ಹಾರಯಿಕೆಯ ಕವಿ ಮತ್ತು ಸಾಹಿತಿ : ಪ್ರೊ.ವಸಂತ ಕುಷ್ಟಗಿಯವರು..!

ಪ್ರೊ.ವಸಂತ ಕುಷ್ಟಗಿಯವರು ತೀರಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿಯುತ್ತ ಈ ನೆನಪು ಮಾಡಿಕೊಳ್ಳೋಣ. ಸದ್ಯ ಕಲಬುರ್ಗಿ ನಿವಾಸಿಯಾಗಿದ್ದ ಕವಿ ಮತ್ತು ಸಾಹಿತಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕರಾಗಿದ್ದರು.
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಅವರು ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದವರು. ನಂತರ ಕಲಬುರ್ಗಿಯ ಎಂ.ಎಸ್.ಐ ಹಾಗೂ ಎನ್.ವಿ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಿವೃತ್ತಿ ನಂತರ ಸ್ವಾಮಿ.ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದರು.
ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಾಹಿತಿ ಸತೀಶ ಕುಲಕರ್ಣಿಯವರ ಹಿರಿತನದ ವಾರಂಬಳ್ಳಿ ಪ್ರಶಸ್ತಿ, ರತ್ನಾಕರ ವರ್ಣಿ ಮುದ್ದಣ ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿವೆ.
ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ ಕಲಬುರ್ಗಿಯ ಸಾಹಿತ್ಯ ಪ್ರಿಯರಿಗೆ ಸಾಹಿತ್ಯಿಕ, ಶೈಕ್ಷಣಿಕ ವಿಷಯಗಳನ್ನು ತಮ್ಮ ಚಟುವಟಿಕೆಗಳ ಮುಖಾಂತರ ಪರಿಚಿತರಾಗಿರುವ ವಸಂತ ಕುಷ್ಟಗಿಯವರು ಹುಟ್ಟಿದ್ದು, ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ. (ಬಾಗಲಕೋಟೆ ಜಿಲ್ಲೆ) 1936 ರ ಅಕ್ಟೋಬರ್ 10 ರಂದು ವಸಂತ ಕುಸ್ಟಗಿ ಜನಿಸಿದರು.
ತಂದೆ ರಾಘವೇಂದ್ರ ಕುಷ್ಟಗಿಯವರು ನಿಜಾಂ ಆಡಳಿತದ ಜಿರಾಯತ್ (ವ್ಯವಸಾಯ) ಖಾತೆಯಲ್ಲಿ ಮದದ್‌ಗಾರರಾಗಿ (ಸಹಾಯಕರಾಗಿ) ಕೆಲಸ ಮಾಡಿದವರು. ತಾಯಿ ಸುಂದರಾಬಾಯಿ. ಯಾದಗಿರಿಯಲ್ಲಿ ಪ್ರಾರಂಭಿಕ ಶಿಕ್ಷಣ ಮಾಡಿದರು ವಸಂತ ಕುಷ್ಟಗಿಯವರು. ಉಪಾಧ್ಯಾಯರಾಗಿ ದೊರೆತ ಶಂಕರರಾವ್ ಕುಲಕರ್ಣಿಯವರ ಮೇಲ್ವಿಚಾರಣೆಯಲ್ಲಿ ಕಲಿತ ಉರ್ದುಭಾಷೆಯನ್ನು ಕಲಿತರು.
ಮಕ್ಕಳ ಸ್ಕೂಲು ಮನೇಲಲ್ವೆ ಎನ್ನುವಂತೆ ತಾಯಿ ಸುಂದರಾಬಾಯಿಯವರಿAದ ಕಲಿತ ಕನ್ನಡಭಾಷೆಯನ್ನು ಕಲಿತರು. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಧ್ಯಮಿಕ ಶಾಲಾಭ್ಯಾಸ ಶಹಾಪೂರದಲ್ಲಿ ಮಾಡಿದರು. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಕಲಿತದ್ದು ಪ್ರೌಢಶಾಲೆಯ ವರೆಗೆ. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಓದಿದ ವಸಂತ ಕುಸ್ಟಗಿಯವರು ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎ. ಪದವಿ ಪಡೆದರು.
ನಂತರ ಉಪನ್ಯಾಸಕರಾಗಿ ಸೇರಿದ್ದು ಬೀದರಿನ ಎಚ್.ಕೆ.ಇ. ಸೊಸೈಟಿಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ. ನಂತರ ಶಹಾಬಾದಿನ ಎಸ್.ಎಸ್.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಕಲಬುರ್ಗಿಯ ಎಂ.ಎಸ್.ಐ. ಕಾಲೇಜು, ಮತ್ತು ಶಹಾಬಾದಿನ ಎಸ್.ಎಸ್.ಎಂ. ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಲ್ಲದೇ ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ ಕೆಲಸ ಮಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ (1980 – 82 ರ ವರಗೆ) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ತಾಯಿ ಸುಂದರಾಬಾಯಿಯವರು ಅಕ್ಷರಾಭ್ಯಾಸ ಮಾಡಿಸಿದರೆ ತಂದೆ ರಾಘವೇಂದ್ರ ಕುಷ್ಟಗಿಯವರು ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ತಂದೆಯು ವರ್ಗವಾಗಿ ಹೋದೆಡೆಯಲ್ಲೆಲ್ಲಾ ಸಾಹಿತಿಗಳ ಸ್ನೇಹ ಸಂಪಾದಿಸಿ ನಡೆಸುತ್ತಿದ್ದ ಸಾಹಿತ್ಯಕೂಟದಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಗೋಕಾಕ್, ಸಿಂಪಿ ಲಿಂಗಣ್ಣ, ಮುಗಳಿ ಮುಂತಾದವರೆಲ್ಲರೂ ಹಾಜರಿರುತ್ತಿದ್ದರು. ಹಲವಾರು ನಾಟಕಗಳನ್ನೂ ವಸಂತ ಕುಷ್ಟಗಿ ಬರೆದುದಲ್ಲದೇ ರಂಗ ನಟರಾಗಿಯೂ ಪಾಲ್ಗೊಳ್ಳುತ್ತಿದ್ದರು. ಹೀಗೆಯೇ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ನನ್ನ ಮನೆ ಹಾಲಕೆನೆ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದವರು.
ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿದ್ದಾಗ ಕಾಲೇಜಿನ ಪತ್ರಿಕೆಗೂ ಬರೆಯ ತೊಡಗಿದ್ದವರು. ಗಳಗನಾಥರಂತಹವರು ತಮ್ಮ ಪುಸ್ತಕಗಳನ್ನು ಗೋಣಿ ಚೀಲದಲ್ಲಿ ಹೊತ್ತು, ಮಾರಾಟ ಮಾಡಲು ಬರುತ್ತಿದ್ದುದನ್ನು ಕಂಡ ಕುಷ್ಟಗಿಯವರು ಈ ರೀತಿ ನನ್ನ ಪುಸ್ತಕವೂ ಮಾರಾಟವಾಗುವುದು ಯಾವಾಗ ಎಂದು ಯೋಚಿಸುತ್ತಿದ್ದವರು, ಪತ್ರಿಕೆಗಳಿಗೆ ಕವನಗಳನ್ನು ಬರೆಯತೊಡಗಿದ್ದು ಮೊದಲ ಕವನ ಸಂಕಲನ ಭಾವದೀಪ್ತಿ ಪ್ರಕಟವಾದದ್ದು 1970 ರಲ್ಲಿ. ನಂತರ ಬಂದ ಕವನ ಸಂಕಲನಗಳು ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ 9 ಕವನ ಸಂಕಲನಗಳು ಬಂದವು. ನಂತರ ಗದ್ಯ ಸಾಹಿತ್ಯದಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿರುವ ವಸಂತ ಕುಷ್ಟಗಿಯವರು ಬರೆದ ಮೊದಲ ಕೃತಿ ಭಕ್ತಿಗೋಪುರ ಎಂಬುದು.
ಮುAಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದ ವ್ಯಕ್ತಿ ಚಿತ್ರ ಕೃತಿಗಳು; ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾ ನಂತರದ ಹರಿದಾಸ ಸಾಹಿತ್ಯ ಮುಂತಾದ ದಾಸ ಸಾಹಿತ್ಯದ ಕೃತಿಗಳು; ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಸುಮಾರು 20 ಕ್ಕೂ ಹೆಚ್ಚೂ ಕೃತಿಗಳನ್ನು ರಚಿಸಿದ್ದಾರೆ.
ಕೃತಿ ಸಂಪಾದನೆಯ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ವಸಂತ ಕುಷ್ಟಗಿಯವರು ಕಾವ್ಯಶ್ರೀ, ತೊದಲು, ಅಜ್ಜಿ ಹೇಳಿದ್ದು ಮೊಮ್ಮಕ್ಕಳು ಬರೆದದ್ದು ಶ್ರೀರಾಘವೇಂದ್ರ ಮಹಿಮೆ, ಕಂದಗಲ್ ಕೃತ ಶ್ರೀ ಚಂದ್ರಲಾ ಪರಮೇಶ್ವರಿ ನಾಟಕ ಮುಂತಾದ ವಿವಿಧ ಪ್ರಕಾರಗಳ ಸುಮಾರು 15 ಕ್ಕೂ ಹೆಚ್ಚು ಕೃತಿಗಳ ಜೊತೆಗೆ ಇತರರೊಡನೆ ಸೇರಿ ಸುಮಾರು 20 ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೇ, ಇತರ ಸಾಹಿತಿಗಳ ಕೃತಿಗಳೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡಮಿ, ಇತಿಹಾಸ ಅಕಾಡಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್, ಗುಲಬರ್ಗಾ ವಿ.ವಿ.ದ ಸೆನೆಟ್, ಕೋಲ್ಕತ್ತಾದ ಏಷಿಯಾಟಿಕ್ ಸೊಸೈಟಿ ಆಫ್ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ದುಡಿರುವ ವಸಂತ ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಾಹಿತಿ ಸತೀಶ ಕುಲಕರ್ಣಿಯವರ ಹಿರಿತನದ ಪ್ರಶಸ್ತಿಯಾದ ವಾರಂಬಳ್ಳಿ ಪ್ರಶಸ್ತಿ, ರತ್ನಾಕರ ವರ್ಣಿ ಮುದ್ದಣ ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ.ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೇ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ 9 ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ದೊರೆತವು.
ಇವರ ಸಾಹಿತ್ಯ ಮತ್ತು ವ್ಯಕ್ತಿ ಪರಿಚಯದ ‘ಹಾರಯಿಕೆಯ ಕವಿ ಪ್ರೊ.ವಸಂತ ಕುಷ್ಟಗಿ’ ಕೃತಿಯು 1910 ರಲ್ಲಿ ಪ್ರಕಟಗೊಂಡಿತು. ಪ್ರೊ.ವಸಂತ.ಕುಷ್ಟಗಿಯವರ ಜೀವನ ಮತ್ತು ಕಾವ್ಯ: ಒಂದು ಅಧ್ಯಯನ ಸಂಪ್ರಬAಧಕ್ಕೆ ಶ್ರೀಮತಿ ರೂತಾ.ಎಸ್. ಪ್ರಭುಶಂಕರ ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಪದವಿ ದೊರೆತಿದೆ.

ಕೆ.ಶಿವು.ಲಕ್ಕಣ್ಣವರ

Exit mobile version