ವಿಧಾನ ಸಭೆಯಲ್ಲಿ ಚರ್ಚಿಸಬೇಕಿದ್ದ ನೈತಿಕತೆ, ಚರ್ಚೆ ಆಗಲೇ ಇಲ್ಲ

ಮಾನವ ತನ್ನ ಜೀವನದಲ್ಲಿ ಕೆಲವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮೌಲ್ಯ ಇಲ್ಲದ ಜೀವನ, ಜೀವನವೇ ಅಲ್ಲ. ನಂಬಿಕೆ. ವಿಶ್ವಾಸ,ತತ್ವ,ಸಿದ್ಧಾಂತ’ ನೈತಿಕತೆ, ಇವು ಮಾನವೀಯ ಮೌಲ್ಯಗಳು. ಇವುಗಳಲ್ಲಿ ಶ್ರೇಷ್ಠವಾದದ್ದು ನೈತಿಕತೆ.
ನೈತಿಕತೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇ ಆದ ರೀತಿಯಲ್ಲಿ ತೋರುತ್ತದೆ, “ಜನರಿಗೆ ಬದುಕುವ ಅತ್ಯುತ್ತಮ ಮಾರ್ಗ ಯಾವುದು ಎಂದು ತಿಳಿಸುತ್ತದೆ. ಇದು ಮಾನವ ನಡವಳಿಕೆಯೊಂದಿಗೆ ಇರಬೇಕಾದ ವಿಷಯಗಳಾದ ದಯೆ, ಸಹಾನುಭೂತಿ, ಪ್ರಾಮಾಣಿಕತೆ. ವಿಶ್ವಾಸಾರ್ಹತೆ, ಶ್ರಮ,ಶಾಂತಿ, ಪ್ರೀತಿ. ಈ ಎಲ್ಲ ಮಾನವ ಕ್ರಿಯೆಗಳನ್ನು ಮೌಲ್ಯಮಾಪನ ಮಾಡುವ ಒಂದು ಮಾರ್ಗವಾಗಿದೆ. ನೈತಿಕತೆಯ ಅಧ್ಯಯನದ ವಸ್ತುವು ಒಬ್ಬ ವ್ಯಕ್ತಿ, ಅವನ ನಡವಳಿಕೆ ಮತ್ತು ಸಂಬoಧಗಳಿಗೆ ಸಂಬoಧಿಸಿದೆ.
ನೈತಿಕತೆಯ ವಿಷಯ, ಉತ್ತಮ ನಡವಳಿಕೆ ಯಾವುದು, ಯಾವುದು ಸರಿ ಅಥವಾ ತಪ್ಪು ಎಂಬ ವ್ಯಾಖ್ಯಾನವಾಗಿದೆ. ಹೀಗೆ ಇದ್ದರೆ ಮಾತ್ರಸರಿ, ಹೀಗೆಯೇ ಇರಬೇಕು, ಎಂಬ ಚೌಕಟ್ಟೆ ನೈತಿಕತೆ. ಆದರೆ ಈಗ ಈ ವಿಷಯ ಇಲ್ಲಿ ಏಕೆ ಪ್ರಸ್ತಾಪಿಸಲಾಯಿತು ಎಂದರೆ, ಇತ್ತೀಚೆಗೆ ಕರ್ನಾಟಕದ ವಿಧಾನ ಸಭೆಯಲ್ಲಿ ಒಂದು ಕಾವೇರಿದ ಚರ್ಚೆ ನಡೆಯಿತು.ಆದರೆ ಎಲ್ಲರು ಅದನ್ನು ಸಾಮಾನ್ಯ ವಿಷಯವಾಗಿ ತೆಗೆದುಕೊಂಡು ಮರೆತೇ ಬಿಟ್ಟರು. ಆದರೆ ಆ ಚರ್ಚಾ ವಿಷಯದ ಆಳವನ್ನು ಯಾರೂ ಗಮನಿಸಲಿಲ್ಲಿ. ಉದ್ದೇಶ ಪೂರ್ವಕವಾಗಿಯಾ ಅಥವಾ ಅದನ್ನು ಅರ್ಧ ಮಾಡಿಕೊಳ್ಳಲಾಗದೆಯಾ ಅದನ್ನು ನಿರ್ಲಕ್ಷದರು. ಅದು ನಿರ್ಲಕ್ಷಿಸುವ ಮಾತಲ್ಲ, ವಿಧಾನ ಸಭೆಗೆ ಹೊಸ ಭಾಷ್ಯ ಬರೆಯುವ ಮಾತಾಗಿತ್ತು. ಅದನ್ನು ಕುರಿತೆ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆ ಆಗಲೇ ಇಲ್ಲ. ಆ ಮಾತು ಸಚಿವ ಮಾಧುಸ್ವಾಮಿಗಳಾಡಿದ ಮಾತು.
ನೈತಿಕತೆ ಇದ್ದರೆ, ಪುಟ್ಟರಂಗಶೆಟ್ಟಿಯವರು ಇಲ್ಲಿ ಬರುವ ಅವಶ್ಯಕತೆ ಇರಲಿಲ್ಲ. ಇಲ್ಲಿ ಎಂದರೆ ವಿಧಾನ ಸಭೆಗೆ ಎಂದು ಅರ್ಥ. ಈ ಮಾತಿನ ಅರ್ಥ ನಿಲುಕಲಾರದಾಗಿದೆ. ಚರ್ಚಿಸಿದಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ಈ ಮಾತಿನ ಅರ್ಥದ ಕುರಿತೆ ಸುದೀರ್ಘ ಚರ್ಚೆಯಾಗಬೇಕಿತ್ತು. ವಿಧಾನಸಭೆಯಲ್ಲಿ ಮಾಧುಸ್ವಾಮಿಗಳು ಆಡಿದ ಆ ಮಾತಿನ ಒಳಾರ್ಥವನ್ನು ಗಮನಿಸಬೇಕಿತ್ತು. ವಿಧಾನಸಭೆಯಲ್ಲಿ ಈ ನುಡಿಗಳು ಬರಲು ಕಾರಣವೇನು? ಸಭೆಯಲ್ಲಿ ಇಂದು ನೈತಿಕತೆ ಇಲ್ಲವಾ? ಸದಸ್ಯರಲ್ಲಿ ನೈತಿಕತೆ ಇಲ್ಲವಾ? ಹಿಂದೆ ಹೇಗೆ ಇತ್ತು? ಈಗ ಹೇಗಿದೆ ? ಎಂಬ ವಿಷಯಗಳ ಕುರಿತು ಚರ್ಚೆಯಾಗ ಬೇಕಿತ್ತು. ಆದರೆ ಚರ್ಚೆಯಾಗಬೇಕೆದ್ದ ಆ ವಿಷಯ ಅಲ್ಲಿಯೇ ಕೊನೆಯಾಯಿತು.

ಅಂದೊoದಿತ್ತು ಕಾಲ :
ಹಿಂದೆ ವಿಧಾನಸಭೆ ನಡೆದರೆ, ಅದು ಕಲ್ಯಾಣ ಮಂಟಪದ ಚರ್ಚೆಯಂತಿರುತ್ತಿತ್ತು. ವಿಷಯದ ಆಳ ಅಗಲ ವಿಸ್ತಾರಗಳ ಚರ್ಚೆಯಾಗುತ್ತಿತ್ತು. ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವ, ಬಿ ಎಲ್ ಶಂಕರ, ರಮೇಶ ಕುಮಾರ, ಸಿದ್ದರಾಮಯ್ಯ, ಬೊಮ್ಮಾಯಿ, ಮೊಯ್ಲಿ,ಬಂಗಾರಪ್ಪ, ಶಂಕರ ಮೂರ್ತಿ,ದತ್ತ’ ಜ್ಞಾನ ದೇವ ದೊಡ್ಡಮೇಟಿ, ನಜೀರ ಅಹಮ್ಮದ, ಬೈರೆಗೌಡ, ನಾಣಯ್ಯ,ಸಿಂಧಿಯಾ, ರಾಯರೆಡ್ಡಿ, ಮುಂತಾದ ಸದನ ಪಾಂಡಿತ್ಯ ಹೊಂದಿದ್ದ ನಾಯಕರೆಲ್ಲ ಸದನದಲ್ಲಿ ವಿಷಯಾಧಾರಿತ, ಸ್ವಾರಸ್ಯಕರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದರು. ಸಾಮಾಜಿಕ ಒಳತಿನ ಚರ್ಚೆಯಲ್ಲಿ ಅಂತೂ ಸಮಗ್ರವಾಗಿ ಚರ್ಚಿಸುತ್ತಿದ್ದರು. ಆಗ ನಾಯಕರಲ್ಲಿ ಪರಸ್ಪರ ವಿರೋಧ ಇದ್ದರೂ ಕೂಡಾ ಅದು ವಿಷಯಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ರಾಜಕೀಯ ವಾಗುತ್ತಿರಲ್ಲ. ಆದರೆ ಈಗ ಪ್ರತಿಯೊಂದು ವಿಷಯಗಳು ರಾಜಕೀಯವಾಗಿದೆ. ಈ ರಾಜಕೀಯದಿಂದಾಗಿ ಸದನವು ತನ್ನ ನೈತಿಕತೆ ಉಳಿಸಿಕೊಂಡಿಲ್ಲ ಅನಿಸುತ್ತಿದೆ.

ನೈತಿಕತೆ ಇಲ್ಲವೆ? :
ಮಾಧುಸ್ವಾಮಿಗಳ ಆ ಮಾತಿನ ಹಿನ್ನೆಲೆ ಗಮನಿಸಿದಾಗ ಬಹಳ ಆಳವಾಗಿ ಸಭೆಯನ್ನು ಅರ್ಥ ಮಾಡಿಕೊಂಡೆ ಈ ಮಾತು ಹೇಳಿದಹಾಗಿದೆ. ಈ ಚರ್ಚೆ ಮುನ್ನಲೆಗೆ ಬರಲು ಕಾರಣವೇನೆಂದರೆ,
ಶಾಸಕ ಪುಟ್ಟರಂಗಶೆಟ್ಟಿಯವರು ‘ಸಚಿವರೊಬ್ಬರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದರು. ಆ ಪ್ರಶ್ನೆಗೆ ಉತ್ತರಿಸುವ ಸಮಯ ಬಂದಾಗ ಪುಟ್ಟರಂಗಶೆಟ್ಟಿಯವರು ನೈತಿಕತೆ ಇಲ್ಲದ ಆ ಸಚಿವರಿಂದ ಉತ್ತರ ಪಡೆಯಲಾರೆ ಎಂದು ಸದನದಲ್ಲಿ ಹೇಳಿದರು. ಇದಕ್ಕೆ ಗೋವಿಂದ ಕಾರಜೋಳ ವಿರೋಧ ವ್ಯಕ್ತಪಡಿಸಿ ಉತ್ತರ ಕೇಳುವ ಹಾಗಿದ್ದರೆ ಕೇಳಿ ಇಲ್ಲದೆ ಇದ್ದರೆ ಬಿಡಿ. ಆದರೆ ನೈತಿಕತೆ ಇಲ್ಲ ಎ0ದು ಹೇಳಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸದನದ ನಿಯಮ ಮತ್ತು ಸಂಪ್ರದಾಯ ಪ್ರಕಾರ ಪ್ರಶ್ನೆ ಕೇಳಿದಾಗ ಉತ್ತರಿಸುವದು ಸರಿಯಾದ ಕ್ರಮ. ಆದರೆ ತಮಗೆ ಉತ್ತರ ಕೇಳುವುದಾದರೆ ಕೇಳಿ ಇಲ್ಲವೆ ಬಿಡಿ ಎಂದು ಕಾಗೇರಿ ಉತ್ತರಿಸಿದರು. ಆಗ ಪರ ವಿರೋಧ ವ್ಯಕ್ತವಾಗಿ ಗದ್ದಲ ಉಂಟಾಗಿತ್ತು. ಇದೇ ಸಮಯಕ್ಕೆ ಎದ್ದು ನಿಂತು ಗದ್ದಲದಲ್ಲಿಯೇ ಗಟ್ಟಿದ್ದನಿಯಲ್ಲಿ “ಪುಟ್ಟರಂಗಶೆಟ್ಟಿಯವರು ನೈತಿಕತೆ ಇದ್ದರೆ ಇಲ್ಲಿ ಬರುವ ಅವಶ್ಯಕತೆಯೇ ಇಲ್ಲ” ಎoದು ಕಠೋರ ಸತ್ಯದಂತಿರುವ ಈ ನುಡಿ ಕೇಳಿದರು, ಯಾವ ಸದಸ್ಯರೂ ಕೂಡಾ ಮಾತನಾಡದಾದರು. ಸದನ ನಿಶಬ್ದವಾಯಿತು. ಈ ಮಾತಿನ ಅರ್ಥ ಇನ್ನೂ ಎಲ್ಲರಿಗು ಅರ್ಥವಾಗಲೇ ಇಲ್ಲ. ಆಗ ಇದರ ಮಹತ್ವ ಅರಿತ ಕಾಗೇರಿ ಆ ಚರ್ಚೆಗೆ ಅವಕಾಶ ನೀಡದೆ ಪೂರ್ಣವಿರಾಮ ನೀಡಿದರು. ಆದರೂ ಕೂಡಾ ನೈತಿಕತೆ ಪ್ರಶ್ನೆ ಹಾಗೆ ಉಳಿಯಿತು ಮತ್ತು ಪ್ರಶ್ನೆ ಪ್ರಶ್ನೆ ಆಗಿಯೇ ಉಳಿಯಿತು.

ನೈತಿಕತೆ ಪ್ರಶ್ನೆಗೆ ಹಿನ್ನೆಲೆ:
ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದ ಬೆನ್ನಲ್ಲೇ,ಆರು ಮಂದಿ ಸಚಿವರಿಗೆ ನ್ಯಾಯಾಲಯ ಮಾನ ರಕ್ಷಣೆಯನ್ನು ನೀಡಿದೆ.ಶಿವರಾಮ್ ಹೆಬ್ಟಾರ್, ಡಾ| ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು, ಬಿ.ಸಿ. ಪಾಟೀಲ್ ಮತ್ತು ನಾರಾಯಣ ಗೌಡ ಅವರು ಸಲ್ಲಿಸಿದ್ದ ಅರ್ಜಿ ಬಗ್ಗೆ ನಗರದ 26ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಈ ಎಲ್ಲ ಸಚಿವರ ವಿರುದ್ಧ, ದೃಢಪಡಿಸದ ಸುದ್ದಿಗಳು, ಮಾನಹಾನಿಕಾರಕ ವಿಷಯಗಳನ್ನು ಪ್ರಕಟಿಸದಂತೆ ಹಾಗೂ ಸಿ.ಡಿ. ಬಿಡುಗಡೆ ಮಾಡದಂತೆ ಎಲ್ಲ ಮಾಧ್ಯಮಗಳಿಗೆ ತಾತ್ಕಾಲಿಕ ತಡೆ ನೀಡಿದ್ದರು.
ಈ ಸಚಿವರಲ್ಲಿ ಒಬ್ಬರರಿಗೆ ನ್ಯಾಯಾಲಯಕ್ಕೆ ಹೋಗುವ ಮೊದಲು ಶಾಸಕ ಪುಟ್ಟರಂಗಶೆಟ್ಟಿಯವರು ಪ್ರಶ್ನೆ ಕೇಳಿದ್ದರು. ಆದರೆ ಆ ಸಚಿವರು ಉತ್ತರ ನೀಡುವಾಗ ಇಂತಹ ರಾಸಲೀಲೆ ಸಿಡಿ ಹೊರಬರಬಹುದು ಎಂಬ ಕಾರಣಕ್ಕೆ ನ್ಯಾಯಾಲಯಕ್ಕೆ ಹೊದ ಸಚಿವರಿಗೆ ನೈತಿಕತೆ ಇಲ್ಲ ಇವರಿಂದ ಉತ್ತರ ಪಡೆಯಲಾರೆ ಎಂದು ಪುಟ್ಟರಂಶೆಟ್ಟಿಯವರು ಉತ್ತರ ಬಯಸಲಿಲ್ಲಿ. ಈ ವಿಷಯ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆಯಿತು. ಆಗ ‘ ಈ ನೈತಿಕತೆ ವಿಷಯ ಬಂದಿತು. ಅಂದಹಾಗೆ ನೈತಿಕತೆ ಅಂದರೇನು ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕೆ ಉತ್ತರ ಸಿಗಲೇ ಇಲ್ಲ.

ಚರ್ಚೆಯಾಗಲೇ ಇಲ್ಲ:
ಮಾಧುಸ್ವಾಮಿಗಳ ” ನೈತಿಕತೆ ಇದ್ದರೆ ಇಲ್ಲಿ ಬರುವ ಅವಶ್ಯಕತೆ ಇಲ್ಲ” ಎನ್ನುವ ಈ ಹೇಳಿಕೆ ರಾಜಕಾರಣದಲ್ಲಿ ‘ರಾಜಕೀಯ ತಜ್ಞರಲ್ಲಿ ವೈಚಾರಿಕ ಜಗತ್ತಿನಲ್ಲಿ ಸಂಚಲನ ಮೂಡಿಸಿರುವದಂತೂ ಸತ್ಯ. ರಾಜಕಾರಣದಲ್ಲಿ ನೈತಿಕತೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಮಾಧುಸ್ವಾಮಿಗಳು ಹೇಳಿದ ಹಾಗಿದೆ. ಅಥವಾ ಇತ್ತೀಚೆಗೆ ರಾಜಕಾರಣದಲ್ಲಿ ನೈತಿಕತೆ ಇಲ್ಲ, ಅಥವಾ ರಾಜಕಾರಣಿಗಳಲ್ಲಿ ನೈತಿಕತೆ ಇಲ್ಲ, ಅಥವಾ ವಿಧಾನ ಸಭೆಯಲ್ಲಿ ನೈತಿಕತೆ ಇಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ. ಆದರೂ ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿದಾಗ ಸದನದ ಬಗೆಗಿನ ಗೌರವ ಕೆಲವು ಸದಸ್ಯರಲ್ಲಿ ಕಡಿಮೆ ಆಗಿರುವುದಂತೂ ಸತ್ಯ. ಸದನದ ಭಾವಿಯಲ್ಲಿ ಬಟ್ಟೆ ಕಳಚಿರುವದು, ಮೇಜಿನ ಮೇಲೆ ನಿಂತು ಶರ್ಟ ಬಿಚ್ಚಿ ತೂರಾಡುವದು, ಅಶ್ಲೀಲ ದೃಷ್ಯ ವೀಕ್ಷಣೆ, ಮಾಂಸ ಮತ್ತು ಮಧ್ಯ ಸೇವನೆಯಂತಹ ಕೆಲವು ಪ್ರಸಂಗಗಳಿoದ ವಿಧಾನಸಭೆ ತನ್ನ ಮಡಿವಂತಿಕೆ ಕಳೆದುಕೊಂಡoತಿದೆ.
ಪ್ರಜೆಗಳ ಒಳಿಕೆಗಾಗಿ ಪ್ರಜೆಗಳ ಕಲ್ಯಾಣಕ್ಕಾಗಿ ವಿವರವಾಗಿ ಚರ್ಚಿಸಬೇಕಿದ್ದ ವಿಧಾನ ಸಭೆ, ರಾಜಕಾರಣವನ್ನೆ ಮಾಡುತ್ತ ಜನರ ಆಶೋತ್ತರಗಳ ಬಗ್ಗೆ ಚರ್ಚೆ ಇಲ್ಲದೆ ಕೇವಲ ಸರಕಾರದ ಆಸೆಯಂತೆ ಅಂಗೀಕಾರವಾಗುತ್ತಿವೆ. ಇದಕ್ಕೆ ಇತ್ತೀಚಿನ ರಾಜ್ಯ ಬಜೆಟ್ ಒಂದು ಪ್ರಮುಖ ಸಾಕ್ಷಿ. ಇಂತಹ ಹಲವಾರು ಘಟನೆಗಳು ಚರ್ಚೆ ಇಲ್ಲದೆ ಅಂಗೀಕಾರ ಆಗಿರುವದು ನಮ್ಮ ಕಣ್ಣ ಮುಂದೇಯೇ ಇದೆ.

ಈ ಎಲ್ಲ ಘಟನೆಗಳನ್ನು ನೋಡಿಯೇ ಮಾಧುಸ್ವಾಮಿಗಳು “ಈ ನೈತಿಕತೆ” ಹೇಳಿಕೆ ನೀಡಿರಬಹುದೇನೋ ಅನಿಸುತ್ತಿದೆ.
ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಜನರ ಕಲ್ಯಾಣಕ್ಕಾಗಿ ಸದಸ್ಯರು ಸುದೀರ್ಘ ಚರ್ಚೆ ನಡೆಸಲಿ ಎಂಬ ಉದ್ದೇಶದಿಂದ ನೆಮಿಸಿದ ವಿಧಾನಸಭೆಯಲ್ಲಿ ನೈತಿಕತೆ ಚರ್ಚೆಯಾಗಲೇ ಇಲ್ಲ. ವಿಧಾನ ಸಭೆಯಲ್ಲಿ ಆಕಸ್ಮಿಕವಾಗಿ ಬಂದ ಈ ನೈತಿಕತೆ ವಿಷಯ ಕುರಿತು ಚರ್ಚಿಸಬೇಕಿತ್ತು. ಆದರೆ ಚರ್ಚೆ ಆಗಲೇ ಇಲ್ಲ. ಚರ್ಚಿಸದೆ ಈ ವಿಷಯ ಅಲ್ಲಿಯೇ ಮೊಟಕುಗೊಳಿಸಿ ಮಾಧುಸ್ವಾಮಿಗಳ ಹೇಳಿಕೆಯನ್ನು ಒಪ್ಪಿಕೊಂಡರಾ ಎಂದೆನಿಸುತ್ತದೆ.
ಅಲ್ಲವಾ?

ಬಸವರಾಜ ಪಲ್ಲೇದ, ಉಪನ್ಯಾಸಕರು
Exit mobile version