ಸರಳ, ಸಹೃದಯಿ ಡಾ. ಕೆ.ಎಸ್.ಪರಡ್ಡಿ

ಸರಳ, ಸಹೃದಯಿ ಡಾ. ಕೆ.ಎಸ್.ಪರಡ್ಡಿ

ಸರಳ, ಸಹೃದಯಿ ಡಾ. ಕೆ.ಎಸ್.ಪರಡ್ಡಿ

ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವೈದ್ಯ
(ದಿನಾಂಕ: 31.05.2021 ರಂದು ವಯೋನಿವೃತ್ತಿ ಹೊಂದುತ್ತಿರುವ ನಿಮಿತ್ತ ಲೇಖನ)

ಸರಳ; ಸದ್ಗುಣ ಸುಸ್ವಭಾವದ, ಕಾರ್ಯಸಾಧನಾ ಚಟುವಟಿಕೆಯುಳ್ಳವರೂ ಆಗಿರುವ ಪ್ರಾಧ್ಯಾಪಕ ಡಾ. ಕೆ.ಎಸ್.ಪರಡ್ಡಿಯವರು, ಗದುಗಿನ ಶ್ರೀ ಶಿವಾನಂದ ಬೃಹನ್ಮಠದ, ಸುಪ್ರಸಿದ್ದ ಡಿ.ಜಿ.ಎಂ.ಆಯುರ್ವೇದ ಮಹಾವಿದ್ಯಾಲಯದಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಲಿದ್ದಾರೆ.
ಮೂಲತ: ಗದಗ ಜಿಲ್ಲೆಯವರಾದ ಇವರ ಹುಟ್ಟೂರು ರೋಣ ತಾಲೂಕಿನ ಸವಡಿ ಗ್ರಾಮ, ಕೃಷಿ ಮನೆತನದವರಾದ ಇವರು ತಾಯಿ ಕೂಡ್ಲಮ್ಮ ತಂದೆ ಷಣ್ಣುಖಪ್ಪ ದಂಪತಿಗಳ ಪ್ರಥಮ ಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಸವಡಿಯಲ್ಲಿಯೇ ಮುಗಿಸುತ್ತಾರೆ. ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಪಿ.ಯು.ಸಿ. ಪೂರ್ಣಗೊಳಿಸಿ ತಂದೆತಾಯಿಯರ ಕನಸಿನಂತೆ ವೈದ್ಯನಾಗುವ ಗುರಿಹೊಂದಿ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ 1985ರಲ್ಲಿ ಬಿ.ಎ.ಎಮ್.ಎಸ್ ಪದವಿ ಪಡೆದು ಮನೆತನದಲ್ಲಿ ಪ್ರಥಮ ವೈದ್ಯರಾದರು.
ಈ ಸಮಯದಲ್ಲಿ ಗದುಗಿನ ಶಿವಾನಂದ ಬೃಹನ್ಮಠದ, ಶಿಕ್ಷಣ ಸಂಸ್ಥೆಯು ಪ್ರಾರಂಭಿಸಿದ ಶ್ರೀ ದಾ.ಗು. ಮೇಲ್ಮಾಳಗಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ಬಂದಾಗ ಉಪನ್ಯಾಸಕ ವೃತ್ತಿಯನ್ನು ಒಪ್ಪಿಕೊಂಡು ವೈದ್ಯ-ಶಿಕ್ಷಕರಾದರು.

ವಿಭಾಗದ ಮುಖ್ಯಸ್ಥರಾಗಿದ್ದರು
ಆಯುರ್ವೇದ ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವು ಪ್ರಾರಂಭವಾದ ಸಮಯವದು. ಅನೇಕ ಬದಲಾವಣೆಗಳು ಆಗುತ್ತಲಿದ್ದವು. ಡಾ.ಕೆ.ಎಸ್.ಪರಡ್ಡಿಯವರು, ಉಪನ್ಯಾಸಕರಾಗಿ ಸೇರಿದಾಗ ಅವರಿಗೆ ನೀಡಿದ ವಿಷಯ- ಶಾರೀರ ರಚನಾ, ಡಾ.ಬಿ.ಜಿ.ಸ್ವಾಮಿಯವರ ಮಾರ್ಗದರ್ಶನದೊಂದಿಗೆ ಹನ್ನೊಂದು ವರ್ಷಗಳ ಕಾಲ ಶಾರೀರ ರಚನಾ ಬೋಧನೆ ಮತ್ತು ಪ್ರಾತ್ಯಕ್ಷಿಕೆಗಳನ್ನು ಬಹು ಅಚ್ಚುಕಟ್ಟಾಗಿ ಮಾಡಿದರು. ನಂತರದಲ್ಲಿ ಹೊಸ ಶಿಕ್ಷಣ ನೀತಿಯ ಅವಶ್ಯಕತೆಯಂತೆ ಇವರಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇದ್ದ ಕೌಮಾರ್ಯಬೃತ್ಯ ವಿಷಯವನ್ನು ನೀಡಿ ಅವರನ್ನೇ ಆ ವಿಭಾಗದ ಮುಖ್ಯಸ್ಥರನ್ನಾಗಿಯೂ ಸಂಸ್ಥೆ ನಿಯಮಿಸಿತು. ಕಾರ್ಯಸಾಧನಾ ಹೋರಾಟದ ಸ್ವಭಾವದ ಇವರು ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಪ್ರಾಚಾರ್ಯರಾದ ಡಾ. ಜಿ.ಬಿ.ಪಾಟೀಲರ ಮಾರ್ಗದರ್ಶನದಡಿಯಲ್ಲಿ ವಿಭಾಗವನ್ನು ಯಥೋಚಿತವಾಗಿ ಅಭಿವೃದ್ಧಿ ಪಡಿಸಿದರು. “ಆರೋಗ್ಯವಂತ ಶಿಶು” ಎಂಬ ಸ್ಪರ್ಧೆಯನ್ನು ಸಾರ್ವಜನಿಕವಾಗಿ ಏರ್ಪಡಿಸಿ-ಆರೋಗ್ಯವಂತ ಶಿಶುವಿನ ಲಕ್ಷಣಗಳನ್ನು ಜನಮನದಲ್ಲಿ ಹರಡಿದ್ದಲ್ಲದೇ ಇಂತಹ ವಿಶಿಷ್ಟ ಕಾರ್ಯದಿಂದ ಜನರ ಗಮನ ಸೆಳೆದರು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸುವರ್ಣ ಪ್ರಾಶನ ವಿಧಾನವನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ಧಿ ಪಡಿಸಿ ಸುವರ್ಣಬಿಂದು ರೂಪದಲ್ಲಿ ಮಾರ್ಪಡಿಸಿ ಶಿಬಿರ ಏರ್ಪಡಿಸಿ ಬಂದ ಎಲ್ಲ ಮಕ್ಕಳಿಗೆ ಸುವರ್ಣಬಿಂದು ನೀಡುವದರ ಮೂಲಕ ಅದನ್ನು ಸಾರ್ವಜನಿಕವಾಗಿ ಪ್ರಾಯೋಗಿಕ ಸ್ವರೂಪದಲ್ಲಿ ಪ್ರಪ್ರಥಮವಾಗಿ ನಡೆಸಿಕೊಟ್ಟರು. ಮಹಾವಿದ್ಯಾಲಯದ ಸಕಲ ಅಧ್ಯಾಪಕ ಬಂಧುಗಳ ಸಹಕಾರದಿಂದ ಪುಷ್ಯನಕ್ಷತ್ರವಿರುವ ದಿನದಂದು ಶಿಶುಗಳಲ್ಲಿ ಅದನ್ನು ಪ್ರಯೋಗಿಸಿ ಅದ್ಯಯನ ನಡೆಸಿ, ಗ್ರಂಥೋಕ್ತ ಪರಿಣಾಮಗಳನ್ನು ಖಚಿತಪಡಿಸಿಕೊಂಡರು. ಮುಂದೆ ರಾಜ್ಯದ ಅನೇಕ ಆಯುರ್ವೇದ ಮಹಾವಿದ್ಯಾಲಯಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಯಿತು. ಅನೇಕ ಸಮಾವೇಶಗಳಲ್ಲಿ ಈ ಕುರಿತು ಅವರು ಪ್ರಬಂಧ ಮಂಡನೆ ಕೂಡ ಮಾಡಿದರು.

ಔಷಧಿಗಳ ಬಗೆಗೆ ಕಿರು ಹೊತ್ತಿಗೆ
ಡಾ.ಕೆ.ಎಸ್.ಪರಡ್ಡಿಯವರಿಗೆ ಉಂಟಾದ ಜ್ಞಾನದ ಹಸಿವು ಅವರನ್ನು ಸ್ನಾತಕೋತ್ತರ ಪದವಿ ಓದಲು ಪ್ರೇರೇಪಿಸಿದಂತೆ ಅವರಿಗೆ ಸಂಸ್ಥೆಯವರಿAದ ಅವಕಾಶವೂ ನೀಡಲಾಗಿ, 2002ರಲ್ಲಿ “ದ್ರವ್ಯಗುಣ ವಿಜ್ಞಾನ” ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅದೇ ವಿಭಾಗದಲ್ಲಿ ಅಧ್ಯಾಪಕ ವೃತ್ತಿ ಮುಂದುವರೆಸಿದ ಅವರು 2006 ರಿಂದ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸತೊಡಗಿದರು.
ಸುಮಾರು ನೂರು ತರಹದ ವಿವಿಧ ಔಷಧಿ ಸಸ್ಯಗಳನ್ನು ವಿದ್ಯಾಲಯದ ಅವರಣದಲ್ಲಿರುವ ಧನ್ವಂತರಿ ಔಷಧಿ ವನದಲ್ಲಿ ಹೊಸದಾಗಿ ಬೆಳೆಸಿದ್ದು, ವಿದ್ಯಾರ್ಥಿಗಳ ಜ್ಞಾನವೃದ್ದಿಗೆ ಅತ್ಯಂತ ಉಪಯುಕ್ತವಾಗಿದೆ. ಕಪ್ಪತ್ತಗುಡ್ಡದ ಔಷಧಿ ಸಸ್ಯಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿ ಅಲ್ಲಿಯ ಸಸ್ಯಗಳನ್ನು ಪರಿಚಯಿಸುವ ಕಿರುಹೊತ್ತಿಗೆ ತರುವಲ್ಲೂ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ವಿಶೇಷ ಅತಿಥಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಹನ್ನೆರಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವಿಶ್ರಾಂತ ದುಡಿಮೆಯ ಡಾ.ಪರಡ್ಡಿ
ಮಹಾವಿದ್ಯಾಲಯವು ಹಮ್ಮಿಕೊಳ್ಳುತ್ತಿದ್ದ ಪಠ್ಯೇತರ ಚಟುವಟಿಕೆಗಳಲ್ಲಿ ಅವರದು ಅವಿಶ್ರಾಂತ ದುಡಿಮೆ. ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳು, ಬೇರೆ ಬೇರೆ ವಿಭಾಗದ ವೈಜ್ಞಾನಿಕ ಸಮಾವೇಶಗಳು, ವೈದ್ಯಕೀಯ ಶಿಬಿರಗಳು, ಶಿಷ್ಯೋಪನಯನ, ದೀಕ್ಷಾಂತ ಸಮಾರೋಹ, ಕ್ರೀಡಾ ಕೂಟಗಳಲ್ಲಿ ಅವರ ಸಕ್ರೀಯ ಪಾತ್ರವಿರುತ್ತಿತ್ತು. ಶ್ರೀ ಶಿವಾನಂದ ಬೃಹನ್ಮಠದ ಜಾತ್ರೆಯ “ಸದ್ಧರ್ಮ ಪರಿಷತ್‌ನ” ಕಾರ್ಯನಿರ್ವಹಣೆ ಕೂಡ ಪ್ರತಿವರ್ಷ ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ.
ತಮ್ಮ 27ನೇ ವಯಸ್ಸಿನಲ್ಲಿ ಶ್ರೀಮತಿ ಪಾರ್ವತಿಯವರೊಡನೆ ವಿವಾಹವಾಗಿ ಸಂಸಾರಸ್ಥರಾದ ಇವರಿಗೆ ಚಿ|| ಹೇಮಂತ ಎಂಬ ಪುತ್ರರತ್ನ ಜನನವಾಯಿತು. ಶ್ರೀಮತಿ ಪಾರ್ವತಿಯವರು ಪತಿಯ ಎಲ್ಲ ಕಾರ್ಯಗಳಲ್ಲಿ ಉತ್ತಮ ಸಹಕಾರ ನೀಡಿ, ಪುತ್ರನನ್ನು ಒಳ್ಳೆಯ ಸಂಸ್ಕಾರವAತನಾಗಿ ಬೇಳೆಸಿ ಉತ್ತಮ ಶ್ರೇಣಿಯ ವೈದ್ಯಕೀಯ (ಎಂ.ಬಿ.ಬಿ.ಎಸ್) ಪದವೀಧರನನ್ನಾಗಿ ಮಾಡಲು ಶ್ರಮಿಸಿದರು.
ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಾರ್ಗದರ್ಶನ ನೀಡುತ್ತಿದ್ದ ಡಾ.ಕೆ.ಎಸ್.ಪರಡ್ಡಿ, ತಮ್ಮ ಎಲ್ಲಾ ಸಹೋದ್ಯೋಗಿಗಳೊಂದಿಗೆ ಅನ್ನೋನ್ಯಭಾವದಿಂದಿದ್ದರು. ಅವರ ವಯೋನಿವೃತ್ತಿಯು ನಮಗೆ ಬೇಡವಾಗಿದ್ದರೂ-ಅನಿವಾರ್ಯವಾಗಿದ್ದು, ನಿವೃತ್ತಿ ನಂತರದ ಅವರ ಜೀವನವು ನೆಮ್ಮದಿಯಿಂದ ಕೂಡಿರಲಿ, ಶಾಂತಿಯುತವಾಗಿರಲಿ ಎಂಬುದು ನಮ್ಮ ಹಾರೈಕೆ. ಹಾಗೂ ಆಯುಷ್ಯ ಆರೋಗ್ಯ ದಯಪಾಲಿಸಲೆಂದು ದೇವರಲ್ಲಿ ಪ್ರಾರ್ಥನೆ.


ಪರಶಿವನೂ ಉತ್ತಮ ಸುಗಂಧಿ ಪುಷ್ಪ ಬಯಸುವವನಂತೆ. ಸುಪುತ್ರ ಹೇಮಂತನು ಪುಷ್ಪದಂತೆ ಶಿವನಿಗೆ ಪ್ರೀಯನಾಗಿಬಿಟ್ಟಿದ್ದು ದಂಪತಿಗಳ ಬಾಳಿನಲ್ಲಿ ಸುನಾಮಿ ಎಬ್ಬಿಸಿತು. ಪುತ್ರವಿಯೋಗ ಶೋಕದಿಂದ ಜರ್ಜರಿತರಾದರೂ ಪರಸ್ಪರ ಸಮಧಾನ, ಬಳಗದ ಸಾಂತ್ವನದಿAದ ಚೇತರಿಸಿಕೊಂಡು ಮತ್ತೆ ಮಹಾವಿದ್ಯಾಲಯದ ಕಾರ್ಯಗಳಲ್ಲಿ ಸೇವಾನಿರತರಾದದ್ದು ಒಂದು ಉತ್ತಮ ಆತ್ಮಬಲ.

ಡಾ. ರಾಜೀವ ಜೋಶಿ, ನಿವೃತ್ತ ಪ್ರಾಧ್ಯಾಪಕರು
ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯ ಗದಗ

Exit mobile version