ಶಿರಹಟ್ಟಿ:
ಹಿಂದೂ ಮುಸ್ಲಿಮ್ ಭಾವೈಕ್ಯತೆಗೆ ಹಾಗೂ ಕೋಮು ಸೌಹಾರ್ದತೆಗೆ ಹೆಸರಾಗಿರುವ ಶಿರಹಟ್ಟಿ ಪಕೀರೇಶ್ವರ ಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ನೇಮಕವಾಗಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗ ಹೊಂಬಾಳಿ ಮಠ ಹೇಳಿದ್ದಾರೆ.
ಶಿರಹಟ್ಟಿ ಪಕಿರೇಶ್ವರ ಮಠಕ್ಕೆ ಗತವೈಭವವನ್ನು ಸಾರುವುದರ ಮೂಲಕ ದೇಶದಲ್ಲಿಯೇ ಹಿಂದೂ ಮುಸ್ಲಿಂ ಸಂಪ್ರದಾಯವನ್ನು ಶತ ಶತಮಾನಗಳಿಂದ ಅಳವಡಿಸಿಕೊಂಡು ಇಂದಿಗೂ ಸಹ ಮಠದ ಪ್ರತಿಯೊಂದು ಆಚರಣೆಯೂ ದಿನ ನಿತ್ಯ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಶಿರಹಟ್ಟಿ ಪಕೀರೇಶ್ವರ ಮಠಕ್ಕೆ ಬಾಳೆಹೊಸೂರಿನ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದು ನಾಡಿನ ಜನರಿಗೆ ಹರ್ಷ ತಂದಿದೆ.

ಬಾಳೆ ಹೊಸೂರಿನ ಗ್ರಾಮದ ಪ್ರತಿಯೊಂದು ಮನೆಗೆ ದಿಂಗಾಲೇಶ್ವರ ಸ್ವಾಮಿಗಳು ಭೇಟಿ ನೀಡಿ ಸ್ವಚ್ಚತೆ, ನೈರ್ಮಲ್ಯ, ಶೌಚಾಲಯದ ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸಿ, ಸ್ವಾಮೀಜಿಗಳು ಜನರ ದುಶ್ಚಟ್ಟಗಳನ್ನು ಜೋಳಿಗೆಗೆ ಹಾಕಿಸುವ ಮೂಲಕ ಸಮಾಜದ ಸುಧಾರಣೆಗೆ ದಿಂಗಾಲೇಶ್ವರ ಸ್ವಾಮೀಜಿಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು ಎಂದು ಸಿದ್ದಲಿಂಗಯ್ಯ ಹೊಂಬಾಳಿ ಮಠ ಹೇಳಿದ್ದಾರೆ.