ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ..!

ಉತ್ತರಪ್ರಭ ಸುದ್ದಿ

ಕೊಪ್ಪಳ: ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ಅವರಿಗೆ ಕೇವಲ ಏಳು ತಿಂಗಳುಗಳಷ್ಟೇ ತರಗತಿಗಳು ನಡೆದಿವೆ. ಒಂದೆಡೆ ಸಂಪೂರ್ಣವಾಗಿ ತರಗತಿಗಳು ನಡೆಯದ ಕಾರಣ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಅವಶ್ಯಕ ಕ್ಲಿನಿಕಲ್ ಪೋಸ್ಟಿಂಗ್ ನಡೆದಿಲ್ಲ. ಅಲ್ಲದೇ ಈ ವಿದ್ಯಾರ್ಥಿಗಳು ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಓಮೈಕ್ರಾನ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ.

ಆದರೆ ಇದ್ಯಾವುದನ್ನು ಪರಿಗಣಿಸದ RGUHS ಇದೇ ಫೆಬ್ರವರಿ 22 ರಿಂದ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿರುವುದು ಅತ್ಯಂತ ಅಮಾನವೀಯ. ಇದು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ತೀವ್ರವಾದ ಒತ್ತಡಕ್ಕೊಳಗಾಗಿ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಹಾಗಾಗಿ AIDSO ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯದಾದ್ಯಂತ ಮೆಡಿಕಲ್ ವಿದ್ಯಾರ್ಥಿಗಳ ನಡುವೆ ಗೂಗಲ್ ಫಾರ್ಮ್ ಮೂಲಕ ಸರ್ವೆ ಮಾಡಲಾಗಿದೆ. ಸರ್ವೇ ಯಲ್ಲಿ 4500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಪ್ರಕಾರ ಶೇಕಡಾ 95ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಂದೂಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಆರೋಗ್ಯ ವ್ಯವಸ್ಥೆಗೆ ಬೆನ್ನೆಲುಬಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಕಾಳಜಿಯೊಂದಿಗೆ RGUHS ಅಂತಿಮ ವರ್ಷದ ಪರೀಕ್ಷೆಗೆ ಅಚ್ಚುಕಟ್ಟಾಗಿ ತಯಾರಾಗಲು ಅಗತ್ಯವಿರುವಷ್ಟು ಕಾಲಾವಕಾಶ ಒದಗಿಸಿ, ನಂತರದಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿಪಡಿಸಬೇಕೆಂದು AIDSO ಈ ಮೂಲಕ ಆಗ್ರಹಿಸುತ್ತದೆ.

Exit mobile version