ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಆದ್ಯತೆ ನೀಡಿ- ಗಜಾನನ ಮನ್ನಿಕೇರಿ


ನಿಡಗುಂದಿ: ಕೋವಿಡ್ ಲಾಕ್ ಡೌನ್ ನಂತರ ಭೌತಿಕ ತರಗತಿಯ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇನ್ನೂ ತಿಂಗಳ ಅಂತರದಲ್ಲಿ ನಡೆಯುತ್ತಿದ್ದು, ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ, ಶೈಕ್ಷಣಿಕ ನೋಡಲ್ ಅಧಿಕಾರಿ ಗಜಾನನ ಮನ್ನಿಕೇರಿ ಹೇಳಿದರು.


ನಿಡಗುಂದಿ ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದ ನಂತರ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡಿಸಬೇಕು, ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ವಸ್ತುವಾಗಿದ್ದ ಮೊಬೈಲ್ ನಿಂದ ವಿದ್ಯಾರ್ಥಿಗಳು ದೂರ ಇರುವಂತೆ, ಅವರನ್ನು ಸದಾ ಅಧ್ಯಯನ ದಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು ಎಂದರು. ಪಾಸಿಂಗ್ ಪ್ಯಾಕೇಜ್, ವಿಜ್ಞಾನದ ಪ್ರಯೋಗಗಳು , ನಕಾಶೆ ರಚನೆ, ವ್ಯಾಕಾರಣ, ಗಣಿತದಲ್ಲಿ ಪ್ರಮೇಯಗಳನ್ನು, ಮತ್ತೊಮ್ಮೆ ಮನನ ಮಾಡಿಸಬೇಕು. ಶಿಕ್ಷಕರು ಎಂದಿಗೂ ಕಲಿಯುವ ವಿದ್ಯಾರ್ಥಿ ಎಂದು ಅರಿತು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ :
ಪ್ರತಿ ಪಠ್ಯದ ಪಠ್ಯಕ್ರಮ ಪೂರ್ಣಗೊಂಡ ಬಗ್ಗೆ ಮಾಹಿತಿ ಪಡೆದು,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಗಜಾನನ ಮನ್ನಿಕೇರಿ, ಈ ಒಂದು ತಿಂಗಳ ಅವಧಿಯನ್ನು ತಪಸ್ಸಿನಂತೆ ನಿರ್ವಹಿಸಬೇಕು ಎಂದರು. ಮೊಬೈಲ್, ದೂರದರ್ಶನದಿಂದ ದೂರವಿದ್ದು, ಕಲಿಕೆಯ ಅಂಶಗಳ ಮನದಟ್ಟು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಜೀವನದಲ್ಲಿ ಈ ಘಟ್ಟ ಬಹುಮುಖ್ಯವಾಗಿದೆ, ಇದರ ಫಲಿತಾಂಶದ ಮೇಲೆಯೇ ನಿಮ್ಮ ಬಹುತೇಕ ಜೀವನ ನಿರ್ಧಾರವಾಗುತ್ತದೆ, ಬಾಳು ಬಂಗಾರ ಮಾಡಿಕೊಳ್ಳುವ ಸುಸಮಯ ಇದು ಎಂದರು.
ವಿಷಯವಾರು ಕಲಿಕೆಯಲ್ಲಿ ಹಿಂದುಳಿದವರ ಗುಂಪು ಮಾಡಿ ಅವರಿಗೆ ವಿಶೇಷ ಕಲಿಕೆಗೆ ಹೆಚ್ಚುವರಿ ಅವಧಿ ತೆಗೆದುಕೊಳ್ಳಲು ಶಿಕ್ಷಕರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ‌‌.ಟಿ. ಗೌಡರ, ಇಸಿಓ ವಿ.ಪಿ. ಜುಳಜುಳಿ, ಎಂ.ಎಂ. ದೊಡಮನಿ, ಪದ್ಮಾವತಿ ದಾಸರ, ಬಿ.ಎಚ್. ನಾಯಕ, ನಿಂಗಪ್ಪ, ವಿನಾಯಕ ಹೊಂಗಲ್ ಇದ್ದರು.

Exit mobile version