ಮೂಕ ಪ್ರಾಣಿಯ ಹೃದಯ ವೈಶಾಲ್ಯತೆ

ಮನುಷ್ಯರಾದ ನಮಗೂ ಮತ್ತು ಪ್ರಾಣಿಗಳಿಗೂ ಇರುವ ವ್ಯತ್ಯಾಸ ಸಕಲ ಜೀವರಾಶಿಗಳಲ್ಲಿ ಮನುಷ್ಯ ಬುದ್ದಿವಂತ ಎನಿಸಿಕೊಂಡಿದ್ದಾನೆ. ಆದರೆ ಪ್ರಾಣಿಗಳಿಗೆ ಮನುಷ್ಯನಷ್ಟು ಬುದ್ಧಿವಂತಿಕೆ ಇರದಿದ್ದರೂ ಮನುಷ್ಯನನ್ನು ಮೀರಿದ ಹೃದಯ ವೈಶಾಲ್ಯತೆ ಇರುವುದು ಕೆಲವು ದೃಷ್ಟಾಂತಗಳಿಂದ ತಿಳಿದುಬರುತ್ತದೆ. ತನ್ನನ್ನು ಸಾಕಿ ಸಲುಹಿದ ಮನುಷ್ಯನ ಋಣವನ್ನು ಪ್ರಾಣಿಗಳು ಮರೆಯಲಾರವು ಆದರೆ ಮನುಷ್ಯ ಕೆಲವೊಮ್ಮೆ ತನ್ನನ್ನು ಸಾಕಿ ಸಲುಹಿದ ತಂದೆ ತಾಯಿಯನ್ನೇ ಮರೆಯುವ ಹಂತಕ್ಕೆ ಬಂದು ತಲುಪಿರುತ್ತಾನೆ.ಪೂಜ್ಯ ಸಿದ್ಧೇಶ್ವರ ಶ್ರೀಗಳು ತಮ್ಮ ಪ್ರವಚನದಲ್ಲಿ ಮೂಕ ಪ್ರಾಣಿಯ ಹೃದಯ ವೈಶಾಲ್ಯತೆಯ ಗುಣವನ್ನು ಕುರಿತು ಹೇಳಿದ ಒoದು ದೃಷ್ಟಾಂತ ನೆನಪಿಗೆ ಬರುತ್ತದೆ.

ಬಡ ದಂಪತಿಗಳಿಬ್ಬರೂ ತಮ್ಮ ಜೀವನ ನಿರ್ವಹಣೆಗಾಗಿ ಒoದು ಹಸುವನ್ನು ಸಾಕಿರುತ್ತಾರೆ.ಆ ಹಸು ಕೊಡುವ ಹಾಲನ್ನು ಮಾರಿ ತಮ್ಮ ನಿತ್ಯದ ಜೀವನವನ್ನು ನಡೆಸುತ್ತಿರುತ್ತಾರೆ.ಹಸುವಿಗೆ ಸರಿಯಾಗಿ ಹುಲ್ಲನ್ನು ಹಾಕಲು ಇವರಿಗೆ ಅನುಕೂಲವಿರಲಿಲ್ಲ ಮೊದಲೇ ಕಿತ್ತು ತಿನ್ನುವ ಬಡತನದಲ್ಲಿ ಹಸುವನ್ನೇ ಅವಲಂಬಿಸಿ ಜೀವನ ನಿರ್ವಹಣೆ ಮಾಡುವ ಈ ದಂಪತಿಗಳು ಪ್ರತಿನಿತ್ಯ ಮುಂಜಾನೆ ಆ ಹಸುವಿಗೆ ಮೈ ತೊಳೆದು ಕುಂಕುಮವಿಟ್ಟು ಪೂಜಿಸಿ ನೀನೇ ನಮ್ಮ ಪಾಲಿನ ದೇವರು ನಿನ್ನಿಂದಾಗಿ ನಮ್ಮ ಜೀವನ ನಡೆಯುತ್ತಿದೆ ಎಂದು ಹೇಳಿ ಆ ಹಸುವಿನ ಪಾದಕ್ಕೆ ನಮಸ್ಕರಿಸಿ ಹುಲ್ಲು ಮೇಯ್ದುಕೊಂಡು ಬರಲು ಊರ ಹೊರಗಡೆ ಹಸುವನ್ನು ಅಟ್ಟುತ್ತಿದ್ದರು.ಹೀಗೆ ಹಸು ಊರ ಹೊರಗಡೆ ಹೋಗುತ್ತಾ ಸಮೀಪದಲ್ಲಿರುವ ಹೊಲಗಳಿಗೆ ನುಗ್ಗಿ ಯಾರದ್ದೋ ಹೊಲದಲ್ಲಿ ಹುಲ್ಲು ಮೇಯುತ್ತಿತ್ತು ಆ ಹೊಲದ ಮಾಲೀಕರ ಕೈಗೆ ಸಿಕ್ಕಾಗ ಅವರಿಂದ ಹೊಡೆತ ತಿಂದು ಮತ್ತೆ ಹುಲ್ಲನ್ನು ಅರಸಿ ಮುಂದಿನ ಹೊಲಕ್ಕೆ ಹೋಗುತ್ತಿತ್ತು.

ಹೀಗೆ ಮಾಲೀಕರಿಂದ ಹೊಡೆತ ತಿನ್ನುತ್ತಾ ಅಲ್ಲಿ ಇಲ್ಲಿ ಸಿಕ್ಕಷ್ಟು ಹುಲ್ಲನ್ನು ತಿಂದು ಅರೆಹೊಟ್ಟೆಯಿಂದ ಮನೆಗೆ ಮರಳುತ್ತಿತ್ತು , ಹೀಗೆ ಸಂಜೆ ಈ ಹಸು ಮನೆಗೆ ಬಂದಾಗ ಆ ಬಡ ಗೃಹಿಣಿ ಅದರ ಪಾದಗಳನ್ನು ತೊಳೆದು ನಮಸ್ಕರಿಸಿ ನೀನೇ ನಮ್ಮ ಪಾಲಿನ ದೇವರು ನಮ್ಮ ಜೀವನ ನಿನ್ನಿಂದಲೇ ನೆಡೆಯುತ್ತಿದೆ ಎಂದು ಹೇಳಿ ಹಾಲನ್ನು ಕರೆದುಕೊಂಡು ಆ ಹಾಲನ್ನು ಮಾರಿ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು.

ಹೀಗೆ ಬಡ ದಂಪತಿಗಳ ಜೀವನ ಸಂಪೂರ್ಣವಾಗಿ ಹಸುವನ್ನೇ ಅವಲಂಬಿಸಿ ನಡೆಯುತ್ತಿತ್ತು. ಹೀಗೆ ಆ ಹಸು ಹುಲ್ಲನ್ನು ಮೇಯಲು ಊರ ಹೊರಗಡೆ ಹೋದಾಗ ಒoದು ದಿನ ಅದಕ್ಕೆ ಎಲ್ಲಿಯೂ ಹುಲ್ಲು ದೊರಕುವುದಿಲ್ಲ.ಆಗ ಹಸು ನಾನು ಮನೆಗೆ ಹೋಗಿ ಹಾಲು ಕೊಡದಿದ್ದರೆ ಆ ಬಡ ಕುಟುಂಬದ ದಂಪತಿಗಳ ಜೀವನ ಕಷ್ಟವಾಗುತ್ತದೆ ಎಂದು ಆಲೋಚಿಸಿ ಮುಂದೆ ನಡೆಯುತ್ತಾ ಹೋದಂತೆ ಕಾಡನ್ನು ನೋಡುತ್ತದೆ ಈ ಕಾಡಿನಲ್ಲಾದರೂ ನನಗೆ ಹುಲ್ಲು ಸಿಗಬಹುದು ಎಂದುಕೊಂಡು ಕಾಡಿನೊಳಗಡೆ ಹೋಗುತ್ತದೆ ಅಲ್ಲಿ ಅದಕ್ಕೆ ಪರಮಾನಂದವೇ ಆಗುತ್ತದೆ ಏಕೆಂದರೆ ಕಾಡಿನಲ್ಲಿ ದೊಡ್ಡ ಹುಲ್ಲುಗಾವಲು ಆವರಿಸಿತ್ತು ಆನಂದದಿಂದ ಆ ಹಸುವು ಹುಲ್ಲನ್ನು ಹೊಟ್ಟೆತುಂಬ ಮೇಯ್ದು ಕೊಂಡಿತು.

ಆ ಕಾಡಿನಲ್ಲಿ ಈ ಹಸುವಿಗೆ ಬೈಯ್ಯುವವರು ಹಾಗೂ ಹೊಡೆಯುವವರು ಇರುತ್ತಿರಲಿಲ್ಲ ತುಂಬಾ ಸಂತೋಷದಿಂದ ಅಂದು ಸಂಜೆ ಹಸು ಮನೆಗೆ ಹೋಯಿತು. ಎಂದಿನಂತೆ ಗೃಹಿಣಿ ಆ ಹಸುವಿಗೆ ನಮಸ್ಕರಿಸಿ ಹಾಲನ್ನು ಕರೆಯುತ್ತಿರುವಾಗ ದಿನಕ್ಕಿಂತ ಅಂದು ಹಸು ಒಂದೆರಡು ಲೀಟರ್ ಹೆಚ್ಚಿಗೆ ಹಾಲನ್ನು ಕೊಟ್ಟಿತು. ಆಗ ಗೃಹಿಣಿ ತುಂಬಾ ಸಂತೋಷವಾಗಿ ಮತ್ತೊಮ್ಮೆ ಆ ಹಸುವಿಗೆ ನಮಸ್ಕರಿಸಿ ಧನ್ಯತೆಯ ಭಾವನೆಯನ್ನು ಬೀರಿದಳು.

ಮರುದಿನ ಮುಂಜಾನೆ ಆ ಹಸು ಮತ್ತೆ ಗೃಹಿಣಿಯಿಂದ ನಮಸ್ಕರಿಸಲ್ಪಟ್ಟು ಕಾಡಿಗೆ ಹೋಯಿತು. ಆ ಕಾಡಿನಲ್ಲಿ ಬೇರೆ ಹಸುಗಳ ಪರಿಚಯವೂ ಆಯಿತು. ಈ ಹಸು ಸ್ವಚ್ಚಂದವಾದ ಕಾಡಿನಲ್ಲಿ ಆನಂದಿಂದ ಹುಲ್ಲನ್ನು ಮೇಯುತ್ತಿರುವಾಗ ಕಾಡಿನ ಹಸು ಕೇಳೀತು ನಿನಗೆ ಇಲ್ಲಿ ಬೇಕಾದಷ್ಟು ಹುಲ್ಲು ಸಿಗುತ್ತದೆ ಹೊಟ್ಟೆ ತುಂಬುವವರೆಗೂ ನೀನು ತಿನ್ನಬಹುದು ಇಲ್ಲಿ ನಿನಗೆ ಯಾರೂ ಬೈಯ್ಯುವುದಿಲ್ಲ ಹಾಗೂ ಹೊಡೆಯುವುದಿಲ್ಲ. ನೀನು ನಿತ್ಯ ಹುಲ್ಲು ಮೇಯಲು ಅಷ್ಟು ದೂರದ ಊರಿನಿಂದ ಇಲ್ಲಿಗೆ ಬರುವ ಪ್ರಯಾಸವನ್ನು ಬಿಟ್ಟು ನೀನು ಇಲ್ಲೇ ಇದ್ದು ಬಿಡಬಹುದಲ್ಲ ಎಂದಿತ್ತು.

ಪ್ರೊ ಸುಧಾ ಹುಚ್ಚಣ್ಣವರ
ಲೇಖಕರು ಶಿರಹಟ್ಟಿ

ಇಲ್ಲಿ ನಿನಗೆ ಯಾವುದಕ್ಕೇನೂ ಕೊರತೆ ಆಗದು ಆ ಬಡ ದಂಪತಿಗಳು ಒoದುಹಿಡಿ ಹುಲ್ಲು ಸಹ ನಿನಗೆ ಹಾಕುವುದಿಲ್ಲ ಅಂತವರ ಮನೆಗೆ ನೀನೇಕೆ ಇಷ್ಟು ಕಷ್ಟಪಟ್ಟು ಹೋಗುತ್ತಿ ಎಂದು ಕಾಡಿನ ಹಸು ಪ್ರಶ್ನಿಸಿತು.ಆಗ ಈ ಬಡ ದಂಪತಿಗಳ ಹಸು ಹೇಳಿತು ಆ ದಂಪತಿಗಳು ಬಡವರಿರಬಹುದು, ನನಗೆ ಹುಲ್ಲು ಹಾಕದಿರುವದು ನಿಜ ಇಲ್ಲಿಂದ ಅಲ್ಲಿಗೆ ನಡೆಯುವುದು ನನಗೆ ಕಷ್ಟವಾಗುತ್ತದೆ ಎಂಬುದು ಸಹ ನಿಜ ಆದರೆ ಇಷ್ಟು ದಿನ ನನ್ನನ್ನು ಸಾಕಿ ಸಲುಹಿದ್ದಾರೆ. ಹೊಟ್ಟೆತುಂಬ ಹುಲ್ಲನ್ನು ಹಾಕದಿದ್ದರೂ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಕೃತಜ್ಞತೆಯ ಮನೋಭಾವನೆಯಿಂದ ನನ್ನನ್ನು ಮೈ ತೊಳೆದು ಪೂಜಿಸಿ ನಮಸ್ಕರಿಸಿ ನನ್ನನ್ನೇ ದೇವರ ಸ್ಥಾನದಲ್ಲಿ ಕಂಡು ಒಳ್ಳೆಯ ಪ್ರೀತಿಯ ಮಾತುಗಳನ್ನಾಡಿ ಕಳುಹಿಸುತ್ತಾರೆ ಅವರ ಪ್ರೀತಿಯ ಮಾತುಗಳಿಗೆ ನಾನು ಋಣಿಯಾಗಿದ್ದೇನೆ ಎಂದು ಆ ಬಡ ದಂಪತಿಗಳ ಹಸು ಹೇಳಿತು.ಶ್ರೀಗಳು ಹೇಳಿದ ಈ ದೃಷ್ಟಾಂತ ನಿಜಕ್ಕೂ ಮೂಕ ಪ್ರಾಣಿಗಳಲ್ಲಿಯೂ ಸಹ ಎಂತಹ ಹೃದಯ ವೈಶಾಲ್ಯತೆ ಇರುತ್ತದೆ ಎಂಬುದು ಅರಿವಾಗುತ್ತದೆ.

ಮನುಷ್ಯರಾದ ನಾವೇ ಕೆಲವೊಮ್ಮೆ ಸಂಕುಚಿತ ಮನೋಭಾವನೆಯಿಂದ ಅದೆಷ್ಟೋ ಸನ್ನಿವೇಶಗಳನ್ನು ,ಆತ್ಮೀಯರ ಅಂತ ಕರಣದ ಮನೋ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಹೋಗುತ್ತೇವೆ.ಆದರೆ ಈ ದೃಷ್ಟಾಂತದಲ್ಲಿ ಆ ಮೂಕಪ್ರಾಣಿ ತನ್ನನ್ನು ಸಾಕಿ ಸಲುಹಿದವರನ್ನು ಅತ್ಯಂತ ಪ್ರೀತಿ ತೋರಿದ ಅವರ ಋಣವನ್ನು ಅವರ ಕೃತಜ್ಞತೆಯ ಭಾವನೆಯನ್ನು ಅರಿತು ತನ್ನ ಶ್ರಮವನ್ನ ಲೆಕ್ಕಿಸದೆ ಅವರಿಗಾಗಿಯೇ ತೋರಿದ ಆ ಮೂಕ ಪ್ರಾಣಿಯ ಹೃದಯ ವೈಶಾಲ್ಯತೆ ನಿಜಕ್ಕೂ ಮನುಷ್ಯರಾದ ನಮಗೆ ಅರಿವನ್ನು ಮೂಡಿಸುತ್ತದೆ.

Exit mobile version