ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಸಭೆ ನಿರ್ಭಯದಿಂದ ಕಾರ್ಯ ನಿರ್ವಹಿಸಿ: ವೈದ್ಯರಿಗೆ ಶಾಸಕ ರಾಮಣ್ಣ ಅಭಯ

ಉತ್ತರಪ್ರಭ ಸುದ್ದಿ
ಶಿರಹಟ್ಟಿ
: ಪ್ರಸ್ತುತ ಕೊರೊನಾ ಸಮಯದಲ್ಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ನಿರ್ಭಯ ಹಾಗೂ ಪ್ರಾಮಾಣಿಕವಾಗಿ ತಮ್ಮ ಕಾರ್ಯ ನಿರ್ವಹಿಸಬೇಕು. ನಿಮ್ಮ ಹಿಂದೆ‌ ಸದಾ ಬೆಂಗಾವಾಲಾಗಿ‌ ಸರ್ಕಾರ ಇದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಸ್ಥಳೀಯ ತಾಲೂಕಾ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಗೆ ಕೆಲ ಕಿಡಿಗೇಡಿಗಳು ಪದೇ ಪದೇ ಕುಡಿದು ಬಂದು ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಹೀಗೆ ಮಾಡುವವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಿ ಎಂದು ವೈದ್ಯರಿಗೆ ಸೂಚಿದರು.

ಕೊರೋನಾದಿಂದ ಜಗತ್ತು ತಲ್ಲಣ ಗೊಂಡಿದ್ದು, ಇಂತಹ ಸಮಯದಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಿಡಿಗೇಡಿಗಳು ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದರೇ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಕೊರೋನಾ 3ನೇ ಅಲೆ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಜನರು ಅವಶ್ಯಕತೆ ಇದ್ದರೇ ಮಾತ್ರ ಹೊರಗೆ ಬನ್ನಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಜ್ ನೀಡುತ್ತಿದ್ದು, ಹಿರಿಯ ನಾಗರಿಕರು ಲಸಿಕಾ ಮೇಳದಲ್ಲಿ ಪಾಲ್ಗೊಂಡು ಲಸಿಕೆ ಪಡೆದುಕೊಲ್ಳುವುದರ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂದು ವೈದ್ಯಾಧಿಕಾರಿ ವೆಂಕಟೇಶ ರಾಠೋಡ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತವರ, ಫಕ್ಕೀರೇಶ ರಟ್ಟಿಹಳ್ಳಿ, ಸಿ.ಕೆ. ಮುಳಗುಂದ, ಫಕ್ಕೀರೇಶ ಕರಿಗಾರ, ಯಲ್ಲಪ್ಪ ಇಂಗಳಗಿ, ಈರಣ್ಣ ಕೋಟಿ, ಪರಶುರಾಮ ಡೊಂಕಬಳ್ಳಿ, ರಾಮಣ್ಣ ಕಂಬಳಿ, ಶ್ರೀನಿವಾಸ ಬಾರಬಾರ, ನಟರಾಜ ರಾನಡೆ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Exit mobile version