪಯಣ ಅನಿವಾರ್ಯ ! ಇಂಥ ವೈರಾಗ್ಯ ವೈರುಧ್ಯದಲ್ಲಿ ಸಮಾಜ ನಲಗುತ್ತಿರುವುದು ವಿಪಯಾ೯ಸ! ಅದಾಗ್ಯೂ ಇಲ್ಲಿ ಹೃದಯ ಹೂವಿನ ಹಂದರವನ್ನಾಗಿಸಿ ಬದುಕಿನ ಪಾಠ ಹೇಳಿಕೊಟ್ಟ ಹಳೆಯ ಮೇಷ್ಟ್ರುಗಳಿಗೆ ಉನ್ನತ,ಆದರ್ಶ ಧ್ಖೇಯದೊಂದಿಗೆ ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ಗುರುಗಳನ್ನು ಗೌರವಿಸಿರುವ ನಿಲುವು ಇಂದಿನ ಯುವಜನಾಂಗಕ್ಕೆ ಆದರ್ಶಪ್ರಾಯ! ಇಂಥ ನಯ ವಿನಯದ ಛಾಯೇ ಸದಾಕಾಲಕ್ಕೂ ಮಿನುಗುತ್ತಿರಲಿ. ಗುರುಕುಲದ ಹಾಗು ಶಿಷ್ಯ ಸಮೂಹದ ಪಾವಿತ್ರ್ಯಕ್ಕೆ ಧಕ್ಕೆ ತಾಗದಿರಲಿ. ಗುರುವರ್ಯರು ಮಕ್ಕಳಿಗೆ ಜ್ಞಾನ ಭೋದನೆ ಉತ್ಕಟ ರೀತಿಯಲ್ಲಿ ಸಾಗಿಸಿ ಸಾರ್ಥಕತೆ ಹೊಂದಲಿ. ಸಮರ್ಥಕರಾಗಿ ಸಮಾಜದ ಕಣ್ಣಾಗಲಿ. ಕಲಿಸಿದ ಗುರುಗಳಿಗೆ ಶಿಷ್ಯಂದಿರು ತಲೆಬಾಗಿ ನಮಿಸಿ ಗೌರವಭಾವನೆ ತಾಳಲಿ. ಒಟ್ಟಿಗೆ ನೈತಿಕ ಪ್ರಭಾವಳಿಗೆ ಗುರು-ಶಿಷ್ಯರು ಸಾಕ್ಷಿಯಾಗಲಿ. ಇದೇ ತೆರನಾಗಿ ಓಲ್ಡ್‌ ಈಸ್ ಗೋಲ್ಡ್ ಕ್ಯೂರಿಯಾಸಿಟಿ ಹರಿವು ನಿರಂತರ ಸಾಗಲಿ. ಹೊಸ ಹುಮ್ಮಸು ತರಲಿ. ನವ ಚೈತನ್ಯ ಮೂಡಲಿ ಎಂಬಂತೆ ಸಾಕ್ಷಾತ್ ಅಪೂರ್ವ ಸಂಗಮಲೋಕೊಂದು ಆಲಮಟ್ಟಿಯಲ್ಲಿ ಗುರು-ಶಿಷ್ಯರ ಪವಿತ್ರಕರಣದ ಸಮ್ಮಿಲನದದಿಂದ ಸೃಷ್ಟಿಯಾಗಿತ್ತು !
ಹಳೆ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ನಡೆದವು.
ನಮ್ಮ ಕೈಯಲ್ಲಿ ಕಲಿತ ಅಂದಿನ ಹಳೆ ವಿದ್ಯಾರ್ಥಿಗಳು ಇಂದು ದೊಡ್ಡವರಾಗಿ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕುತ್ತಿರುವುದುನ್ನು ನೋಡಿ ನಮಗೆಲ್ಲ ಸಂತಸವಾಗಿದೆ. ಗುರು ವಂದನೆಗೆ ಮನ ಪುಳಕಿತವಾಗಿದೆ ಎಂದು ಸುಮಾರು 82 ರ ಇಳಿ ವಯೋಮಾನದಲ್ಲಿರುವ ವಿಶ್ರಾಂತ ಶಿಕ್ಷಕರಾದ ಎಸ್.ಎಸ್.ಹಿರೇಮಠ, 70 ರ ಪ್ರಾಯದಲ್ಲಿರುವ ಎಸ್.ಆಯ್.ಹರಣಶಿಕಾರಿ ಹಾಗು 53 ರ ವಸಂತದಲ್ಲಿರುವ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಸದ್ದಿಲ್ಲದೆ ಸಾಗುತ್ತಿದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿ:ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ…

ವಿಜಯಪುರದಲ್ಲಿ ಚಿತ್ರಕಲೆ, ಸಂಗೀತ, ವೃತ್ತಿ ವಿಶೇಷ ಶಿಕ್ಷಕರ ಜಿಲ್ಲಾ ಮಟ್ಟದ ಕಾಯಾ೯ಗಾರ

ಬೋಧನಾ ಕೌಶಲ್ಯ ಪ್ರೇರಣಾತ್ಮಕವಾಗಿರಲಿ ಡಿಡಿಪಿಐ ಎನ್.ವಿ.ಹೊಸೂರ ಅಭಿಮತವರದಿ : ಗುಲಾಬಚಂದ ಜಾಧವವಿಜಯಪುರ: ಕಾಲಚಕ್ರಗಳು ಬದಲಾದಂತೆ ಸಮಾಜದಲ್ಲಿ…

ಹಳಕಟ್ಟಿ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ಸಡಗರ

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ: ಜಿ.ಎಂ.ಕೋಟ್ಯಾಳ ಉತ್ತರಪ್ರಭಆಲಮಟ್ಟಿ : ಚುನಾವಣೆ ಎಂದ ಮೇಲೆ ಸೋಲು,ಗೆಲುವು ಇದಿದ್ದೆ. ಸೋತವರು…

ಆಲಮಟ್ಟಿ: ಬಸವಭೂಮಿ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತಾತೀಥ್ಯ

ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು…