ಇಷ್ಟು ದಿನ ಕಣ್ಣೇ ಅದಿರಿಂದ ಹಾಡಿನ ಮೂಲಕ ಕರ್ನಾಟಕ ಜನತೆಯನ್ನು ತಮ್ಮತ್ತ ಸೆಳೆದುಕೊಂಡಿದ್ದ ಮಂಗ್ಲಿ ಈಗ ನಟನೆಯ ಮೂಲಕವೂ ಕನ್ನಡಿಗರಿಗೆ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ. ಕನ್ನಡದ ಸಿನಿಮಾಗಳಲ್ಲಿ ನಟಿಸುವಂತೆ ಅವರಿಗೆ ಬೇಡಿಕೆ ಬರುತ್ತಿದೆ. ಆ ಪೈಕಿ ಒಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಅದು ಶಿವರಾಜ್ಕುಮಾರ್ ನಟನೆಯ ಚಿತ್ರ ಎಂಬುದು ವಿಶೇಷ.
ಸ್ಯಾಂಡಲ್ವುಡ್ನಲ್ಲಿ ಮಂಗ್ಲಿಗೆ ಇಂಥ ದೊಡ್ಡ ಅವಕಾಶ ಸಿಗುತ್ತಿರುವುದಕ್ಕೆ ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬ್ಯುಸಿ ಆಗಿದ್ದಾರೆ. ಅವರ 124ನೇ ಸಿನಿಮಾಗೆ ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನ ಮಾಡಲಿದ್ದಾರೆ. ಬಾಲಶ್ರೀರಾಮ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಶ್ರೀಕಾಂತ್ ಧುಲಿಪುಡಿ, ಸ್ವಾತಿ ವನಪಲ್ಲಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ಕೂಡ ನಟಿಸಲಿದ್ದಾರೆ.
ಈ ಸಿನಿಮಾದಲ್ಲಿ ಮಂಗ್ಲಿಗೆ ಹೊಂದುವಂತಹ ಪಾತ್ರ ಯಾವುದಿರಬಹುದು ಎನ್ನುವ ಕೌತುಕದ ಪ್ರಶ್ನೆ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಚಿತ್ರತಂಡ ಇನ್ನೂ ಉತ್ತರ ನೀಡಿಲ್ಲ. ಈ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ಇಡಬೇಕಿದೆ. ನಾಜರ್, ಸಂಪತ್ ಹಾಗೂ ಸಾಧುಕೋಕಿಲ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.
ರವಿಕುಮಾರ್ ಸನಾ ಅವರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಲಿದ್ದಾರೆ. ಜೂನ್ ಮೊದಲ ವಾರದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಆರಂಭಿಸಲಾಗುವುದು.
