ಇಂದಿನಿಂದಲೇ ನೈಟ್ ಕರ್ಪ್ಯೂ: ತಹಶೀಲ್ದಾರ್ ಆದೇಶ

ಶಿರಹಟ್ಟಿ: ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಸ್ಪೊಟವಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಸೂಲಿ ಮಾಡಲಾಗುತ್ತದೆ ಎಂದು ತಹಶೀಲ್ದಾರ ಜೆ.ಬಿ.ಮಜ್ಜಗಿ ಎಚ್ಚರಿಕೆ ನೀಡಿದರು.

ಸ್ಥಳೀಯ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಬುಧವಾರ ನಡೆದ ಬೀದಿ ಬದಿ ವ್ಯಾಪಾರಸ್ಥರ ಹಾಗೂ ವರ್ತಕರ ಸಂಘದ ಸಭೆಯಲ್ಲಿ ಮಾತನಾಡಿದರು.

ಕೊರೊನಾ ನಿಯಮ ಉಲ್ಲಂಘನೆಗೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬುಧವಾರದಿಂದ ರಾತ್ರಿ 9 ಘಂಟೆಯಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರ ಎರಡು ದಿನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ರವಿವಾರ ತರಕಾರಿ ಮಾರುಕಟ್ಟೆ ಬೆಳಗ್ಗೆ 6 ರಿಂದ 10ರ ವರೆಗೆ ಮಾತ್ರ ನಡೆಯುತ್ತಿದ್ದು, ಹಾಲು, ಹಣ್ಣು, ಔಷಧಿ ಸೇರಿದಂತೆ ಸಾರ್ವಜನಿಕರು ತಮಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ನಿಯಮಗಳನ್ನು ಅನುಸರಿಸಿ ಖರೀದಿ ಮಾಡಬೇಕು. ಇಲ್ಲದೆ ಹೋದರೆ ಕಠಿಣ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದರು.

ಸಿಪಿಐ ವಿಕಾಸ ಲಮಾಣಿ ಮಾತನಾಡಿ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಆದೇಶವಿದ್ದು, ಸಾರ್ವಜನಿಕರು ನಿಯಮ ಉಲ್ಲಂಘಿಸಬಾರು. ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು.

ಪಪಂ ಮುಖ್ಯಾಧಿಕಾರಿ ಮಲ್ಲೇಶ, ಪಿಎಸ್‌ಐ ನವೀನ ಜಕ್ಕಲಿ, ಕಂದಾಯ ನಿರೀಕ್ಷಕ ಮಾಂತೇಶ ಮುಗದುಮ್, ವರ್ತಕ ಸಂಘದ ಹೊಸೂರು, ಬಸವರಾಜ ಬೊರಶೆಟ್ಟರ, ಪಾಶ್ಚಾಪೂರ, ಬೀದಿ ಬದಿ ವ್ಯಾಪಾರ ಸಂಘದ ಮಾಬುಸಾಬ ಲಕ್ಷ್ಮೇಶ್ವರ, ನಗಾರಿ, ಕೋಳಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version