ಶಾಲೆಗಳಿಗೆ ತಹಶಿಲ್ದಾರ ಸತೀಶ್ ಕೂಡಲಗಿ ಭೇಟಿ- ಕಾನೂನು ಸುವ್ಯವಸ್ಥೆ ಪರಿಶೀಲನೆ ಖುಷಿಯಿಂದ ಶಾಲೆಗೆ ಮರಳಿದ ಮಕ್ಕಳು


ಚಿತ್ರ ವರದಿ : ಗುಲಾಬಚಂದ ಜಾಧವ
ಆಲಮಟ್ಟಿ :
ಹಿಜಾಬ್- ಕೇಸರಿ ಜಟಾಪಟಿ ವಿವಾದದಿಂದ ಆತಂಕ ಸೃಷ್ಟಿಯಾಗಿ ಕಳೆದ ನಾಲ್ಕು ದಿನಗಳಿಂದ ಬಿಕೋ ಎನ್ನುತ್ತಿದ್ದ ಜ್ಞಾನ ದೇಗುಲಗಳಲ್ಲಿ ಮತ್ತೆ ಈಗ ಮುಗ್ಧ ಮಕ್ಕಳ ಕಲರವ ಆರಂಭವಾಗಿದೆ.
ಸೋಮವಾರ ಎಂದಿನಂತೆ 9 ಹಾಗು 10 ನೇ ತರಗತಿ ಮಕ್ಕಳು ಖುಷಿಖುಷಿಯಾಗಿ ಸಂತಸದಿಂದ ಶಾಲೆಗೆ ಮರಳಿದ್ದಾರೆ. ತರಗತಿ ಪುನರಾರಂಭದಿಂದ ವರ್ಗ ಕೋಣೆ ಹಾಗು ಶಾಲಾವರಣದ ಕ್ಯಾಂಪಸ್ ದಲ್ಲಿ ಮಕ್ಕಳ ಕಲರವದ ಸದ್ದು ಗದ್ದಲವಿಲ್ಲದೆ ಕೇಳಿಬಂದಿತು.
ವಿದ್ಯಾರ್ಥಿಗಳೆಲ್ಲ ಸ್ಕೂಲ್ ಸಮವಸ್ತ್ರ ಧರಿಸಿ ಉತ್ಸಾಹದಿಂದ ಆಗಮಿಸಿದರು.

ಸೋಮವಾರ ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ನಿಡಗುಂದಿ ತಹಶೀಲ್ದಾರ್ ಸತೀಶ್ ಕೂಡಲಗಿ ಭೇಟಿ ನೀಡಿ ಕಾನೂನು, ಸುವ್ಯವಸ್ಥೆ ಪರಿಶೀಲಿಸಿದ ಸಂದರ್ಭದಲ್ಲಿ ಶಾಲೆ,ಸಂಸ್ಥೆ ಪರವಾಗಿ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಸತೀಶ್ ಕೂಡಲಗಿ ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.


ಹಿಜಾಬ್ ಮತ್ತು ಕೇಸರಿ ವಿವಾದ ತಾರಕಿಕ್ಕೇರಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪ್ರೌಢಶಾಲಾ ವಿದ್ಯಾಭ್ಯಾಸದ 9 ಹಾಗು 10 ನೇ ತರಗತಿಗಳು ಯಾವುದೇ ಸಮಸ್ಯೆಗಳಿಲ್ಲದೆ ಇಲ್ಲಿ ಯಥಾವತ್ತಾಗಿ ಪುನರಾರಂಭಗೊಂಡಿವೆ. ಮೊದಲ ದಿನ ಪಾಠ ಪ್ರವಚನಗಳು ಸುಗಮವಾಗಿ ಸಾಗಿವೆ.
ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶಕ್ಕೆ ಎಲ್ಲರೂ ತಲೆಬಾಗಿದ್ದಾರೆ. ಕಾನೂನಿನ ಪಾಲನೆ ವಿದ್ಯಾರ್ಥಿಗಳು ಹಾಗು ಪೋಷಕರು ಪಾಲಿಸಿ ಗೌರವಿಸಿದ್ದಾರೆ.


ತಾಲೂಕು ದಂಡಾಧಿಕಾರಿ ಭೇಟಿ : ಸೋಮವಾರ ಮುಂಜಾನೆ ಇಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ನಿಡಗುಂದಿ ತಾಲೂಕು ದಂಡಾಧಿಕಾರಿ ಸತೀಶ್ ಕೂಡಲಗಿ ಸೇರಿದಂತೆ ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾನೂನು, ಸುವ್ಯವಸ್ಥೆ ಪರಿಶೀಲಿಸಿದರು. ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಎಂ.ಎಚ್.ಎಂ.ಪ್ರೌಢಶಾಲೆ ಸೇರಿದಂತೆ ಹಲ ಶಾಲೆಗಳಿಗೆ ಅಧಿಕಾರಿಗಳು ತೆರಳಿ ಅಲ್ಲಿನ ವಾಸ್ತವಿಕ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ಏನಾದರೂ ತೊಂದರೆ, ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಮಕ್ಕಳನ್ನು ಹೊರತು ಪಡಿಸಿ ಶಾಲಾ ಸುತ್ತಲೂ ಅನ್ಯ ಜನತೆ ಗುಂಪು ಸೇರದಂತೆ ನಿಗಾ ವಹಿಸಲಾಗಿತ್ತು. ಅವರಣದ ಸುತ್ತ ಮುತ್ತ 200 ಮೀಟರ ವ್ಯಾಪ್ತಿಯಲ್ಲಿ ನಿಷೇಧವನ್ನು ಹೇರಲಾಗಿತ್ತು.
ಶಾಂತ ರೀತಿಯಲ್ಲಿನ ವಾತಾವರಣ ಕಂಡು ನಿಟ್ಟುಸಿರು ಬಿಟ್ಟರು ಅಧಿಕಾರಿಗಳು.
ತಹಶೀಲ್ದಾರ್ ಸತೀಶ್ ಕೂಡಲಗಿ ಮಾತನಾಡಿ, ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮಾಜದ ಶಾಂತಿ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಡಗುಂದಿಯಲ್ಲಿ ಧಾಮಿ೯ಕ ಮುಖಂಡರ, ಸಂಘ, ಸಂಸ್ಥೆ, ಸಂಘಟನೆ ಮುಖ್ಯಸ್ಥರ ಜೊತೆ ಸಮಾಲೋಚಿಸಿ ಶಾಂತಿ ಪಾಲನಾ ಸಭೆ ಈಗಾಗಲೇ ನಡೆಸಲಾಗಿದೆ. ಯಾರು ಇಂಥ ಸೂಕ್ಷ್ಮ ವಿಚಾರದ ಪರಸ್ಥಿತಿಯಲ್ಲಿ ಸುಖಾ ಸುಮ್ಮನೆ ಕಿರಿಕ್ ಹಚ್ಚಲು ಪ್ರಯತ್ನಿಸಬಾರದು. ಸದ್ಯ ಪರೀಕ್ಷಾ ಪರ್ವಕಾಲ ಸನಿಹವಾಗುತ್ತಲ್ಲಿದೆ. ಮಕ್ಕಳ ಭವಿಷ್ಯ ಹುದುಗಿದೆ. ಅವರ ಅಧ್ಯಯನಕ್ಕೆ ತೊಂದರೆ ತಾಪತ್ರಯ ಯಾರು ಮಾಡಕೂಡದು ಎಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸತೀಶ್ ಕೂಡಲಗಿ ಅವರಿಗೆ ಶಾಲೆ,ಸಂಸ್ಥೆ ಪರವಾಗಿ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಶಾಲು ಹೊದಿಸಿ ಸತ್ಕರಿಸಿದರು.ಅಲ್ಲದೇ ಶೇ 75 ರಷ್ಟು ಮಕ್ಕಳು ಶಾಲೆಗಿಂದು ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಉಪ ತಹಶಿಲ್ದಾರ ಕೆ.ವೈ.ಹೊಸಮನಿ, ಸಿಆರ್ ಸಿ.ರಾಘವೇಂದ್ರ ವಂದಗನೂರ,ಎಸ್.ಎಚ್.ನಾಗಣಿ,ಎಲ್.ಆರ್.ಸಿಂಧೆ, ಶಾಂತೂ ತಡಸಿ ಇತರರಿದ್ದರು.

Exit mobile version