ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಕ್ರಮಕ್ಕೆ ಗದಗ ಡಿಸಿ ಸೂಚನೆ!

ಗದಗ: ವಾಕರಾರಸಾ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಮತ್ತು ಸಿಬ್ಬಂದಿಗಳು ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕನಿಷ್ಟ ದರದಲ್ಲಿ ಸಾರಿಗೆ ಸೇವೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಸಂಚಾರಕ್ಕೆ ಆದ್ಯತೆ ಮೇರೆಗೆ ಎಲ್ಲ ಮಾರ್ಗಗಳಲ್ಲಿಯೂ ಸಹ ವಾಹನ ಸಂಚರಿಸುವಂತೆ ಹರದಾರಿ ಪರವಾನಿಗೆ ನೀಡುವ ಮೂಲಕ ಸುಗಮ ಸಂಚಾರಕ್ಕೆ ಪ್ರಯತ್ನಿಸುವಂತೆ ತಿಳಿಸಿದರು.

ಇದನ್ನೂ ಓದಿ: ಉತ್ತರಪ್ರಭ ಬಳಗಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.

ವಾಹನಗಳ ಆಸನ ಸಾಮರ್ಥ್ಯಕ್ಕೆ ತಕ್ಕಂತೆ ಸಾರ್ವಜನಿಕರನ್ನು ಕೊಂಡೊಯ್ಯುವಂತೆ ನಿಗಾ ವಹಿಸಬೇಕು. ವಿನಾಕಾರಣ ಗುಂಪುಗೂಡುವುದನ್ನು ತಪ್ಪಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಲ್ದಾಣಗಳಲ್ಲಿ ನೋಡಿಕೊಳ್ಳಬೇಕೆಂದರು.

ಕೆಲವು ವಾಹನ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿ ಬಸ್ ಸಂಚಾರ ಆರಂಭಿಸಿದ್ದಾರೆ. ಕರ್ತವ್ಯನಿರತ ನೌಕರರಿಗೆ ಮುಷ್ಕರ ನಿರತ ನೌಕರರು ಹೆದರಿಸುವುದು, ಧಮಕಿ ಹಾಕುವುದು ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸುವುದನ್ನು ಮಾಡದಿರುವಂತೆ ನಿಗಾ ವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಕರ್ತವ್ಯ ನಿರತ ನೌಕರರಿಗೆ ಸೂಕ್ತ ಬಂದೋಬಸ್ತ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.

ಶಾಂತಿಯುತ ಪ್ರತಿಭಟನೆ ಹಾಗೂ ಮುಷ್ಕರಕ್ಕೆ ಅವಕಾಶವಿದ್ದು ನೌಕರರು ಸಂಸ್ಥೆಯ ಆಸ್ತಿ ಹಾಗೂ ಬಸ್‌ಗಳಿಗೆ ಹಾನಿಯುಂಟು ಮಾಡಬಾರದು. ತಪ್ಪಿತಸ್ಥ ನೌಕರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಸಂಚಾರಿ ನಿರೀಕ್ಷಕ ಮನ್ಸೂಬ್‌ದಾರ್ ಸಭೆಗೆ ಮಾಹಿತಿ ನೀಡುತ್ತಾ ವಿಭಾಗದಲ್ಲಿ 1847 ನೌಕರರ ಪೈಕಿ 412 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 506 ಅನುಸೂಚಿತ ಕಾರ್ಯಾಚರಣೆ ಆಗಮನ ನಿರ್ಗಮನ ಆಗಬೇಕಿತ್ತು. ಪ್ರತಿದಿನ 386 ನಿರ್ಗಮನಗಳ ಪೈಕಿ 215 ನಿರ್ಗಮನಗಳಾಗಿದ್ದು ಇದರಿಂದ ಶೇ.56 ರಷ್ಟು ಕಾರ್ಯಾಚರಣೆಯಾದಂತಾಗಿದೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳಿ ಮಾತನಾಡಿ ಅಗತ್ಯ ಮಾರ್ಗಗಳಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸದ ಮಾರ್ಗಗಳಲ್ಲಿ ಖಾಸಗಿ ವಾಹನಗಳ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಬಾಲಚಂದ್ರ ತೊದಲಬಾಗಿ, ಅಧೀಕ್ಷಕ ದಯಾನಂದ ತಿಳುವಳ್ಳಿ ಇದ್ದರು.

ಇದನ್ನೂ ಓದಿ: ಉತ್ತರಪ್ರಭ ಬಳಗಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.

Exit mobile version