ಕಳೆಗಟ್ಟಿದ ಚಂದ್ರಗಿರಿ ಜಾತ್ರೆ- ಎಲ್ಲೆಲ್ಲೂ ಜನ ಸಾಗರ ಚಂದ್ರಮ್ಮನ ಸನ್ನಿಧಿಯಲ್ಲಿ ಉರುಳು ಸೇವೆ ಜೋರು


ಗುಲಾಬಚಂದ ಜಾಧವ
ಆಲಮಟ್ಟಿ : ಹಿಂದೆಂದೂ ಕಂಡರಿಯದಂತೆ ಎತ್ತ ನೋಡಿದರು ಜನರೋ ಜನ. ಭಕ್ತಿಭಾವದ ಲೀಲೆಯಲ್ಲಿ ಹರಿದು ಬಂದ ಅಸಂಖ್ಯಾತ ಭಕ್ತ ಸಾಗರ. ದೇವಿಯ ದರ್ಶನಕ್ಕೆ ಎರಡು ಮೂರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜಪತಪ ಮಾಡಿದ ಜನ. ಶಕ್ತಿದೇವತೆಯ ಸನ್ನಿಧಿಯಲ್ಲಿ ಉರುಳು ಸೇವೆಯ ನಾಗಾಲೋಟ. ಹರಿಕೆ ತೀರಿಕೆಗಳ ಮಹಾಪೂರ…
ಇಂಥದೊಂದು ಅವಿಸ್ಮರಣೀಯ ಧಾಮಿ೯ಕ ಪವಿತ್ರತೆಯ ಭಾವನಾತ್ಮಕ ಅಭೂತಪೂರ್ವ ದೃಶ್ಯ ನೋಟಕ್ಕೆ ಇಲ್ಲಿನ ಚಂದ್ರಗಿರಿಯ ಅಂಗಳ ಗುರುವಾರ ಸಾಕ್ಷಿಯಾಗಿತ್ತು !


ಕೃಷ್ಣಾ ನದಿತೀರದ ಜಾಗೃತ ಶಕ್ತಿದೇವತೆ ಎಂದೇ ಮನೆ ಮಾತಾಗಿ ಪ್ರಸಿದ್ಧಿ ಪಡೆದಿರುವ ಇಲ್ಲಿನ ಚಂದ್ರಗಿರಿಯ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆತಿದ್ದು ಶನಿವಾರದವರೆಗೆ ಅದ್ದೂರಿಯಾಗಿ ನಡೆಯಲಿದೆ.
ಮೊದಲ ದಿನ ರಾಜ್ಯದ ಮೂಲೆ ಮೂಲೆಗಳಿಂದ ಹಾಗು ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಇಲ್ಲಿ ಸೇರಿದ್ದು ಕಂಡುಬಂತು. ಹಿಂದೆಂದೂ ಈ ರೀತಿ ಚಂದ್ರಮ್ಮನ ಸನ್ನಿಧಿಯಲ್ಲಿ ಭಕ್ತಗಣ ಸೇರಿರಲಿಲ್ಲ.
ಕೋವಿಡ್ ಭೀತಿಯಿಂದ ಕಳೆದೆರಡು ವರ್ಷದಿಂದ ಸಾಂಪ್ರದಾಯಿಕ ಪೂಜೆಗೆ ಸಿಮೀತವಾಗಿದ್ದ ಚಂದ್ರಮ್ಮದೇವಿ ಜಾತ್ರೆಗೆ ಈ ಬಾರಿ ಭಾರೀ ಸಂಭ್ರಮದ ಕಳೆಗಟ್ಟಿದೆ. ಬೆಳಿಗ್ಗಿಂದು ಚಂದ್ರಮ್ಮದೇವಿ ಗದ್ದುಗೆಗೆ ವಿಶೇಷ ಹೂ,ಪುಷ್ಪ,ಬಳೆಗಳಿಂದ ಅಲಂಕರಿಸಲಾಗಿತ್ತು. ಹಸಿರುಡುಗೆಯಲ್ಲಿ ದೇವಿ ಕಂಗೊಳಿಸಿ ಭಕ್ತರ ದರ್ಶನಕ್ಕೆ ಲಭ್ಯವಾಗಿದ್ದಳು. ವಿಶೇಷ ಪೂಜೆ ಸೇರಿದಂತೆ ಧಾಮಿ೯ಕ ಕೈಂಕರ್ಯದ ಪೂಜಾ ವಿಧಿವಿಧಾನಗಳ ಕಾರ್ಯಗಳು ವಿಧಿವತ್ತಾಗಿ ನೆರವೇರಿದವು.


ಬೆಳಗು ಮುಂಜಾನೆಯಿಂದಲೇ ಕೃಷ್ಣಾನದಿ ನೀರಿನಲ್ಲಿ ಮಿಂದು ದೇವಿಯ ದರ್ಶನಕ್ಕೆ ಜನ ಮುಗಿಬಿದಿದ್ದರು.ಎರಡು ಮೂರು ಗಂಟೆಗಳ ಕಾಲ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಆರಾಧಿಸುತ್ತಿದ್ದರು. ಬಳಿಕ ಚಂದ್ರಮ್ಮತಾಯಿ ದರ್ಶನ ಕಣ್ಣಂಚಿನಲ್ಲಿ ತುಂಬಿಕೊಂಡು ಪುನೀತ್ ಭಾವದ ಧನ್ಯತೆ ಮೆರೆದರು. ದೇವಸ್ಥಾನದ ಸುತ್ತಲೂ ಹರಿಕೆ ಹೊತ್ತ ಭಕ್ತರು ಹೆಣ್ಣು ಗಂಡು ಲಿಂಗಭೇದ ಎನ್ನದೇ ಉರುಳು ಸೇವೆ ಸಮಪಿ೯ಸಿದರು. ಈ ದೃಶ್ಯ ವ್ಯಾಪಕ ಜನದಟ್ಟಣೆಯ ಪಾದಸ್ಪರ್ಶದ ಅಂಚಿನಲ್ಲೇ ಯಥ್ಥೇಚ್ಚವಾಗಿ ಸಾಗುತ್ತಿತ್ತು. ವಿಶಿಷ್ಟ ಭಕ್ತಿಸೇವೆಯಿಂದ ಜನ ಸಂತೃಪ್ತ ಭಾವ ತಾಳಿ ದೇವಿ ಧ್ಯಾನದಲ್ಲಿ ತೇಲಿದ್ದರು.


ವ್ಯಾಪಾರ ವಹಿವಾಟು ಖರೀದಿ ಜೋರು ! ಜಾತ್ರೆ ಪ್ರಯುಕ್ತ ಸಾಲುಸಾಲು ತೆರೆಯಲ್ಪಟ್ಟಿದ ವಿವಿಧ ಮಳಿಗೆಗಳಲ್ಲಿ ವಿವಿಧ ಸ್ತರದ ಸಾಮಗ್ರಿಗಳ ವ್ಯಾಪಾರ ವಹಿವಾಟು ಜೋರಾಗಿತ್ತು. ಸಿಹಿ ಪದಾರ್ಥಗಳ, ಗ್ರಹ ಬಳಿಕೆ ವಸ್ತುಗಳ ಮಳಿಗೆಗಳು, ತಿಂಡಿ ತಿನಿಸುಗಳ ಮಿಠಾಯಿ, ಹೋಟೆಲ್ ಗಳು,ಬ್ಯಾಗ್, ಬಳೆ ಫಲಪುಷ್ಪ, ಪೂಜಾ ಸಾಮಗ್ರಿ ಸೇರಿದಂತೆ ನೂರಾರು ಬಗೆಬಗೆ ಅಂಗಡಿಗಳು ತೆಲೆ ಎತ್ತಿವೆ. ಅವು ಜನತೆಯಿಂದ ತುಂಬಿತುಳುಕುತ್ತಿವೆ. ರೈತಾಪಿ ಜನತೆಯ ಅಗತ್ಯ ವಸ್ತುಗಳ ಹಾಗು ಲಂಬಾಣಿ ಸಮೂದಾಯದ ಉಡುಗೆ ತೋಡುಗೆಯ ಬಟ್ಡೆಗಳ ಖರೀದಿಯಲ್ಲಿ ಜನ ಹೆಚ್ಚಿದ್ದರು. ವಿವಿಧ ನಾಟಕ ಪ್ರದರ್ಶನ, ಆಟೋಟಗಳ ಮನರಂಜನಾ ಸ್ಪಾಟ್ ಗಳು, ಕಿವಿ ಕೊರೆಯುವ ಹಾಡುಗಳ ಸದ್ದುಗಳು ಜಾತ್ರೆಯಲ್ಲಿ ಮಾರ್ದನಿಸುತ್ತಿವೆ.‌
ಧಾಮಿ೯ಕ ಸಂದೇಶ ಸಾರುತ್ತಿರುವ ಚಂದ್ರಮ್ಮದೇವಿ ಹಲವಾರು ಮಹತ್ವದ ಪ್ರಸಿದ್ಧಿ ಹೊಂದಿದಾಳೆ. ಹೀಗಾಗಿ ಚಂದ್ರಮ್ಮ ತಾಯಿ ನಮ್ಮೆಲ್ಲರ ದುಃಖ ದುಮ್ಮಾನು ದೂರ ಮಾಡು,ಸಂತಸ,ನೆಮ್ಮದಿ ಕರುಣಿಸು, ಆರೋಗ್ಯಕರ ಜೀವನ ದಯಪಾಲಿಸು ಎಂದು ಪ್ರಾಥಿ೯ಸಿ ಜನ ಚಂದ್ರಮ್ಮನ ಕೃಪೆಗೆ ಪಾತ್ರರಾಗಿದ್ದಾರೆ. ದೇವಾಲಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ,ಭಜನೆಯಂಥ ಹತ್ತಾರು ಕಾರ್ಯಕ್ರಮ ನಡೆಯುತ್ತಿವೆ. ದೇವಾಲಯದ ಒಳಾವರಣ,ಹೊರಾವರಣದ ಸುತ್ತ ಅಲಂಕಾರ ತಳಿರು ತೋರಣಗಳಿಂದ, ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ.
ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಪೋಲಿಸರು ಸೂಕ್ತ ಬಂದೋಬಸ್ತ ಕೈಗೊಂಡಿದ್ದಾರೆ. ದೇವಸ್ಥಾನದ ಒಳಗೆ ಹೊರಗೆ ಕಣ್ಗಾವಲು ಈರಿಸಿದ್ದಾರೆ.
ಕೋವಿಡ್ ತಗ್ಗಿದ್ದರೂ ಸಹ ನಿರ್ಲಕ್ಷ್ಯ ಸಲ್ಲದು. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಭಕ್ತರು ಅಂತರ ಕಾಯ್ದುಕೊಂಡು ದೇವಿ ಅನುಗ್ರಹಕ್ಕೆ ಪಾತ್ರರಾಗಬೇಕು. ಕರೋನಾ ಕಾಟ ಅಂತ್ಯವಾಗಲಿ. ಸಮಾಜದಲ್ಲಿ ಸುಖ,ಶಾಂತಿ, ಸಮೃದ್ಧಿ ಲಭಿಸಲಿ ಎಂದು ಚಂದ್ರಮ್ಮದೇವಿಲ್ಲಿ ಆಶಿಸಿ ಪ್ರಾಥಿ೯ಸಿ ಒಳಿತನ್ನು ಬಯಸುತ್ತಿದ್ದಾರೆ ಭಕ್ತಸಮೂಹ.

Exit mobile version